ಕ್ವಿಂಟಾಲ್‌ 30,000 ತಲುಪಿದತಿಪಟೂರು ಉಂಡೆ ಕೊಬ್ಬರಿ!

KannadaprabhaNewsNetwork |  
Published : Jun 27, 2025, 12:48 AM ISTUpdated : Jun 27, 2025, 10:14 AM IST
ಕ್ವಿಂಟಾಲ್‌ಗೆ ರೂ ೩೦ ಸಾವಿರ ದಾಟಿದ ತಿಪಟೂರು ಉಂಡೆ ಕೊಬ್ಬರಿ ಬೆಲೆ | Kannada Prabha

ಸಾರಾಂಶ

ಏಷ್ಯಾದಲ್ಲಿಯೇ ಅತಿದೊಡ್ಡ ಮಾರುಕಟ್ಟೆ ಎಂದು ಹೆಸರುವಾಸಿಯಾಗಿರುವ ತಿಪಟೂರು ಕೊಬ್ಬರಿ ಮಾರುಕಟ್ಟೆಯಲ್ಲಿನ ಉಂಡೆ ಕೊಬ್ಬರಿ ಬೆಲೆ ಕ್ವಿಂಟಾಲ್‌ಗೆ ₹30,000 ದಾಟಿದ್ದು, ತೆಂಗು ಬೆಳೆಗಾರರಿಗೆ ಸಂತಸ ತಂದಿದೆ.

  ತಿಪಟೂರು :  ಏಷ್ಯಾದಲ್ಲಿಯೇ ಅತಿದೊಡ್ಡ ಮಾರುಕಟ್ಟೆ ಎಂದು ಹೆಸರುವಾಸಿಯಾಗಿರುವ ತಿಪಟೂರು ಕೊಬ್ಬರಿ ಮಾರುಕಟ್ಟೆಯಲ್ಲಿನ ಉಂಡೆ ಕೊಬ್ಬರಿ ಬೆಲೆ ಕ್ವಿಂಟಾಲ್‌ಗೆ ₹30,000 ದಾಟಿದ್ದು, ತೆಂಗು ಬೆಳೆಗಾರರಿಗೆ ಸಂತಸ ತಂದಿದೆ.

ಗುರುವಾರದ ಹರಾಜಿನಲ್ಲಿ ಕ್ವಿಂಟಾಲ್ ಕೊಬ್ಬರಿ ಬೆಲೆ ಗರಿಷ್ಟ ₹29,106ಕ್ಕೆ ಟೆಂಡರ್ ಆಗಿದ್ದು, ಸಂಜೆಯ ವೇಳೆಗೆ ₹30,000 ದಾಟಿದೆ. ಕಳೆದ ಸೋಮವಾರ ನಡೆದ ಹರಾಜಿನಿಂದ ಕೇವಲ ನಾಲ್ಕೇ ದಿನದಲ್ಲಿ ಬೆಲೆ ₹3 ಸಾವಿರದಷ್ಟು ಜಿಗಿದಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಕ್ವಿಂಟಾಲ್ ಕೊಬ್ಬರಿ ಬೆಲೆ ಕೇವಲ ₹9 ಸಾವಿರದ ಆಸುಪಾಸಿನಲ್ಲಿತ್ತು.

ತಿಪಟೂರು ಕೊಬ್ಬರಿ ಹೆಚ್ಚಿನ ಸಿಹಿ ಹಾಗೂ ಉತ್ತಮ ಗುಣಮಟ್ಟದ ಎಣ್ಣೆ ಅಂಶಗಳನ್ನೊಳಗೊಂಡಿದೆ. ಮುಂಬರುವ ಶ್ರಾವಣ ಮಾಸದಲ್ಲಿ ಸಾಲು, ಸಾಲು ಹಬ್ಬ, ಶುಭ ಸಮಾರಂಭಗಳು, ಕಾರ್ಯಕ್ರಮಗಳು ಪ್ರಾರಂಭವಾಗುವುದರಿಂದ ಇಲ್ಲಿನ ಕೊಬ್ಬರಿಗೆ ಮತ್ತಷ್ಟು ಬೇಡಿಕೆ ಬರುವ ನಿರೀಕ್ಷೆಯಿದೆ. ಹೀಗಾಗಿ, ಮುಂದಿನ ಕೆಲವೇ ವಾರಗಳಲ್ಲಿ ಕ್ವಿಂಟಾಲ್ ಬೆಲೆ ₹35 ರಿಂದ ₹40 ಸಾವಿರ ತಲುಪುವ ಆಶಾಭಾವ ರೈತರದು.

ಇತ್ತೀಚಿನ ವರ್ಷಗಳಲ್ಲಿ ಕೊಬ್ಬರಿ ಎಣ್ಣೆ ದಿನನಿತ್ಯದ ಅಡುಗೆ, ಖಾದ್ಯ ತಯಾರಿಸಲು ಹೆಚ್ಚೆಚ್ಚು ಬಳಕೆಯಾಗುತ್ತಿದೆ. ತಮಿಳುನಾಡು, ಆಂಧ್ರ, ಕೇರಳ ಮತ್ತಿತರ ತೆಂಗು ಬೆಳೆಯುವ ಪ್ರದೇಶಗಳಲ್ಲಿ ತೆಂಗಿನ ಮರಗಳಿಗೆ ನಾನಾ ರೋಗ ರುಜಿನಗಳು ಅಂಟಿಕೊಂಡಿದ್ದು, ತೆಂಗಿನಕಾಯಿಗಳ ಇಳುವರಿ ಕುಸಿತ ಕಂಡಿದೆ. ಕಳೆದೊಂದು ವರ್ಷದಿಂದ ಎಳನೀರು ಮತ್ತು ತೆಂಗಿನಕಾಯಿಗಳಿಗೆ ಉತ್ತಮ ಬೆಲೆ ಬಂದ ಕಾರಣ, ಹೆಚ್ಚಿನ ರೈತರು ತೆಂಗಿನ ಕಾಯಿ ಮತ್ತು ಎಳನೀರು ಮಾರಾಟ ಮಾಡಲು ಮುಂದಾಗಿದ್ದಾರೆ. ಹೀಗಾಗಿ, ಕೊಬ್ಬರಿ ದಾಸ್ತಾನು ಕಡಿಮೆಯಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