ಕುಡಿತ ಬಿಟ್ಟು ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬಾಳಿ

KannadaprabhaNewsNetwork | Published : Jun 17, 2024 1:36 AM

ಸಾರಾಂಶ

ಮದ್ಯ ವ್ಯಸನಿಗಳು ವ್ಯಸನಮುಕ್ತರಾಗುವ ಮೂಲಕ ಶಿಬಿರ ಸಾರ್ಥಕವಾಗಬೇಕೆಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಾಗಲಕೋಟೆ ಜಿಲ್ಲಾ ನಿರ್ದೇಶಕ ಕೃಷ್ಣ ಟಿ. ಹೇಳಿದರು.

ಕನ್ನಡಪ್ರಭ ವಾರ್ತೆ ಅಮೀನಗಡ

ಮಾನಸಿಕ ಹಾಗೂ ದೈಹಿಕ ಚಿಕಿತ್ಸೆಯಿಂದ ಶಿಬಿರಾರ್ಥಿಗಳಲ್ಲಿ ಹೊಸ ಚೈತನ್ಯ ಮೂಡಿದೆ. ಮದ್ಯ ವ್ಯಸನಿಗಳು ವ್ಯಸನಮುಕ್ತರಾಗುವ ಮೂಲಕ ಶಿಬಿರ ಸಾರ್ಥಕವಾಗಬೇಕೆಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಾಗಲಕೋಟೆ ಜಿಲ್ಲಾ ನಿರ್ದೇಶಕ ಕೃಷ್ಣ ಟಿ. ಹೇಳಿದರು.

ಪಟ್ಟಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಒಂದು ವಾರಗಳ ಕಾಲ ಹಮ್ಮಿಕೊಂಡಿದ್ದ 1798ನೇ ಮದ್ಯವರ್ಜನ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಚಟವೆನ್ನುವುದು ಒಂದು ರೀತಿಯ ಅಂಟುರೋಗ. ಒಂದು ಬಾರಿ ಅದಕ್ಕೆ ಅಂಟಿಕೊಂಡರೆ ಅದು ನಿಮ್ಮ ನಂಟನ್ನು ಬಿಡುವುದಿಲ್ಲ. ಇಲ್ಲಿಗೆ ಬಂದಿರುವ ಶಿಬಿರಾರ್ಥಿಗಳಿಗೆ ಪ್ರತಿನಿತ್ಯದ ಚಟುವಟಿಕೆಗಳ ಮೂಲಕ ಮದ್ಯ ವ್ಯಸನದಿಂದ ದೂರ ಮಾಡಲಾಗಿದೆ. ಶಿಬಿರಾರ್ಥಿಗಳು ತಮ್ಮ ಕೌಟುಂಬಿಕ ಘನತೆ, ಗೌರವ, ಜವಾಬ್ದಾರಿಯಿಂದ ಕುಟುಂಬ ನಿರ್ವಹಿಸಿ ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬಾಳುವ ಮೂಲಕ ಶಿಬಿರದ ಸಾರ್ಥಕತೆ ಪಡೆಯಬೇಕು. ಇನ್ನೊಬ್ಬರಿಗೆ ಮಾದರಿಯಾಗುವಂತೆ ಜೀವನ ನಡೆಸಬೇಕು. ಭಾರತೀಯ ಪರಂಪರೆ, ಸಂಸ್ಕೃತಿ ಅನಾವರಣಗೊಳಿಸುವ ಮೂಲಕ ಶಿಬಿರದ ಕೊನೆಯ ದಿನ ಕುಟುಂಬದ ದಿನವನ್ನಾಗಿ ಆಚರಿಸುವುದು ಅರ್ಥಪೂರ್ಣ. ಬದುಕಿನಲ್ಲಿ ಸಾವಧಾನ ಹಾಗೂ ಸಮಾಧಾನ ಅತ್ಯಗತ್ಯ. ಅಮೀನಗಡದಲ್ಲಿ ಜರುಗಿದ ಮದ್ಯವರ್ಜನ ಶಿಬಿರ ಶೇ.100ರಷ್ಟು ಯಶಸ್ವಿಯಾಗಿರುವುದಕ್ಕೆ ಪಟ್ಟಣದ ವಿವಿಧ ಗಣ್ಯರು, ಸ್ವಯಂಸೇವಕರು, ಕಾರ್ಯಕರ್ತರು, ದಾನಿಗಳ ಸಹಕಾರವೇ ಕಾರಣ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಮದ್ಯ ವರ್ಜನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ, ನಿವೃತ್ತ ಉಪನ್ಯಾಸಕ ಅಶೋಕ ಚಿಕ್ಕಗಡೆ ಮಾತನಾಡಿ, ಪಟ್ಟಣದಲ್ಲಿ ಮದ್ಯ ವ್ಯಸನಿಗಳ ಬದುಕನ್ನು ಅರ್ಥಪೂರ್ಣಗೊಳಿಸುವ ಶ್ರೀಕ್ಷೇತ್ರ ಧರ್ಮಸ್ಥಳ ಯೋಜನಾ ಟ್ರಸ್ಟ್ ಶಿಬಿರ ಅರ್ಥಪೂರ್ಣವಾಗಿದ್ದು, ಶಿಬಿರಾರ್ಥಿಗಳು ಮದ್ಯವ್ಯಸನದಿಂದ ದೂರಾಗಿ ಮುಂದಿನ ಜೀವನವನ್ನು ಅರ್ಥಪೂರ್ಣವಾಗಿ ಬದುಕಿ ತೋರಿಸಿ, ಇತರರಿಗೂ ಮಾದರಿಯಾದರೆ ನಮ್ಮ ಶ್ರಮ ಸಾರ್ಥಕವಾಗುತ್ತದೆ ಎಂದರು.

ಪ್ರಾದೇಶಿಕ ಯೋಜನಾಧಿಕಾರಿ ನಾಗೇಶ ವೈ. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅತಿಥಿಗಳಾಗಿ ಶಿವಕುಮಾರ ಹಿರೇಮಠ, ಜಗದೀಶ ಬಿಸಲದಿನ್ನಿ ಮಾತನಾಡಿದರು. ಶಿಬಿರಾರ್ಥಿಗಳಾದ ರಮೇಶ, ಲಕ್ಷ್ಮೀಬಾಯಿ ರಂಜಣಗಿ ಅನಿಸಿಕೆ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಯೋಗಗುರು ಸಂಗಮೇಶ ಗಂಟಿ, ನಂದಪ್ಪ ಭದ್ರಶೆಟ್ಟಿ, ಸಿದ್ದಣ್ಣ ರಾಂಪುರ, ಅಜಮೀರ್‌ ಮುಲ್ಲಾ, ವಿಜಯಕುಮಾರ ಕನ್ನೂರ, ಬಾಬು ಛಬ್ಬಿ, ವಿಜಯಲಕ್ಷ್ಮೀ ತತ್ರಾಣಿ, ಶ್ರೀಶೈಲ ತತ್ರಾಣಿ ಮುಂತಾದವರಿದ್ದರು. ಕ್ಷೇತ್ರ ಯೋಜನಾಧಿಕಾರಿ ಸಂತೋಷ ಸ್ವಾಗತಿಸಿ, ನಿರೂಪಿಸಿದರು.

Share this article