ರೇಸ್​ ಕೋರ್ಸ್​: ಎಫ್​ಐಆರ್‌ ರದ್ದಿಗೆ ಹೈಕೋರ್ಟ್ ನಕಾರ

KannadaprabhaNewsNetwork |  
Published : May 04, 2024, 01:31 AM ISTUpdated : May 04, 2024, 01:10 PM IST
ಸಾಂದರ್ಭಿಕ | Kannada Prabha

ಸಾರಾಂಶ

ಅನಧಿಕೃತ ಕುದುರೆ ಬೆಟ್ಟಿಂಗ್, ಅಕ್ರಮ ಹಣ ಸಂಗ್ರಹ ಆರೋಪದ ಹಿನ್ನೆಲೆ 26 ಮಂದಿ ಬುಕ್ಕಿಗಳು, ಕಂಪನಿಗಳ ವಿರುದ್ಧದ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್‌ ನಿರಾಕರಿಸಿದೆ.

  ಬೆಂಗಳೂರು :  ಬೆಂಗಳೂರು ಟರ್ಫ್ ಕ್ಲಬ್​ನಲ್ಲಿ (ರೇಸ್​ ಕೋರ್ಸ್​) ಅನಧಿಕೃತವಾಗಿ ಕುದುರೆ ಬೆಟ್ಟಿಂಗ್ ಆಯೋಜಿಸಿ ಬೆಟ್ಟಿಂಗ್‌ದಾರರಿಂದ ಕೋಟ್ಯಂತರ ಹಣ ಸಂಗ್ರಹಿಸಿದ ಆರೋಪದ ಮೇಲೆ‌ 26 ಮಂದಿ ಬುಕ್ಕಿಗಳು ಮತ್ತವರ ಕಂಪನಿಗಳ ವಿರುದ್ಧ ದಾಖಲಾಗಿರುವ ಎಫ್​ಐಆರ್​ ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ.

ಪ್ರಕರಣ ಸಂಬಂಧ ಪೊಲೀಸರು ದಾಖಲಿಸಿರುವ ಎಫ್ಐಆರ್ ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣಾ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ಸೂರ್ಯ ಅಂಡ್​ ಕೋ ಸೇರಿದಂತೆ ಬೆಂಗಳೂರು ಟರ್ಫ್ ಕ್ಲಬ್‌ ಆವರಣದಲ್ಲಿ ಅಕ್ರಮ ಬೆಟ್ಟಿಂಗ್​ ನಡೆಸುತ್ತಿದ್ದರು ಎನ್ನಲಾದ 26 ವಿವಿಧ ಎಂಟರ್ ಪ್ರೈಸಸ್ ಕಂಪೆನಿಗಳು, ಅವುಗಳ ಮಾಲೀಕರು (ಬುಕ್ಕಿಗಳು) ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ ನ್ಯಾಯಮೂರ್ತಿ ವಿಶ್ವಜಿತ್​ ಶೆಟ್ಟಿ ಅವರ ಪೀಠ ಆದೇಶಿಸಿದೆ.

ಅರ್ಜಿದಾರರು ಅನಧಿಕೃತವಾಗಿ ಬೆಟ್ಟಿಂಗ್‌ ಆಯೋಜಿಸಿ ಕೋಟ್ಯಂತರ ರು. ಅವ್ಯವಹಾರ ನಡೆಸಿರುವ ಬಗ್ಗೆ ತನಿಖೆ ಸಂದರ್ಭದಲ್ಲಿ ಬಹಿರಂಗವಾಗಿದೆ. ಇದು ಅತ್ಯಂತ ಗಂಭೀರ ಸ್ವರೂಪದ ಪ್ರಕರಣವಾಗಿದೆ. ಜಿಎಸ್​ಟಿ ಮತ್ತು ಟಿಡಿಎಸ್​ ಮೊತ್ತ ಪಾವತಿಗೆ ಸಂಗ್ರಹಿಸಿರುವ ಕೊಟ್ಯಂತರ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪವಿದೆ. ಆದ್ದರಿಂದ ಎಫ್‌ಐಆರ್‌ ರದ್ದುಪಡಿಸಲಾಗದು ಎಂದು ಪೀಠ ಆದೇಶದಲ್ಲಿ ಹೇಳಿದೆ.

