ಮನ್ಮುಲ್‌ನಲ್ಲಿ ನಡೆದಿರುವ ಹಾಲಿನ ಪುಡಿ ಕಲಬೆರಕೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಹಾಗೂ ಮೈಷುಗರ್‌ನಲ್ಲಿ ರೈತರಿಗೆ ಕೊಡಬೇಕಾದ ಬಾಕಿ ಹಣವನ್ನು ತಕ್ಷಣ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಕನ್ನಡ ಸೇನೆ ಹಾಗೂ ರಾಜ್ಯ ರೈತ ಸಂಘದ ಕಾರ್‍ಯಕರ್ತರಿಂದ ಮಂಡ್ಯ ನಗರದಲ್ಲಿ ಪ್ರತಿಭಟನೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಮನ್ಮುಲ್‌ನಲ್ಲಿ ನಡೆದಿರುವ ಹಾಲಿನ ಪುಡಿ ಕಲಬೆರಕೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಹಾಗೂ ಮೈಷುಗರ್‌ನಲ್ಲಿ ರೈತರಿಗೆ ಕೊಡಬೇಕಾದ ಬಾಕಿ ಹಣವನ್ನು ತಕ್ಷಣ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಕನ್ನಡ ಸೇನೆ ಹಾಗೂ ರಾಜ್ಯ ರೈತ ಸಂಘದ ಕಾರ್‍ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಸೇರಿದ ಪ್ರತಿಭಟನಾಕಾರರು, ಜಿಲ್ಲಾ ಹಾಲು ಒಕ್ಕೂಟದಲ್ಲಿ ಒಂದಾದ ಮೇಲೆ ಒಂದರಂತೆ ಪ್ರಕರಣಗಳು ನಡೆಯುತ್ತಿವೆ. ಆದರೂ ಯಾವುದೇ ಕಠಿಣ ಕ್ರಮಗಳಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆ ಹಾಲು-ನೀರು ಮತ್ತು ನೇಮಕಾತಿ ಪ್ರಕರಣಗಳು ನಡೆದಿದೆ. ಈಗ ಹಾಲಿನ ಪುಡಿ ಕಲಬೆರಕೆ ಪ್ರಕರಣ ಬೆಳೆಕಿಗೆ ಬಂದಿದೆ. ಕೂಡಲೇ ಈ ಎಲ್ಲಾ ಪ್ರಕರಣಗಳ ಸತ್ಯಾಸತ್ಯತೆ ಹೊರಬರಬೇಕಾದರೆ ಸಿಬಿಐ ತನಿಖೆ ಮಾತ್ರ ಸಾಧ್ಯ ಒತ್ತಾಯಿಸಿದರು.ಹಾಲಿನ ಪುಡಿ ಕಲಬೆರಕೆ ಪ್ರಕರಣವು ರೈತರು ಮತ್ತು ಜನರ ನಂಬಿಕೆಗೆ ದ್ರೋಹ ಬಗೆದಂತಾಗಿದೆ. ಇದರ ಜೊತೆಯಲ್ಲಿ ಜನರ ನಂಬಿಕೆಗೆ ಧಕ್ಕೆ ಬಂದಿದೆ. ಪೊಲೀಸರ ತನಿಖೆ ಪಾರದರ್ಶಕವಾಗಿ ನಡೆಯುತ್ತಿಲ್ಲ. ಹೀಗಾಗಿ ಪ್ರಕರಣವನ್ನು ಸಿಬಿಐ ತನಿಖೆ ನಡೆಸಿ ಜಿಲ್ಲೆಯ ರೈತರಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.
ಕಲಬೆರಕೆ ಆಗಿರುವ 57 ಟನ್ ಹಾಗೂ ನಾಪತ್ತೆಯಾಗಿರುವ 55 ಹಾಲಿನ ಪುಡಿ ಮೌಲ್ಯವು ಒಟ್ಟು 100 ಕೋಟಿ ರು. ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಬಿಂಬಿಸಲಾಗಿದೆ. ಇಷ್ಟು ದೊಡ್ಡ ಅಕ್ರಮದ ಬಗ್ಗೆ ನ್ಯಾಯ ದೊರಕಬೇಕಾದರೆ ನಮ್ಮ ಆಗ್ರಹಕ್ಕೆ ಸರ್ಕಾರ ಸ್ಪಂದಿಸಬೇಕು. ಇದರ ಜೊತೆಯಲ್ಲಿ ಮೈಷುಗರ್ ಕಾರ್ಖಾನೆ ರೈತರಿಗೆ ಕೊಡಬೇಕಾದ ಬಾಕಿ ಹಣ ತಕ್ಷಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.ಮೈಷುಗರ್‌ನಲ್ಲಿ ನಡೆದಿರುವ ಅವ್ಯವಹಾರ ಪ್ರಕರಣವನ್ನು ಉನ್ನತ ತನಿಖೆ ನಡೆಸಿ ಮಂಡ್ಯ ಜಿಲ್ಲೆಯ ಜೀವನಾಡಿ ಮೈಷುಗರ್‌ನ್ನು ಉಳಿಸಬೇಕೆಂದು ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಕನ್ನಡ ಸೇನೆ ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್, ರೈತ ಮುಖಂಡ ಶಿವಳ್ಳಿ ಚಂದ್ರಶೇಖರ್, ಕನ್ನಡ ಸೇನೆ ಮಹಿಳಾ ಅಧ್ಯಕ್ಷ ಸೌಭಾಗ್ಯ. ಕಾರ್ಯಾಧ್ಯಕ್ಷೆ ಶೋಭಾ ಮಧು, ಜಯಮ್ಮ, ಶಿವಲಿಂಗಪ್ಪ, ವೇಣು, ಪ್ರಸನ್, ಸತೀಶ್, ಶಿವಕುಮಾರ್, ರಘು, ಅಭಿಷೇಕ್, ಕುಮಾರ್, ಶಾಲಿನಿ, ಶಿವ್ರತಮ್ಮ, ಬಾನು, ಆತ್ಮನಂದ, ವಿನಯ, ರಂಜು, ಚೆನ್ನಯ, ನಾಗರಾಜ, ಎಂ.ಆರ್.ತನು, ಜವರೇಗೌಡ, ಸುರೇಶ, ಮಂಜು ಸೇರಿದಂತೆ ಹಲವರು ಭಾಗವಹಿಸಿದ್ದರು.