ಕನ್ನಡಪ್ರಭ ವಾರ್ತೆ, ತುಮಕೂರುಹೊಸ ಶಿಕ್ಷಣ ನೀತಿ 2020 ಬಂದ ನಂತರ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿದ್ದು, ಈ ಬದಲಾವಣೆಗೆ ಅಗತ್ಯ ತಯಾರಿ ಮಾಡಿಕೊಂಡರಷ್ಟೇ ಸವಾಲುಗಳನ್ನು ಎದುರಿಸಿ, ನಿಲ್ಲಲ್ಲು ಸಾಧ್ಯ ಎಂದು ಬೆಂಗಳೂರು ವಿವಿ ಅರ್ಥಶಾಸ್ತ್ರ ವಿಭಾಗದ ಅಧ್ಯಕ್ಷ ಪ್ರೊ.ಎಸ್.ಆರ್.ಕೇಶವ್ ಅಭಿಪ್ರಾಯಪಟ್ಟಿದ್ದಾರೆ.ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸರಕಾರಿ ಸಂಜೆ ಪ್ರಥಮ ದರ್ಜೆ ಕಾಲೇಜು ವತಿಯಿಂದ ಆಯೋಜಿಸಿದ್ದ 2024-25ನೇ ಸಾಲಿನ ಸಾಂಸ್ಕೃತಿಕ ಕ್ರೀಡೆ, ಎನ್.ಎಸ್.ಎಸ್, ಸೇರಿದಂತೆ ವಿವಿಧ ಘಟಕಗಳ ಚಟುವಟಿಕೆಗಳ ಸಂಭ್ರಮ-2024 ಹಾಗೂ ಸ್ವಾಗತ ಸಮಾರಂಭದಲ್ಲಿ ಮಾತನಾಡಿದರು. ತಂತ್ರಜ್ಞಾನದ ಬಳಕೆಯಿಂದ ಗುತ್ತಿಗೆದಾರ, ಆಡಿಟರ್ ಸೇರಿದಂತೆ ಸುಮಾರು ೪೦ರಷು ಹುದ್ದೆಗಳು ತನ್ನ ಅಸ್ಥಿತ್ವ ಕಳೆದುಕೊಳ್ಳಲಿವೆ. ಮುಂದಿನ ಮೂರು ವರ್ಷದ ನಂತರ ಪದವಿ ಪಡೆದ ಬರುವ ನೀವುಗಳು, ಈ ಸವಾಲನ್ನು ಸ್ವೀಕರಿಸಲು ಅಗತ್ಯವಿರುವ ತಯಾರಿ ಮಾಡಿಕೊಂಡರೆ ಮಾತ್ರ ಪೈಪೋಟಿಯುತ ಜಗತ್ತಿನಲ್ಲಿ ಉಳಿಯಲು ಸಾಧ್ಯ. ಹಾಗಾಗಿ ಈಗಿನಿಂದಲೇ ತಯಾರಿ ನಡೆಸಿ ಎಂದು ಸಲಹೆ ನೀಡಿದರು.ಹೊಸ ಶಿಕ್ಷಣ ನೀತಿ ಬಂದ ನಂತರ ಪಠ್ಯ ಮತ್ತು ಪಠ್ಯೇತರದ ನಡುವಿನ ಅಂತರ ಕುಸಿದಿದೆ. ಎರಡು ಒಂದೇ ಎನ್ನುವ ಮಟ್ಟಕ್ಕೆ ಬಂದು ನಿಂತಿದೆ. ಹೊಟ್ಟೆಯ ಹಸಿವಿನ ಬಗ್ಗೆ ನಮಗೆ ತಿಳಿಯುತ್ತದೆ. ಆದರೆ ಮೆದುಳಿನ ಹಸಿವಿನ ಅರಿವು ನಮಗೆ ಇರುವುದಿಲ್ಲ. ನಾವು ಸಾಧ್ಯವಾದಷ್ಟು ಮೆದುಳಿನ ಹಸಿವನ್ನು ತುಂಬಿಸುವ ಕಡೆಗೆ ಹೆಚ್ಚಿನ ಗಮನಹರಿಸಬೇಕಿದೆ ಎಂದರು. ಇಂದು ನಾನು ಏನಾಗಿದ್ದೇನೆ, ಏನಾಗಬಹುದಿತ್ತು ಎಂಬುದನ್ನು ಪದೆ ಪದೇ ಕೇಳಿಕೊಳ್ಳಬೇಕಾಗಿದೆ. ನನ್ನ ಸಾಮರ್ಥ್ಯಕ್ಕೆ ತಕ್ಕದಾಗಿ ನಾನು ಕಲಿಯುತಿದ್ದೇನೆಯೇ ಎಂಬ ಪ್ರಶ್ನೆಯನ್ನು ಹಾಕಿಕೊಳ್ಳಬೇಕಾಗಿದೆ. ಸ್ಟೂಡೆಂಟ್ ಲೈಫ್ ಈಸ್ ಗೋಲ್ಡನ್ ಲೈಫ್ ಎನ್ನುವ ಮಾತಿದೆ. ಆದರೆ ನಾವು ಸರಿಯಾಗಿ ಪ್ಲಾನ್ ಮಾಡಿದಾಗ ಮಾತ್ರ ಆ ಮಾತು ನಿಜವಾಗುತ್ತದೆ. ಎಲ್ಲದಕ್ಕೂ ಮಾರ್ಕೆಟ್ ಇದೆ. ಆದರೆ ಅದನ್ನು ಯಾವ ರೀತಿಯಲ್ಲಿ ಬಳಕೆ ಮಾಡಬೇಕು ಎಂಬುದನ್ನು ನೀವು ಕಾಲೇಜಿನಲ್ಲಿ ಕಲಿಯಬೇಕಾಗಿದೆ ಎಂದು ನುಡಿದರು.