ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯಿಂದಾಗಿ ಉಪ್ಪಿನಂಗಡಿಯಲ್ಲಿ ಎತ್ತರಿಸಿದ ರಸ್ತೆಗಾಗಿ ನಿರ್ಮಿಸಲಾದ ಅಂಡರ್ ಪಾಸ್‌ನಲ್ಲಿ ಪದೇ ಪದೇ ವಾಹನ ಸಂಚಾರಕ್ಕೆ ಅಡೆತಡೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಗುರುವಾರದಂದು ಪುತ್ತೂರು ಸಹಾಯಕ ಕಮಿಷನರ್ ಜುಬಿನ್ ಮಹಾಪಾತ್ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.ಮೇ ೧೫ ರ ಒಳಗಾಗಿ ಸರ್ವೀಸ್ ರಸ್ತೆ ಹಾಗೂ ಒಳಚರಂಡಿ ವ್ಯವಸ್ಥೆಯನ್ನು ಪೂರ್ಣಗೊಳಿಸಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಹೆದ್ದಾರಿ ಅಗಲೀಕರಣದ ಕಾಮಗಾರಿಗೆ ಸಂಬಂಧಿಸಿದಂತೆ ಉಪ್ಪಿನಂಗಡಿಯಲ್ಲಿ ಹೆದ್ದಾರಿಯಲ್ಲಿ ಮಧ್ಯ ಭಾಗದಲ್ಲಿ ಎತ್ತರಿಸಿದ ರಸ್ತೆ ನಿರ್ಮಾಣ ಕಾರ್ಯವೂ ಭರದಿಂದ ನಡೆಯುತ್ತಿದೆ. ಈ ಮಧ್ಯೆ ಉಪ್ಪಿನಂಗಡಿ ಬಸ್ ನಿಲ್ದಾಣಕ್ಕೆ ಸಂಪರ್ಕ ಸಾಧಿಸುವ ರಸ್ತೆಯಲ್ಲಿ ಅಂಡರ್ ಪಾಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇಲ್ಲಿ ಏಕ ಕಾಲಕ್ಕೆ ಘನವಾಹನಗಳು ಆಗಮನ ಮತ್ತು ನಿರ್ಗಮಿಸುವ ವೇಳೆ ಅನೇಕ ಬಾರಿ ವಾಹನ ದಟ್ಟನೆಯುಂಟಾಗಿ ವಾಹನಗಳು ಸಂಚರಿಸಲಾರದೆ ಬ್ಲಾಕ್ ಆಗುತ್ತಿರುತ್ತದೆ.ಬುಧವಾರವೂ ಹೀಗೆ ವಾಹನ ದಟ್ಟಣೆಯಿಂದಾಗಿ ವಾಹನ ಸವಾರರು ಸಾಲುಗಟ್ಟಲೇ ನಿಂತಿದ್ದರು. ಸಮಸ್ಯೆಯ ಗಂಭೀರತೆಯನ್ನು ಗಮನಿಸಿದ ದ.ಕ. ಜಿಲ್ಲಾಧಿಕಾರಿಯವರು, ಪುತ್ತೂರು ಸಹಾಯಕ ಕಮಿಷನರ್‌ಗೆ ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಳ್ಳಬೇಕೆಂದು ನಿರ್ದೇಶನ ನೀಡಿದ್ದರು. ಅದರಂತೆ ಗುರುವಾರ ಸಂಜೆ ಇಲಾಖಾಧಿಕಾರಿಗಳೊಂದಿಗೆ ಉಪ್ಪಿನಂಗಡಿಗೆ ಭೇಟಿ ನೀಡಿದ ಸಹಾಯಕ ಕಮಿಷನರ್ ಜುಬಿನ್ ಮಹಾಪಾತ್ರ, ಎತ್ತರಿಸಿದ ರಸ್ತೆಯ ಎರಡೂ ಪಾರ್ಶ್ವದಲ್ಲಿಯೂ ಮೇ ೧೦ ರ ಒಳಗಾಗಿ ಸರ್ವೀಸ್ ರಸ್ತೆಯ ಕಾರ್ಯವನ್ನು