ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶಿವಮೊಗ್ಗದಿಂದ ಮಂಗಳೂರು ಮತ್ತು ಹುಬ್ಬಳ್ಳಿ ಮಹಾನಗರಗಳಿಗೆ ನೇರ ರೈಲ್ವೆ ಸಂಪರ್ಕ ಕಲ್ಪಿಸುವ ನೂತನ ರೈಲು ಮಾರ್ಗಗಳ ಸಮೀಕ್ಷೆಯನ್ನು ನಡೆಸಿ ಆದಷ್ಟು ಬೇಗನೇ ಕಾಮಗಾರಿಯನ್ನು ಪ್ರಾರಂಭಿಸುವ ಬಗ್ಗೆ ಹುಬ್ಬಳ್ಳಿಯಲ್ಲಿ ಹುಬ್ಬಳ್ಳಿ ನೈರುತ್ಯ ವಲಯದ ರೈಲ್ವೆ ಜನರಲ್ ಮ್ಯಾನೇಜರ್ ಮುಕುಲ್ ಸರಣ್ ಮಾಥೂರ್ ಅವರ ಜತೆ ಸಂಸದ ಬಿ.ವೈ.ರಾಘವೆಂದ್ರ ಚರ್ಚೆ ನಡೆಸಿದರು.ಜಿಲ್ಲೆಯ ಹಾಗೂ ಅಕ್ಕಪಕ್ಕದ ಜಿಲ್ಲೆಗಳ ಸಾರ್ವಜನಿಕರ ಹಿತದೃಷ್ಟಿಯಿಂದ ಈ ಕೆಳಕಂಡ ಯೋಜನೆಗಳನ್ನು ತ್ವರಿತ ಗತಿಯಲ್ಲಿ ಕಾರ್ಯಗತಗೊಳಿಸಲು ವಿನಂತಿಸಿದರು.
ನೈರುತ್ಯ ರೈಲ್ವೆ ವಲಯದ ಜನರಲ್ ಮ್ಯಾನೇಜರ್ ಮುಕುಲ್ ಸರಣ್ ಮಾಥೂರ್ ಸಂಸದ ಬಿ.ವೈ.ರಾಘವೇಂದ್ರ ಅವರ ಈ ಬೇಡಿಕೆಗಳನ್ನು ಕೂಲಂಕಷವಾಗಿ ಆಲಿಸಿ ಪ್ರಥಮ ಆದ್ಯತೆ ಮೇಲೆ ಕಾಮಗಾರಿಗಳನ್ನು ಪ್ರಾರಂಭಿಸುವುದಾಗಿ ಹಾಗೂ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿದರು.ಸಭೆಯಲ್ಲಿ ರೈಲ್ವೆಯ ಇಲಾಖೆಯ ಮುಖ್ಯ ಪ್ರಧಾನ ಎಂಜಿನಿಯರ್ ಸಿ.ಎಂ ಗುಪ್ತಾ, ಮುಖ್ಯ ಕಾರ್ಯಾಚರಣೆ ಅಧಿಕಾರಿ ಪ್ರಶಾಂತ್, ವಿಭಾಗೀಯ ಜನರಲ್ ಮ್ಯಾನೇಜರ್ ಕುಲದೀಪ್, ಡಿ.ಆರ್.ಸಿ ಸದಸ್ಯ ಪೀರ್ ಪಾಷಾ ಹಾಜರಿದ್ದರು.
ಅಭಿವೃದ್ಧಿ ಕಾಮಗಾರಿಗಳು:*ಶಿವಮೊಗ್ಗದಿಂದ ಬೀರೂರಿನವರೆಗೆ ದ್ವಿಪಥ ರೈಲ್ವೆ ಹಳಿಗಳ ಜೋಡಣೆ ಕಾರ್ಯವನ್ನು ಆದಷ್ಟು ಬೇಗನೇ ಪೂರ್ಣಗೊಳಿಸುವುದು.
*ಶಿವಮೊಗ್ಗದ ಕೋಟೆಗಂಗೂರಿನಲ್ಲಿ ನೂತನ ರೈಲ್ವೆ ಕೋಚಿಂಗ್ ಡಿಪೋ ನಿರ್ಮಾಣ ಕಾರ್ಯವು ಭರದಿಂದ ಸಾಗುತ್ತಿದ್ದು, ಕುಡಿಯುವ ನೀರು ಪೂರೈಕೆ, ರೈಲುಗಳ ಸ್ವಚ್ಛತೆಗೆ ಮತ್ತು ಇತ್ಯಾದಿ ಕಾರ್ಯಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸುವುದು.* ಹಾಲಿ ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಇದ್ದ ಗೂಡ್ಸ್ ಶೆಡ್ ಫ್ಲಾಟ್ ಫಾರಂ 4 ಮತ್ತು 5 ನ್ನು ಮುಂದಿನ ದಿನಗಳಲ್ಲಿ ಕೋಟೆಗಂಗೂರಿಗೆ ಸ್ಥಳಾಂತರಿಸಿ, ಫ್ಲಾಟ್ ಫಾರಂ 4 ಮತ್ತು 5 ಅನ್ನು ಪ್ರಯಾಣಿಕ ರೈಲುಗಳ ನಿಲುಗಡೆಗೆ ಅವಕಾಶ ಕಲ್ಪಿಸಿ ನೂತನ ರೈಲುಗಳು ನಿಲ್ಲುವ ಮೂಲಕ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವುದು.
