ಲೋಕಸಭೆ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ವರಿಷ್ಠ ನಾಯಕರಾದ ರಾಹುಲ್ ಗಾಂಧಿ ಅವರ ಹುಟ್ಟುಹಬ್ಬವನ್ನು ಶುಕ್ರವಾರ ಸಾಮಾಜಿಕ ನ್ಯಾಯ ದಿನವನ್ನಾಗಿ ತಾಲೂಕಿನ ಕಾಂಗ್ರೆಸ್ ವತಿಯಿಂದ ಆಚರಿಸುವ ಮೂಲಕ ಅವರ ಹುಟ್ಟುಹಬ್ಬಕ್ಕೆ ಅಭಿನಂದನೆ ಸಲ್ಲಿಸುತ್ತಿದ್ದೇವೆ ಎಂದು ಕಾಂಗ್ರೆಸ್ ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಎಚ್.ಎ. ಉಮಾಪತಿ ಹೇಳಿದ್ದಾರೆ.
- ಅಹಿಂದ, ಕೂಲಿ ಕಾರ್ಮಿಕರ ಪರವಾಗಿರುವ ರಾಹುಲ್: ಎಚ್.ಎ.ಉಮಾಪತಿ ಹೇಳಿಕೆ
- - -
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಲೋಕಸಭೆ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ವರಿಷ್ಠ ನಾಯಕರಾದ ರಾಹುಲ್ ಗಾಂಧಿ ಅವರ ಹುಟ್ಟುಹಬ್ಬವನ್ನು ಶುಕ್ರವಾರ ಸಾಮಾಜಿಕ ನ್ಯಾಯ ದಿನವನ್ನಾಗಿ ತಾಲೂಕಿನ ಕಾಂಗ್ರೆಸ್ ವತಿಯಿಂದ ಆಚರಿಸುವ ಮೂಲಕ ಅವರ ಹುಟ್ಟುಹಬ್ಬಕ್ಕೆ ಅಭಿನಂದನೆ ಸಲ್ಲಿಸುತ್ತಿದ್ದೇವೆ ಎಂದು ಕಾಂಗ್ರೆಸ್ ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಎಚ್.ಎ. ಉಮಾಪತಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶಾಸಕ ಡಿ.ಜಿ. ಶಾಂತನಗೌಡ ನೇತೃತ್ವದಲ್ಲಿ ರಾಹುಲ್ ಗಾಂಧಿ ಜನ್ಮದಿನವನ್ನು ಸಾಮಾಜಿಕ ನ್ಯಾಯ ದಿನವಾಗಿ ಆಚರಣೆ ಸಂದರ್ಭದಲ್ಲಿ ಅವರು ಮಾತನಾಡಿದರು.
ಡಾ. ಬಿ.ಆರ್. ಅಂಬೇಡ್ಕರ್ ರಚಿಸಿದ ಭಾರತದ ಸಂವಿಧಾನಲ್ಲಿ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎನ್ನವಂತಹ ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸಲಾಗಿದೆ. ಇದರಂತೆ ಇಂದಿರಾ ಗಾಂಧಿ ಮೊದಲುಗೊಂಡು ಪ್ರಸ್ತುತ ರಾಹುಲ್ ಗಾಂಧಿ ಕೂಡ ಸಾಮಾಜಿಕ ನ್ಯಾಯವನ್ನು ಸದಾ ಎತ್ತಿಹಿಡಿಯುತ್ತಿದ್ದಾರೆ. ಆ ಮೂಲಕ ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು, ಕೂಲಿ ಕಾರ್ಮಿಕರು, ದಲಿತ ವರ್ಗದವರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ದೇಶದ ಎಲ್ಲ ಹಿಂದುಳಿದ ವರ್ಗದ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಹಿನ್ನೆಲೆ ಅವರ ಹುಟ್ಟುಹಬ್ಬವನ್ನು ಸಾಮಾಜಿಕ ನ್ಯಾಯ ದಿನ ಎಂದು ಆಚರಿಸಲಾಗುತ್ತಿದೆ ಎಂದು ಹೇಳಿದರು.
