ನಾರಾಯಣ ಮಾಯಾಚಾರಿ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳರಾಜ್ಯ ರಾಜಕಾರಣದಲ್ಲಿ ಪಕ್ಷ ನಿಷ್ಠೆ, ಸೌಮ್ಯ ಸ್ವಭಾವ ಹಾಗೂ ಅಚಲ ಪ್ರಾಮಾಣಿಕತೆಗೆ ಹೆಸರಾದ ಮುದ್ದೇಬಿಹಾಳದ ಹಿರಿಯ ಶಾಸಕ ಎ.ಎಸ್. ನಾಡಗೌಡ (ಅಪ್ಪಾಜಿ ನಾಡಗೌಡ) ಅವರಿಗೆ ಸಂಪುಟದಲ್ಲಿ ಸ್ಥಾನ ಸಿಗದಿರುವುದು ಕೇವಲ ವೈಯಕ್ತಿಕ ವಿಚಾರವಾಗಿ ಉಳಿದಿಲ್ಲ. ಇದು ರಾಜ್ಯದ ಮೂಲೆ ಮೂಲೆಗಳಲ್ಲಿರುವ ಹತ್ತಾರು ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಜಾತ್ಯತೀತ ಮನಸಿನ ಪ್ರಮುಖರ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ದಶಕಗಳಿಂದ ಪಕ್ಷದ ತಳಮಟ್ಟದ ಸಂಘಟನೆಗೆ ಶ್ರಮಿಸಿದ ನಾಯಕನಿಗೆ ಸೂಕ್ತ ಮನ್ನಣೆ ಸಿಗದಿರುವುದರ ಹಿಂದೆ ದೊಡ್ಡ ರಾಜಕೀಯ ಷಡ್ಯಂತ್ರಗಳು ಅಡಗಿವೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
ಹಿರಿಯ ಶಾಸಕನಾಡಗೌಡರಿಗೆ ಮಂತ್ರಿ ಭಾಗ್ಯ ಕೈತಪ್ಪಲು ಬಣ ರಾಜಕಾರಣ ಮತ್ತು ವ್ಯಕ್ತಿಪೂಜೆಯಿಂದ ಅವರು ದೂರ ಇರುವುದೇ ಪ್ರಮುಖ ಕಾರಣ ಎಂಬ ಚರ್ಚೆಗಳು ಆರಂಭವಾಗಿವೆ. ೧೯೮೧ರಿಂದಲೂ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿ ವಿವಿಧ ಜವಾಬ್ದಾರಿ ನಿಭಾಯಿಸಿಕೊಂಡು ಬಂದಿರುವ ಅವರು, ಅಂದಿನ ಹೈಕಮಾಂಡ್ ಸಂಸ್ಕೃತಿಗೆ ತಕ್ಕಂತೆ ಬದುಕಿದರೇ ವಿನಃ ಇಂದಿನ ರಾಜಕೀಯ ಮಾರುಕಟ್ಟೆಯ ಒಳಮರ್ಮಗಳಿಗೆ ಒಗ್ಗಿಕೊಂಡವರಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿರುವಂತೆ, ಸಚಿವ ಸ್ಥಾನಕ್ಕೆ ಅರ್ಹತೆ ಬದಿಗಿಟ್ಟು ಹಣಬಲ ಹಾಗೂ ಶಿಫಾರಸು ಸಂಸ್ಕೃತಿ ಪ್ರಭಾವ ಬೀರುತ್ತಿರುವುದು ಕನ್ನಡಿಯಷ್ಟೇ ಸ್ಪಷ್ಟವಾಗಿದೆ.ವಿಜಯಪುರ ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಅತ್ಯಂತ ಹಿರಿಯ ಶಾಸಕರಾಗಿ ಸುದೀರ್ಘ ಅನುಭವವಿದ್ದರೂ, ಸಚಿವ ಸ್ಥಾನ ನೀಡದಿರುವುದು ತಳಮಟ್ಟದ ಕಾರ್ಯಕರ್ತರಲ್ಲಿ ತೀವ್ರ ನಿರಾಶೆ ಮೂಡಿಸಿದೆ. ೨೦೧೩ ಹಾಗೂ ೨೦೨೩ರಲ್ಲಿ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಾಡಗೌಡರಿಗೆ ಸಚಿವ ಸ್ಥಾನ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಆ ಮಾತು ಉಳಿಸಿಕೊಳ್ಳದಿರುವುದು ಹಾಗೂ ಪ್ರಮುಖ ನಾಯಕರು ಕೊಟ್ಟ ಭರವಸೆಗಳು ಹುಸಿಯಾಗಿರುವುದು ವಚನಭ್ರಷ್ಟತೆಗೆ ನಿದರ್ಶನವಾಗಿದೆ.
