ಕುಷ್ಟಗಿ: ಮದ್ಯಪಾನ ವ್ಯಕ್ತಿಯ ಆರೋಗ್ಯ, ಕುಟುಂಬ ಮತ್ತು ಸಾಮಾಜಿಕ ಬದುಕನ್ನು ಹಾಳು ಮಾಡುವ ದುಶ್ಚಟವಾಗಿದ್ದು, ಅದನ್ನು ತ್ಯಜಿಸಿ ನೆಮ್ಮದಿಯ ಜೀವನ ನಡೆಸಬೇಕು ಎಂದು ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯ ಜೀವನಸಾಬ್ ಬಿನ್ನಾಳ ಕರೆ ನೀಡಿದರು.
ಉತ್ತರ ಕರ್ನಾಟಕದ ವಿಶಿಷ್ಟ ಜಾನಪದ ಶೈಲಿಯಲ್ಲಿ ಮದ್ಯಪಾನದ ದುಷ್ಪರಿಣಾಮ ಬಿಂಬಿಸುವ ಹಾಸ್ಯಭರಿತ ಹಾಗೂ ಭಾವನಾತ್ಮಕ ಹಾಡುಗಳ ಮೂಲಕ ಶಿಬಿರಾರ್ಥಿಗಳ ಮನಮುಟ್ಟುವ ಪ್ರಯತ್ನ ನಡೆಸಿದರು. ಕುಡುಕ ಗಂಡ, ಅಂತಾರ ಕುಡುಕ ಕುಡುಕ, ಕುಡುಕ ಗಂಡನಿಗೆ ಕೊಡಬ್ಯಾಡ ಹಡೆದವ್ವ, ಕೊಟ್ಟಾರ ಕುಡುಕನಂತ ಗಂಡನಿಗೆ, ಕುಡುಕ ತಂದೆಗೆ ಮಗಳಾಗಿ ಹುಟ್ಟಿ ನಾ ತಪ್ಪು ಮಾಡಿದೆ, ಹೆಂಡ ಕುಡಿಬ್ಯಾಡೂ ಯಪ್ಪ ಸೇರಿದಂತೆ ಅನೇಕ ಜನಪ್ರಿಯ ಜಾನಪದ ಗೀತೆ ಹಾಡಿ ಮದ್ಯದ ಚಟದಿಂದ ಪತ್ನಿ,ಮಕ್ಕಳು, ತಂದೆ-ತಾಯಿ ಅನುಭವಿಸುವ ನೋವು ಹಾಗೂ ಸಮಾಜದಲ್ಲಿ ಕುಡುಕನಿಗೆ ಎದುರಾಗುವ ಅವಮಾನ ಮನೋಜ್ಞವಾಗಿ ಚಿತ್ರಿಸಿದರು.
ಮದ್ಯಪಾನ ಮಾಡುವ ವ್ಯಕ್ತಿಗೆ ಸಮಾಜದಲ್ಲಿ ಗೌರವ ಸಿಗುವುದಿಲ್ಲ. ಕುಟುಂಬದ ನೆಮ್ಮದಿ, ಮಕ್ಕಳ ಭವಿಷ್ಯ ಮತ್ತು ವೈಯಕ್ತಿಕ ಆರೋಗ್ಯಕ್ಕಾಗಿ ಕುಡಿತ ತ್ಯಜಿಸಿ ಉತ್ತಮ ಬದುಕಿನತ್ತ ಹೆಜ್ಜೆ ಇಡಬೇಕು ಎಂದು ಶಿಬಿರಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.ಸಿಪಿಐ ವಿಶ್ವನಾಥ ಹಿರೇಗೌಡ್ರು ಮಾತನಾಡಿ, ಜನರು ಆರ್ಥಿಕವಾಗಿ ಸದೃಢರಾಗಬೇಕಾದರೆ ಮದ್ಯಪಾನದಂತಹ ದುಶ್ಚಟಗಳಿಂದ ದೂರವಿರಬೇಕು. ಕುಡಿತದಿಂದ ಕುಟುಂಬದ ನೆಮ್ಮದಿ ಹಾಳಾಗುವುದರ ಜತೆಗೆ ವ್ಯಕ್ತಿಯ ಸಾಮಾಜಿಕ ಗೌರವ ಕಳೆದುಹೋಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ದೃಢ ಸಂಕಲ್ಪ ಮಾಡಿ ಮದ್ಯ ತ್ಯಜಿಸಿ ಕುಟುಂಬಕ್ಕೆ ಒಳ್ಳೆಯ ಮಗನಾಗಿ, ಸಮಾಜಕ್ಕೆ ಆದರ್ಶ ಪ್ರಜೆಯಾಗಬೇಕು ಎಂದು ಕರೆ ನೀಡಿದರು.
ಹಾಡುಗಳಲ್ಲೇ ಮೂಡಿತು ಹೊಸ ಬದುಕಿನ ಸಂಕಲ್ಪ