ಪೂರ್ಣಗೊಳಿಸಬೇಕೆಂದೂ, ಈ ಭಾಗದಲ್ಲಿ ನಿರ್ಮಿಸಬೇಕಾಗಿರುವ ದೊಡ್ಡ ಗಾತ್ರದ ಚರಂಡಿಯ ಕಾಮಗಾರಿಯನ್ನು ಮೇ ೧೫ ರ ಒಳಗಾಗಿ ಪೂರ್ಣಗೊಳಿಸಿ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಬೇಕೆಂದು ಎಂಜಿನಿಯರ್‌ಗೆ ನಿರ್ದೇಶಿಸಿದರು. ಈ ಸಂಬಂಧ ಕಾಮಗಾರಿ ಸ್ಥಳದಲ್ಲಿ ಇರುವ ವಿದ್ಯುತ್ ಕಂಬಗಳ ತೆರವಿಗೆ ಮೆಸ್ಕಾಂ ಅಧಿಕಾರಿಗಳಿಗೂ ಸೂಚಿಸಿದರು. ದರ್ಗಾ ತೆರವಾಗದೆ ಕಾಮಗಾರಿಗೆ ಅಡ್ಡಿ: ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಗೆ ಉಪ್ಪಿನಂಗಡಿಯ ಕೂಟೇಲು ಎಂಬಲ್ಲಿ ಹೆದ್ದಾರಿ ಬದಿಯಲ್ಲಿರುವ ದರ್ಗಾದಿಂದ ತಡೆಯಾಗಿದೆ ಎಂದು ಎಂಜಿನಿಯರ್ ತಿಳಿಸಿದರು. ದರ್ಗಾದ ಒಂದಷ್ಟು ಭಾಗವನ್ನು ತೆರವುಗೊಳಿಸಿ ಕೊಡಲಾಗಿದೆ ಎಂದು ಸ್ಥಳೀಯ ಪಂಚಾಯಿತಿ ಸದಸ್ಯರು ವಿವರಿಸಿದರು. ಈ ವೇಳೆ ಹೆದ್ದಾರಿಯಿಂದ ೧೫ ಮೀಟರ್ ತೆರವಾಗಿದೆ. ಆದರೆ ನಮಗೆ ೨೨.೫ ಮೀಟರ್ ಅಗಲದ ಅಗತ್ಯತೆ ಇದೆ ಎಂದು ಎಂಜಿನಿಯರ್‌ಗಳು ಸಹಾಯಕ ಆಯುಕ್ತರಿಗೆ ತಿಳಿಸಿದರು. ಹೆದ್ದಾರಿ ಅಗಲೀಕರಣಕ್ಕೆ ಅಗತ್ಯವಾದ ಭೂಮಿಯನ್ನು ಒದಗಿಸಲು ಇಲಾಖೆಯೊಂದಿಗೆ ಸಹಕರಿಸಬೇಕೆಂದು ಸಹಾಯಕ ಕಮಿಷನರ್ ಸೂಚಿಸಿದರು.
ಈ ವೇಳೆ ಉಪ್ಪಿನಂಗಡಿ ಛೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಪ್ರಶಾಂತ್ ಡಿಕೋಸ್ಟಾ, ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಯೂನಿಕ್ , ಸದಸ್ಯರಾದ ಕೈಲಾರ್ ರಾಜಗೋಪಾಲ ಭಟ್, ನಿತ್ಯಾನಂದ, ಝಕಾರಿಯಾ ಕೊಡಿಪ್ಪಾಡಿ, ಪಂಚಾಯಿತಿ ಸದಸ್ಯ ರಶೀದ್ ಮಠ, ಕೆಎನ್‌ಆರ್ ಸಂಸ್ಥೆಯ ಎಂಜಿನಿಯರ್ ರಘುನಾಥ ರೆಡ್ಡಿ, ಮಹೇಂದ್ರ ಸಿಂಗ್, ಕನ್ಸಲ್ಟೆಂಟ್ ಎಂಜಿನಿಯರ್‌ಗಳಾದ ವಿವೇಕಾನಂದ, ಜಗನ್ನಾಥ್ ಪಟ್ನಾಯಕ್ , ಪಂಚಾಯಿತಿ ಪಿಡಿಒ ವಿಲ್ಫ್ರೆಂಡ್ ಲಾರೆನ್ಸ್ ರೋಡ್ರಿಗಸ್, ಕಂದಾಯ ನಿರೀಕ್ಷಕ ಚಂದು ನಾಯ್ಕ ಮತ್ತಿತರರು ಇದ್ದರು.