ಸಾಮಾನ್ಯ ಮನುಷ್ಯರು ಸಣ್ಣದಾಗಿ ಸಂಘ ಸಂಸ್ಥೆಯನ್ನು ತೆರೆಯಬೇಕಾದರೆ ಕಾನೂನು ರೀತಿಯಲ್ಲಿ ಮೊದಲು ಆ ಸಂಘ/ ಸಂಸ್ಥೆ ನೋಂದಣಿ ಆಗಬೇಕು. ಆರ್.ಎಸ್.ಎಸ್.ನಂತಹ ಬೃಹತ್ ಸಂಘಟನೆಯನ್ನು ನೋಂದಣೆ ಮಾಡಿಸುವಂತೆ ರಾಜ್ಯದ ಗೃಹಮಂತ್ರಿ ಪ್ರಿಯಾಂಕ್ ಖರ್ಗೆ ಹೇಳಿರುವುದು ಸಮಂಜಸವಾಗಿದೆ. ಇದಕ್ಕೆ ಕಾಂಗ್ರೆಸ್ ಮುಖಂಡರ ಸಹಮತವಿದೆ ಎಂದರು.
ಜೂ.21ರಂದು ಕೆಪಿಸಿಸಿ ನೂತನ ಅಧ್ಯಕ್ಷರ ಪದಗ್ರಹಣ:
ಜೂನ್ 21ರಂದು ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಹಿಂದುಳಿದ ವರ್ಗದ ನಾಯಕ ಬಿ.ಕೆ. ಹರಿಪ್ರಸಾದ್ ಅವರ ಪದಗ್ರಹಣ ಕಾರ್ಯಕ್ರಮವಿದೆ. ಈ ಕಾರ್ಯಕ್ರಮಕ್ಕೆ ಎಲ್ಲ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು, ಹಿಂದುಳಿದ ಸಮುದಾಯದವರು ಭಾಗವಹಿಸುವಂತೆ ಶಾಸಕ ಡಿ.ಜಿ. ಶಾಂತನಗೌಡ ಹಾಗೂ ಎಚ್.ಎ. ಉಮಾಪತಿ ಈ ಸಂದರ್ಭ ಮನವಿ ಮಾಡಿದರು.
ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ 5 ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಇದಕ್ಕಾಗಿ ರಾಜ್ಯದ ಮುಖ್ಯಮಂತ್ರಿ, ಶಾಸಕರು ಹಾಗೂ ಮುಖಂಡರಿಗೆ ಅಭಿನಂದನೆ ಸಲ್ಲಿಸುವುದಾಗಿ ಶಾಸಕ ಡಿ.ಜಿ,ಶಾಂತನಗೌಡ ಹೇಳಿದರು.
ಪಕ್ಷದ ಹೊನ್ನಾಳಿ ಬ್ಲಾಕ್ ಅಧ್ಯಕ್ಷ ಸಣ್ಣಕ್ಕಿ ಬಸವನಗೌಡ, ಸಾಸ್ವೇಹಳ್ಳಿ ಬ್ಲಾಕ್ ಅಧ್ಯಕ್ಷ ಆರ್.ನಾಗಪ್ಪ, ಕೆಪಿಸಿಸಿ ಸದಸ್ಯ ಡಾ. ಈಶ್ವರ ನಾಯ್ಕ, ಅನೇಕ ಮುಖಂಡರು, ಕಾರ್ಯಕರ್ತರು ಇದ್ದರು.
- - -
-19ಎಚ್.ಎಲ್.ಐ1:
ಹೊನ್ನಾಳಿ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಕಾಂಗ್ರೆಸ್ ಶಾಸಕ ಡಿ.ಜಿ.ಶಾಂತನಗೌಡ ನೇತೃತ್ವದಲ್ಲಿ ಪಕ್ಷದ ವರಿಷ್ಠ ನಾಯಕ ರಾಹುಲ್ ಗಾಂಧಿ ಜನ್ಮದಿನವನ್ನು ಸಾಮಾಜಿಕ ನ್ಯಾಯ ದಿನವನ್ನಾಗಿ ಆಚರಿಸಲಅಯಿತು. ಎಚ್.ಎ.ಉಮಾಪತಿ ಸೇರಿದಂತೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.