*ಹಾರನಹಳ್ಳಿ ರೈಲ್ವೆ ನಿಲ್ದಾಣದ ಫ್ಲಾಟ್ ಫಾರಂನ್ನು ಅಭಿವೃದ್ಧಿ ಮಾಡುವುದು.*ಜಿಲ್ಲೆಯ ಭದ್ರಾವತಿ ಮತ್ತು ಆನಂದಪುರಂ ರೈಲ್ವೆ ನಿಲ್ದಾಣಗಳನ್ನು ಗತಿಶಕ್ತಿ ಅಮೃತ್ ಭಾರತ್-2 ರಲ್ಲಿ ಕೈಗೆತ್ತಿಕೊಂಡು ಅಭಿವೃದ್ಧಿಪಡಿಸುವುದು
*ಶಿಕಾರಿಪುರದಿಂದ ರಾಣೆಬೆನ್ನೂರಿನ ನೂತನ ರೈಲು ಮಾರ್ಗದ ಟೆಂಡರ್ ಪ್ರಕ್ರಿಯೆಯನ್ನು ತಕ್ಷಣ ಕರೆದು ಕಾಮಗಾರಿ ಚುರುಕುಗೊಳಿಸುವುದು.ಹೊಸ ರೈಲು ಮಾರ್ಗಗಳು
*ಶಿವಮೊಗ್ಗದಿಂದ ಶೃಂಗೇರಿ ಮಾರ್ಗವಾಗಿ ಮಂಗಳೂರಿಗೆ ನೂತನ ರೈಲ್ವೆ ಮಾರ್ಗವನ್ನು ಪ್ರಾರಂಭಿಸಲು ಸಮೀಕ್ಷೆ ಕಾರ್ಯವನ್ನು ತ್ವರಿತಗತಿಯಲ್ಲಿ ನಡೆಸಲು. ಶಿವಮೊಗ್ಗದಿಂದ ಶೃಂಗೇರಿ ಮಾರ್ಗವಾಗಿ ಚಿಕ್ಕಮಗಳೂರು ಮತ್ತು ಹಾಸನಕ್ಕೆ ನೂತನ ರೈಲ್ವೆ ಮಾರ್ಗವನ್ನು ಪ್ರಾರಂಭಿಸಲು ಸಮೀಕ್ಷೆ ಕಾರ್ಯವನ್ನು ತ್ವರಿತಗತಿಯಲ್ಲಿ ಮುಗಿಸುವುದು.*ತಾಳಗುಪ್ಪ-ಸಿದ್ಧಾಪುರ-ಶಿರಸಿ ಮಾರ್ಗವಾಗಿ ಹುಬ್ಬಳ್ಳಿಗೆ ನೂತನ ರೈಲ್ವೆ ಮಾರ್ಗವನ್ನು ಪ್ರಾರಂಭಿಸಲು ಸಮೀಕ್ಷೆ ಕಾರ್ಯವನ್ನು ಶೀಘ್ರ ಪೂರ್ಣ ಮಾಡುವುದು
*ಭದ್ರಾವತಿಯಿಂದ ಚಿಕ್ಕಜಾಜೂರಿಗೆ ನೂತನ ರೈಲ್ವೆ ಮಾರ್ಗವನ್ನು ಪ್ರಾರಂಭಿಸಲು ಸಮೀಕ್ಷೆ ಕಾರ್ಯವನ್ನು ತ್ವರಿತಗತಿಯಲ್ಲಿ ನಡೆಸುವುದು.*ಮಧ್ಯ ಕರ್ನಾಟಕದಿಂದ ಕರಾವಳಿ ಪ್ರದೇಶಕ್ಕೆ ತಾಳಗುಪ್ಪದಿಂದ ಹೊನ್ನಾವರಕ್ಕೆ ಈ ಹಿಂದೆ ಹಳೆ ಮಾರ್ಗವು ಸರ್ವೇಯಾಗಿದ್ದು, ಕೊಂಕಣ ರೈಲ್ವೆ ಸಂಪರ್ಕ ಕಲ್ಪಿಸಲು ಕ್ರಮಕೈಗೊಳ್ಳವುದು.