ಸಂಡೂರು: ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ಅವರು ಗುರುವಾರ ತಾಲೂಕಿನ ತುಮಟಿ ಗ್ರಾಮದಲ್ಲಿ ಬರ ಪೀಡಿತ ಜಮೀನುಗಳನ್ನು ವೀಕ್ಷಿಸಿ, ರೈತರ ಅಹವಾಲುಗಳನ್ನು ಆಲಿಸಿದರು.ತುಮಟಿ ಗ್ರಾಮದ ರೈತ ಯರ‍್ರೆಪ್ಪ ಮಾತನಾಡಿ, ತಮ್ಮ ೨ ಎಕರೆ ಜಮೀನಿನಲ್ಲಿ ಸೂರ್ಯಕಾಂತಿ ಬೆಳೆ ಬೆಳೆದಿದ್ದೆ. ಎಕರೆಗೆ ₹೨೫-೩೦ ಸಾವಿರ ಖರ್ಚು ಮಾಡಿದ್ದೇನೆ. ಬೀಜ ಬಿತ್ತನೆ ಮಾಡಿ ೨ ತಿಂಗಳಾಯಿತು. ಮಳೆ ಕೊರತೆಯಿಂದ ಬೆಳೆ ಹಾನಿಯಾಗಿದೆ. ಇನ್ನು ಎರಡು ಎಕರೆ ಪ್ರದೇಶದಲ್ಲಿ ಹತ್ತಿ ಬೆಳೆದಿದ್ದೇನೆ. ೨ ತಿಂಗಳಲ್ಲಿ ಒಂದು ಅಡಿಯಷ್ಟು ಬೆಳೆದಿದೆ. ಮಳೆ ಕೊರತೆಯಿಂದ ಹತ್ತಿ ಬೆಳೆ ಕೂಡ ಕೈಗೆ ಬರದಂತಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ತಾಲೂಕಿನ ಅಂಕಮನಾಳ್ ಗ್ರಾಮದ ರೈತರು ಆರ್. ಅಶೋಕ್ ಅವರಿಗೆ ತಮ್ಮ ಮನವಿ ಪತ್ರವನ್ನು ಸಲ್ಲಿಸಿ, ತಾವು ತಮ್ಮ ಹಿರಿಯರ ಕಾಲದಿಂದ ಉಳುಮೆ ಮಾಡಿಕೊಂಡು ಬರುತ್ತಿರುವ ಬಗರ್ ಹುಕುಂ ಜಮೀನುಗಳಿಗೆ ಸರ್ಕಾರ ಪಟ್ಟಾ ನೀಡುತ್ತಿಲ್ಲ. ಅವುಗಳನ್ನು ಕಾರ್ಖಾನೆಗಳಿಗೆ ನೀಡುವ ಹುನ್ನಾರ ನಡೆದಿದೆ. ನಾವು ಉಳುಮೆ ಮಾಡುತ್ತಿರುವ ಜಮೀನುಗಳಿಗೆ ಪಟ್ಟಾ ನೀಡುವಂತೆ ಮಾಡಲು ಕ್ರಮಕೈಗೊಳ್ಳುವಂತೆ ಮನವಿ ಮಾಡಿದರು.
ಆರ್. ಅಶೋಕ್ ಅವರು ರೈತರಿಂದ ಅಹವಾಲು ಸ್ವೀಕರಿಸಿ, ಜಂಟಿ ಕೃಷಿ ನಿರ್ದೇಶಕರಾದ ಸೋಮಸುಂದರ್ ಅವರಿಂದ ಅಗತ್ಯ ಮಾಹಿತಿ ಪಡೆದು, ಎಲ್ಲ ರೈತರು ಬೆಳೆ ವಿಮೆ ಮಾಡಿಸಿಕೊಳ್ಳಬೇಕು. ಅಧಿಕಾರಿಗಳು ಈ ಕುರಿತು ಕ್ರಮಕೈಗೊಳ್ಳಬೆಕು ಎಂದು ತಿಳಿಸಿದರು.ಶಾಸಕರಾದ ಜಿ. ಜನಾರ್ಧನರೆಡ್ಡಿ, ಬಿ.ಪಿ ಹರೀಶ್, ಕೃಷ್ಣ ನಾಯಕ್, ಭೈರತಿ ಬಸವರಾಜ್, ಬಿಜೆಪಿ ಎಸ್.ಟಿ. ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು, ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ.ಎಸ್. ದಿವಾಕರ್, ಜಿಲ್ಲಾಧ್ಯಕ್ಷ ಅನಿಲ್‌ನಾಯ್ಡು, ಉಪಾಧ್ಯಕ್ಷ ಜಿ.ಟಿ. ಪಂಪಾಪತಿ, ರಾಮಕೃಷ್ಣ, ಉಡೇದ್ ಸುರೇಶ್, ಸಂಡೂರು ಮಂಡಲ ಅಧ್ಯಕ್ಷ ಅಶೋಕ್ ಕುಮಾರ್, ಓಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ತಿರುಮಲ, ರೈತ ಮೋರ್ಚಾ ಅಧ್ಯಕ್ಷ ವಿ.ಎಸ್. ಶಂಕರ್, ಮುಖಂಡರಾದ ಸಣ್ಣ ಪಕ್ಕೀರಪ್ಪ, ಸೋಮಶೇಖರರೆಡ್ಡಿ, ಅಯ್ಯಾಳಿ ತಿಮ್ಮಪ್ಪ, ಶಂಕರ್ ದಾಸ್, ಸುರೇಶ್ ಬಾಬು, ಮಂಜುಳಮ್ಮ, ವಸಂತಕುಮಾರ್, ರಾಜೇಶ್, ನರಸಿಂಹ, ರಮೇಶ್, ಹುಲಿರಾಜ್, ನರೇಂದ್ರಪಾಟೀಲ್, ಗಂಡಿ ಮಾರೆಪ್ಪ, ರವಿಕುಮಾರ್, ನಾಗರಾಜ್, ಮುದ್ದಪ್ಪ, ಶಂಕರಪ್ಪ, ಗ್ರೇಡ್ ೨ ತಹಶೀಲ್ದಾರ್ ಸುಧಾ ಅರಮನೆ, ಸಹಾಯಕ ಕೃಷಿ ನಿರ್ದೇಶಕ ಮೊಹಮ್ಮದ್ ರಫೀಯುಲ್ಲಾ ರಝ್ವಿ, ಮುಂತಾದವರು ಉಪಸ್ಥಿತರಿದ್ದರು.