ಪದವೀಧರ ಕ್ಷೇತ್ರಕ್ಕೆ ಮಾಜಿ ಶಾಸಕ ರಘುಪತಿ ಭಟ್ ಪಕ್ಷೇತರ ಸ್ಪರ್ಧೆ ಘೋಷಣೆ

KannadaprabhaNewsNetwork | Published : May 14, 2024 1:05 AM

ಸಾರಾಂಶ

ಇದೇನೂ ದೇಶದ ಅಥವಾ ರಾಜ್ಯದ ಸರ್ಕಾರ ರಚಿಸುವ ಚುನಾವಣೆ ಅಲ್ಲ, ಆದ್ದರಿಂದ ನಾನು ಪಕ್ಷದ ವಿರುದ್ಧ ಸ್ಪರ್ಧಿಸುತ್ತಿಲ್ಲ, ನಾನು ಪಕ್ಷೇತರನಾಗಿ ಗೆದ್ದರೂ ಬಿಜೆಪಿಯ ವಿಧಾನ ಪರಿಷತ್ ಸದಸ್ಯನಾಗಿಯೇ ಹೋಗುತ್ತೇನೆ ಎಂದರು.

ಕನ್ನಡಪ್ರಭ ವಾರ್ತೆ ಉಡುಪಿ

ವಿಧಾನ ಪರಿಷತ್ತಿನ ನೈಋತ್ಯ ಪದವೀಧರ ಕ್ಷೇತ್ರಕ್ಕೆ ಬಿಜೆಪಿಯ ಅಧಿಕೃತ ಅಭ್ಯರ್ಥಿಯ ವಿರುದ್ಧ ಬಂಡಾಯವಾಗಿ ಸ್ಪರ್ಧಿಸುವುದಾಗಿ ಮಾಜಿ ಶಾಸಕ ಕೆ. ರಘುಪತಿ ಭಟ್ ಘೋಷಿಸಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ತಮಗೆ ಹೇಳದೆ ಪಕ್ಷದ ಟಿಕೆಟ್ ತಪ್ಪಿಸಲಾಗಿತ್ತು. ಆಗ ತಾನು ರಾಜಕೀಯ ನಿವೃತ್ತಿಗೆ ಮುಂದಾದಾಗ, ಸಂಘದ ಮತ್ತು ಪಕ್ಷದ ಹಿರಿಯರು ವಿಧಾನ ಪರಿಷತ್ ಚುನಾವಣೆಯ ಟಿಕೆಟ್ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಈಗ ಶಿವಮೊಗ್ಗ ಧನಂಜಯ ಸರ್ಜಿ ಅವರಿಗೆ ನೀಡಿದ್ದಾರೆ. ಪಕ್ಷದ ಈ ನಿರ್ಧಾರದಿಂದ ತನಗೆ ನೋವಾಗಿದೆ. ಆದ್ದರಿಂದ ಪಕ್ಷೇತರನಾಗಿ ಸ್ಪರ್ಧಿಸುವ ನಿರ್ಧಾರ ಮಾಡಿರುವುದಾಗಿ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾನು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಜಿ., ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ರಾಜ್ಯಾಧ್ಯಕ್ಷ ವಿಜಯೇಂದ್ರ, ರಾಜ್ಯ ಸಂಘಟನಾ ಕಾರ್ಯದರ್ಶಿ ಸುನಿಲ್ ಕುಮಾರ್ ಮುಂತಾದವರಿಗೂ ತನ್ನ ಸ್ಪರ್ಧೆಯ ಆಪೇಕ್ಷೆಯನ್ನು ತಿಳಿಸಿದ್ದೆ, ಅವರೆಲ್ಲರೂ ಒಪ್ಪಿದ್ದರು. ಆದರೆ ಈಗ ಟಿಕೆಟ್ ಶಿವಮೊಗ್ಗದ ಧನಂಜಯ್ ಸರ್ಜೆ ಅವರಿಗೆ ನೀಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಜಾತಿ, ಹಣ ಬಲದ ಮೇಲೆ ಟಿಕೆಟ್‌: ತನಗೆ ಟಿಕೆಟ್ ನೀಡದಿರುವುದಕ್ಕೆ ಕಾರಣವನ್ನು ತನ್ನನ್ನು ಕರೆದು ಮನವರಿಕೆ ಮಾಡಬೇಕಾಗಿತ್ತು, ಶಿವಮೊಗ್ಗ ಜಿಲ್ಲೆಗೆ ನೀಡುವ ಅಥವಾ ಲಿಂಗಾಯತರಿಗೆ ನೀಡುವ ಅನಿವಾರ್ಯತೆ ಇದ್ದಿದ್ದರೇ ಅದನ್ನಾದರೂ ಹೇಳಬೇಕಾಗಿತ್ತು. ಅಥವಾ ಪಕ್ಷದ ಹಿರಿಯ ಕಾರ್ಯಕರ್ತರಿಗೆ ನೀಡಿದ್ದರೂ ಬೇಸರ ಇರಲಿಲ್ಲ. ಮೊನ್ನೆಮೊನ್ನೆ ಪಕ್ಷಕ್ಕೆ ಬಂದ ಧನಂಜಯ್ ಸರ್ಜಿಅವರು ಶಿವಮೊಗ್ಗದಲ್ಲಿ ಸಂಘದ ವಿರುದ್ಧ ಕೆಲಸ ಮಾಡಿದವರು. ಜಾತಿ, ಹಣ ಬಲದ ಮೇಲೆ ಅವರಿಗೆ ಟಿಕೆಟ್ ನೀಡಲಾಗಿದೆ ಎಂದವರು ಆರೋಪಿಸಿದರು.

