ಪಾವಗಡ: ತಾಲೂಕಿನ ನಾಗಲಮಡಿಕೆಯ ಸುಪ್ರಸಿದ್ದ ಅಂತ್ಯ ಸುಬ್ರಹ್ಮಣ್ಯೇಶ್ವರ ದೇವಸ್ಥಾನಕ್ಕೆ ಮಾಜಿ ಸಚಿವ ವೆಂಕಟರಮಣಪ್ಪ ಹಾಗೂ ರಾಜ್ಯ ಸರ್ಕಾರದ ಮುಜರಾಯಿ ಇಲಾಖೆಯ ಆಯುಕ್ತ ಎಂ.ವಿ.ವೆಂಕಟೇಶ್ ಭೇಟಿ ನೀಡಿ ದೇವಸ್ಥಾನದ ಸ್ಥಿತಿಗತಿ ಬಗ್ಗೆ ಪರಿಶೀಲನೆ ನಡೆಸಿದರು.
ದೇವಸ್ಥಾನ ಪರಿಶೀಲಿಸಿದ ಬಳಿಕ ಮುಜರಾಯಿ ಇಲಾಖೆಯ ಆಯುಕ್ತ ಎಂ.ಬಿ. ವೆಂಕಟೇಶ್ ಸುದ್ದಿಗಾರರ ಜತೆ ಮಾತನಾಡಿ ಹಲವು ವರ್ಷಗಳಿಂದ ದೇವಸ್ಥಾನದ ಪುನಶ್ಚೇತನಕ್ಕಾಗಿ ಸ್ಥಳೀಯ ಶಾಸಕರು ಹಾಗೂ ಜನಪರ ಸಂಘಟನೆಯ ಹೋರಾಟಗಾರರು ಸೇರಿದಂತೆ ಅನೇಕರಿಂದ ಮನವಿ ಮಾಡಲಾಗಿತ್ತು. ಅದಾಗಿಯೂ ಕೆಲ ತಿಂಗಳುಗಳ ಹಿಂದೆ ರಾಜ್ಯಮಟ್ಟದ ವಾಸ್ತುಶಿಲ್ಪ ಸಮಿತಿಯಲ್ಲಿ ಇಲ್ಲಿನ ಶ್ರೀಸುಬ್ರಮಣ್ಯಸ್ವಾಮಿ ದೇವಸ್ಥಾನ ಪ್ರಗತಿ ಕುರಿತು ಪೂರ್ವಭಾವಿ ಚರ್ಚೆ ನಡೆಸಲಾಗಿದೆ. ದೇವಸ್ಥಾನದ ಪುನಶ್ಚೇತನ ಅವಶ್ಯಕತೆ ಇದೆ ಎಂದು ಸಮಿತಿ ಮನಗಂಡಿದ್ದು ಈ ಹಿನ್ನೆಲೆಯಲ್ಲಿ ನಾನು ಹಾಗೂ ಶಾಸ್ತ್ರಜ್ಞರು ವಾಸ್ತುಶಿಲ್ಪಿಗಳು ಆಗಮಿಸಿದ್ದೇವೆ. ಸದ್ಯ ಈ ದೇವಸ್ಥಾನಕ್ಕೆ ಸೇರಿರುವ 12 ಎಕರೆ ಜಮೀನಿದೆ ಎಂದು ತಹಸಿಲ್ದಾರ್ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತೊಂದು ಸಭೆ ನಡೆಸಿ ಸಾಧಕ ಬಾಧಕಗಳನ್ನು ಚರ್ಚಿಸಿ ನಿರ್ಣಯಕ್ಕೆ ಬರಲಾಗುವುದು ಎಂದರು.
ಇದೇ ವೇಳೆ ಇಲ್ಲಿನ ರಾಷ್ಟ್ರೀಯ ರೈತ ಸಂಘದ ರಾಜ್ಯಾಧ್ಯಕ್ಷ ವಿ.ನಾಗಭೂಷಣರೆಡ್ಡಿ, ಹಿರಿಯ ಆಗಮ ಪಂಡಿತ ವಿಜಯ್ ಕುಮಾರ್, ವಾಸ್ತುಶಿಲ್ಪ ಸಮಿತಿಯ ಅಧ್ಯಕ್ಷೆ ರಾಜೇಶ್ವರಿ, ತಹಸೀಲ್ದಾರ್ ಡಿ.ಎನ್.ವರದರಾಜು, ದೇವಸ್ಥಾನದ ಇಒ ಸುನೀಲ್ ಕುಮಾರ್, ಪಿಡಬ್ಯೂಡಿ ಎಇಇ ಅನಿಲ್ ಕುಮಾರ್, ನರಸಪ್ಪ, ಕೃಷ್ಣರಾವ್, ಕೆ.ವಿ.ನಾರಾಯಣ್ ರವಿಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.