ಈ ಅನ್ಯಾಯ ಖಂಡಿಸಿ ಮುದ್ದೇಬಿಹಾಳ ಮತಕ್ಷೇತ್ರದ ಸಮಸ್ತ ಕಾರ್ಯಕರ್ತರು, ಪಕ್ಷಾತೀತವಾಗಿ ವಿವಿಧ ವರ್ಗಗಳ ಮುಖಂಡರು, ಗಣ್ಯ ಉದ್ಯಮಿಗಳು ಹಾಗೂ ಸಾಹಿತಿಗಳು ಐತಿಹಾಸಿಕ ಹೋರಾಟ ನಡೆಸಿದರು. ಮುದ್ದೇಬಿಹಾಳ ಬಂದ್‌ಗೆ ಕರೆ ನೀಡುವುದರ ಜತೆಗೆ, ಬೆಂಗಳೂರಿಗೆ ಬೃಹತ್ ನಿಯೋಗ ತೆರಳಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರೂ ಸಹ, ಕೊನೆ ಕ್ಷಣದಲ್ಲಿ ಮಂತ್ರಿ ಸ್ಥಾನ ತಪ್ಪಿಹೋಗಿರುವುದು ಕ್ಷೇತ್ರದ ಜನತೆಗೆ ಮರುಕ ಹಾಗೂ ಆಕ್ರೋಶ ತಂದಿದೆ.
೨೦೧೮ರ ವಿಧಾನಸಭೆ ಚುನಾವಣೆಯಲ್ಲಿ ನಾಡಗೌಡರನ್ನು ವ್ಯವಸ್ಥಿತವಾಗಿ ಸೋಲಿಸಲು ವಾಮಮಾರ್ಗದ ಮೂಲಕ ಸಂಚು ರೂಪಿಸಲಾಗಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿದ್ದವು. ಇವೆಲ್ಲವನ್ನು ಗಮನಿಸಿದಾಗ, ಪ್ರಾಮಾಣಿಕ ನಾಯಕರಿಗೆ ಎಸಗುತ್ತಿರುವ ಈ ವ್ಯವಸ್ಥಿತ ನಿರ್ಲಕ್ಷ್ಯ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಗ್ರಾಮೀಣ ಮಟ್ಟದಲ್ಲಿ ಭಾರೀ ನಷ್ಟ ಉಂಟು ಮಾಡುವುದರಲ್ಲಿ ಸಂಶಯವಿಲ್ಲ. ಹೈಕಮಾಂಡ್ ಇನ್ನು ಮುಂದೆಯಾದರೂ ಎಚ್ಚೆತ್ತುಕೊಂಡು ನಿಷ್ಠಾವಂತರಿಗೆ ಸೂಕ್ತ ಸ್ಥಾನಮಾನ ನೀಡುತ್ತದೆಯೇ? ಅಥವಾ ಹಿರಿಯರನ್ನು ಕಡೆಗಣಿಸುವ ಈ ಅನ್ಯಾಯದ ಪರಂಪರೆ ಮುಂದುವರೆಯಲಿದೆಯೇ? ಎಂಬುದು ಸದ್ಯದ ಯಕ್ಷಪ್ರಶ್ನೆಯಾಗಿದೆ. ಪಕ್ಷದಲ್ಲಿ ನಿಷ್ಠೆ ಹಾಗೂ ಪ್ರಾಮಾಣಿಕತೆಗೆ ಬೆಲೆ ಇಲ್ಲದಂತಾದರೆ, ಅದು ಪ್ರಜಾಪ್ರಭುತ್ವದ ಆರೋಗ್ಯಕರ ಬೆಳವಣಿಗೆಗೆ ಮಾರಕವಾಗಲಿದೆ.