ಇದೇನೂ ದೇಶದ ಅಥವಾ ರಾಜ್ಯದ ಸರ್ಕಾರ ರಚಿಸುವ ಚುನಾವಣೆ ಅಲ್ಲ, ಆದ್ದರಿಂದ ನಾನು ಪಕ್ಷದ ವಿರುದ್ಧ ಸ್ಪರ್ಧಿಸುತ್ತಿಲ್ಲ, ನಾನು ಪಕ್ಷೇತರನಾಗಿ ಗೆದ್ದರೂ ಬಿಜೆಪಿಯ ವಿಧಾನ ಪರಿಷತ್ ಸದಸ್ಯನಾಗಿಯೇ ಹೋಗುತ್ತೇನೆ ಎಂದರು.

ನನ್ನ ಮೇಲೆ ಪಕ್ಷ ಶಿಸ್ತು ಕ್ರಮ ಕೈಗೊಳ್ಳಬಹುದು, ಉಚ್ಚಾಟನೆ ಮಾಡಬಹುದು ಎಂದು ನನಗೆ ಗೊತ್ತಿದೆ. ಆದರೂ ನಾನು ಪಕ್ಷದ ಕಾರ್ಯಕರ್ತರ ಪ್ರತಿನಿಧಿಯಾಗಿ ಸ್ಪರ್ಧಿಸುತ್ತೇನೆ ಎಂದವರು ಹೇಳಿದರು. ಕರಾವಳಿಯವರಿಗೆ ಅನ್ಯಾಯವಾಗಿದೆ: ಮೈತ್ರಿಯ ಕಾರಣಕ್ಕೆ ಶಿಕ್ಷಕರ ಕ್ಷೇತ್ರವನ್ನು ಘಟ್ಟದ ಮೇಲಿನ ಜೆಡಿಎಸ್ ಅಭ್ಯರ್ಥಿಗೆ ಕೊಟ್ಟಿದ್ದಾರೆ, ಅದನ್ನು ಒಪ್ಪುತ್ತೇನೆ, ಪದವಿಧರ ಕ್ಷೇತ್ರವನ್ನಾದರೂ ಘಟ್ಟದ ಕೆಳಗಿನ ಕರಾವಳಿಯ ಅಭ್ಯರ್ಥಿಗೆ ಕೊಡಬೇಕಾಗಿತ್ತು. ಎರಡನ್ನೂ ಘಟ್ಟದ ಮೇಲಿನವರಿಗೆ ಕೊಟ್ಟು ಕರಾವಳಿಗೆ ಅನ್ಯಾಯ ಮಾಡಿದ್ದಾರೆ. ಕರಾವಳಿಯ ಬಿಜೆಪಿ ಕಾರ್ಯಕರ್ತರು ಶಿಸ್ತಿನವರು, ಅವರ ಜೊತೆ ಏನು ಮಾಡಿದರೂ ನಡೆಯುತ್ತದೆ ಎಂದು ಪಕ್ಷದ ವರಿಷ್ಠರ ತಲೆಯಲ್ಲಿದೆ. ಆದರೆ ನಾವು ಯಾವಾಗ ಏನು ಮಾಡಬೇಕು ಅದನ್ನು ಮಾಡುತ್ತೇವೆ ಎಂದು ಖಾರವಾಗಿ ತಮ್ಮ ಸ್ಪರ್ಧೆಯನ್ನು ಸಮರ್ಥಿಸಿಕೊಂಡರು.

ರಾ.ಸಂ. ಕಾರ್ಯದರ್ಶಿ ಸುನಿಲ್ ಕುಮಾರ್ ಸ್ಪರ್ಧಿಸದಂತೆ ಬಹಳ ಒತ್ತಾಯ ಮಾಡಿದರು. ಆದರೆ, ನನಗೆ ಮಾಧ್ಯಮಗಳ ಮುಂದೆ ಹೇಳಲಾಗದ ಕೆಲವೊಂದು ನೋವು ಪಕ್ಷದಿಂದ ಆಗಿದೆ, ಅದನ್ನು ಅವರ ಬಳಿ ಹೇಳಿದ್ದೇನೆ ಎಂದರು.

ಗೆಲ್ಲುವುದಕ್ಕೆ 20 ಸಾವಿರ ಪದವೀಧರರ ಮತಗಳು ಬೇಕು, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ 38 ಸಾವಿರ ಪದವಿಧರರನ್ನು ಮತದಾರರನ್ನಾಗಿ ಸೇರಿಸಲಾಗಿದೆ. ಅನೇಕ ಮಂದಿ ಪದವಿ ಮತದಾರರು, ಸಂಘಸಂಸ್ಥೆಗಳು ಕರೆ ಮಾಡಿ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ಆದ್ದರಿಂದ ಗೆಲ್ಲುವ ಭರವಸೆ ಇದೆ ಎಂದರು.

ಈಗ ಮನವೊಲಿಸುವುದಿದ್ದರೆ ಪಕ್ಷದ ಬಿ ಫಾರ್ಮ್‌ ನೀಡಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆ ಮನವೊಲಿಸಲಿ, ಅದನ್ನು ಬಿಟ್ಟು ಸ್ಪರ್ಧಿಸದಂತೆ ಮನವೊಲಿಸಿದರೆ ಒಪ್ಪುವುದಿಲ್ಲ, ಸ್ಪರ್ಧಿಸುವ ನಿರ್ಧಾರ ಅಚಲ, ಬಿಜೆಪಿ ಬಿಟ್ಟು ಬೇರೆ ಪಕ್ಷದಿಂದ ಸ್ಪರ್ಧಿಸುವುದಿಲ್ಲ, ನಾಮಪತ್ರ ವಾಪಾಸು ಪಡೆಯುವ ಪ್ರಶ್ನೆಯೇ ಇಲ್ಲ ಎಂದರು.

Share this article