ಸರ್ಕಾರದಿಂದ ಅನುಮತಿ ಪಡೆದಿರುವ ಅರ್ಜಿದಾರ ಬುಕ್ಕಿಗಳು ಬೆಂಗಳೂರು ಟರ್ಫ್‌ ಕ್ಲಬ್‌ನಲ್ಲಿ ಯಾವುದೇ ರೀತಿಯ ರಿಜಿಸ್ಟರ್‌ ಹಾಗೂ ದಾಖಲೆ ನಿರ್ವಹಿಸದೆ ಅಕ್ರಮವಾಗಿ ಕುದುರೆ ಪಂದ್ಯಗಳ ಬೆಟ್ಟಿಂಗ್​ ನಡೆಸಿದ್ದರು. ಆ ಮೂಲಕ ಬೆಟ್ಟಿಂಗ್‌ದಾರರಿಂದ ಅಕ್ರಮವಾಗಿ ಕೋಟ್ಯಂತರ ಹಣ ಸಂಗ್ರಹಿಸಿದ್ದಾರೆ ಮತ್ತು ಸರ್ಕಾರಕ್ಕೆ ತೆರಿಗೆ ಪಾವತಿಸದೆ ವಂಚಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.

ಈ ಹಿನ್ನೆಲೆಯಲ್ಲಿ ಸಿಸಿಬಿ ಇನ್ಸ್‌ಪೆಕ್ಟರ್‌ ಹೈಗ್ರೌಂಡ್ಸ್ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿತ್ತು. ನಂತರ ತನಿಖೆ ಸಿಸಿಬಿ ಪೊಲೀಸರಿಗೆ ವರ್ಗಾವಣೆಯಾಗಿತ್ತು. ತನಿಖೆ ಪ್ರಗತಿಯಲ್ಲಿದ್ದು, ಪ್ರಕರಣ ವಿಚಾರಣೆ ಅಧೀನ ನ್ಯಾಯಾಲಯದಲ್ಲಿ ಬಾಕಿಯಿದೆ. ಹಾಗಾಗಿ, ತಮ್ಮ ವಿರುದ್ಧದ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಅರ್ಜಿದಾರರು ಹೈಕೋರ್ಟ್​ ಮೊರೆ ಹೋಗಿದ್ದರು.

ಐಪಿಎಲ್‌ ಬೆಟ್ಟಿಂಗ್‌: ಆರೋಪಿ ಬಂಧನ!ಕನ್ನಡಪ್ರಭ ವಾರ್ತೆ ಬೆಂಗಳೂರುಆನ್‌ಲೈನ್‌ನಲ್ಲಿ ಐಪಿಎಲ್‌ ಕ್ರಿಕೆಟ್‌ ಬೆಟ್ಟಿಂಗ್‌ ಆಡಿಸುತ್ತಿದ್ದ ಆರೋಪಿಯನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.ಇಂದಿರಾನಗರದ ಕೃಷ್ಣಯ್ಯನಪಾಳ್ಯದ ಗಿರೀಶ್‌(42) ಬಂಧಿತ. ಆರೋಪಿಯಿಂದ 2 ಸಾವಿರ ರು. ನಗದು ಹಾಗೂ ಮೊಬೈಲ್‌ ಫೋನ್‌ ಜಪ್ತಿ ಮಾಡಲಾಗಿದೆ. ಏ.30ರಂದು ರಾತ್ರಿ 9 ಗಂಟೆಗೆ ಸರ್‌ ಎಂ.ವಿಶ್ವೇಶ್ವರಯ್ಯ ರೈಲು ನಿಲ್ದಾಣದ ಬಳಿಯ ಖಾಲಿ ಜಾಗದಲ್ಲಿ ಆಪರಿಚಿತ ವ್ಯಕ್ತಿ ಮೊಬೈಲ್‌ನಲ್ಲಿ ಕ್ರಿಕೆಟ್‌ ಬೆಟ್ಟಿಂಗ್‌ ನಡೆಸುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.ಆರೋಪಿ ಗಿರೀಶ್‌ ಬೆಟಾಕುಲರ್‌ ಲೈವ್‌ ವೆಬ್‌ಸೈಟ್‌ ಮುಖಾಂತರ ಐಪಿಎಲ್‌ ಕ್ರಿಕೆಟ್‌ ಪಂದ್ಯದ ಸೋಲು-ಗೆಲುವು ಕುರಿತು ಸಾರ್ವಜನಿಕರು ಹಾಗೂ ಪಂಟರ್‌ಗಳಿಂದ ಹಣವನ್ನು ಪಣವಾಗಿ ಕಟ್ಟಿಸಿಕೊಂಡು ಬೆಟ್ಟಿಂಗ್‌ ದಂಧೆ ನಡೆಸುತ್ತಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ. ಈ ಸಂಬಂಧ ಬಾಣಸವಾಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!