ಬಿಂದು ಸತೀಶ್ ಸ್ಥಾನಕ್ಕೆ ರಾಜೀನಾಮೆ ಯಿಂದ ತೆರವಾದ ಸ್ಥಾನಕ್ಕೆ ನಡೆದ ಚುನಾವಣೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರತಾಲೂಕಿನ ಮೆಣಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ರಚಿತಾ ರಮೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮೆಣಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿದ್ದ ಬಿಂದು ಸತೀಶ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ತೆರವಾದ ಸ್ಥಾನಕ್ಕೆ ಗುರುವಾರ ಚುನಾವಣೆ ಪ್ರಕ್ರಿಯೆ ನಡೆಯಿತು. ಸಾಮಾನ್ಯ ಮಹಿಳಾ ಸ್ಥಾನಕ್ಕಾಗಿ ರಚಿತಾ ರಮೇಶ್ ಅವರೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ರಚಿತಾ ರಮೇಶ್ ಅವರು ಮೆಣಸೂರು ಗ್ರಾ.ಪಂ. ಅಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಯಾಗಿದ್ದ ಬಿಇಒ ಕೆ.ಆರ್.ಪುಷ್ಪಾ ಘೋಷಿಸಿದರು.ಈ ಸಂದರ್ಭದಲ್ಲಿ ಗ್ರಾಪಂ ಪಿಡಿಓ ಸಂತೋಷ್‌ಕುಮಾರ್, ಕಾರ್ಯದರ್ಶಿ ಪ್ರಸನ್ನಕುಮಾರ್ ಇದ್ದರು.
ಅಭಿನಂದನೆ: ಅವಿರೋಧವಾಗಿ ಆಯ್ಕೆಯಾದ ರಚಿತಾ ರಮೇಶ್ ಅವರನ್ನು ಗ್ರಾ.ಪಂ. ಸದಸ್ಯರು ಹಾಗೂ ಬಿಜೆಪಿ ಮುಖಂಡರು ಅಭಿನಂದಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ವಕ್ತಾರ ಎನ್.ಎಂ.ಕಾಂತರಾಜ್ ಮಾತನಾಡಿ, ಹಿಂದಿನ ಅಧ್ಯಕ್ಷರಿಗೆ ನೀಡಿದ ಸಹಕಾರವನ್ನೇ ಈಗಿನ ಅಧ್ಯಕ್ಷರಿಗೆ ನೀಡುವುದರ ಮೂಲಕ ಗ್ರಾ.ಪಂ. ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು. ಮೆಣಸೂರು ಗ್ರಾಪಂ ವ್ಯಾಪ್ತಿಯ ಗೇರ್‌ಬೈಲ್ ಗ್ರಾಮಕ್ಕೆ ಗ್ರಾಮ ಪಂಚಾಯಿತಿಯಿಂದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡಲಾಗುತ್ತದೆ. ಆದರೆ, ಗೇರ್ ಬೈಲಿನ 10 ರಿಂದ 12 ಮನೆಗಳ ಮತದಾರರಿಗೆ ಮತದಾನದ ಹಕ್ಕು ಮಾತ್ರ ಕಡಹಿನಬೈಲು ಗ್ರಾಪಂಗೆ ಸೇರುತ್ತದೆ. ಇದರಿಂದ ಮೆಣಸೂರು ಗ್ರಾ.ಪಂ.ಗೆ ಹೊರೆಯಾಗಲಿದೆ. ಆದ್ದರಿಂದ ಗೇರ್‌ಬೈಲ್ ನ್ನು ಮೆಣಸೂರು ಗ್ರಾ.ಪಂ. ವ್ಯಾಪ್ತಿಗೆ ತರಬೇಕು ಎಂದು ಹೇಳಿದರು.ಬಿಜೆಪಿ ಮಹಿಳಾ ಘಟಕದ ತಾಲೂಕು ಆಧ್ಯಕ್ಷೆ ರಶ್ಮಿ ದಯಾನಂದ್ ಮಾತನಾಡಿ, ಬಿಜೆಪಿಯಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಮೆಣಸೂರು ಗ್ರಾಮಪಂಚಾಯ್ತಿಯಲ್ಲಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರೂ ಮಹಿಳೆಯರೇ ಆಗಿದ್ದಾರೆ. ಪಕ್ಷ ನಮಗೆ ನೀಡಿದಂತಹ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ದೊರೆತ ಅಧಿಕಾರವಧಿಯಲ್ಲಿ ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ನಮಗೆ ಅವಕಾಶವನ್ನು ಕಲ್ಪಿಸಿಕೊಟ್ಟ ಪಕ್ಷಕ್ಕೂ, ನಮಗೆ ಮತ ನೀಡಿದ ಮತದಾರರಿಗೂ ಗೌರವ ತರುವಂತೆ ಸೇವೆ ಸಲ್ಲಿಸಬೇಕೆಂದರು.
ಈ ಸಂರ್ಭದಲ್ಲಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಪಚ್ಚೆಯಮ್ಮ, ಸದಸ್ಯರಾದ ಡಿ.ಆರ್.ಶ್ರೀನಾಥ್, ಎನ್.ಡಿ.ಪ್ರಸಾದ್, ಅಣ್ಣಪ್ಪ, ಎಂ.ಟಿ.ಪ್ರವೀಣ್, ಬಿನು,ಶಿಲ್ಪಾ, ಉಮಾಗಂಗಾಧರ್, ಯಾಸ್ಮೀನ್, ಬಿಜೆಪಿ ಪಕ್ಷದ ಮುಖಂಡರಾದ ಕೆ.ಎಂ.ಜಗದೀಶ್, ಅನಿಲ್, ಮೂಡಬಾಗಿಲುಚಂದ್ರು ಮತ್ತಿತರರು ಉಪಸ್ಥಿತರಿದ್ದರು.