ಜಾತಿಗಳ ಹೆಸರಿನಲ್ಲಿ ಹಿಂದುಗಳನ್ನು ಒಡೆಯುವ ಹುನ್ನಾರ ರಾಹುಲ್‌ ಗಾಂಧಿಯದ್ದು: ಚಕ್ರವರ್ತಿ ಸೂಲಿಬೆಲೆ

KannadaprabhaNewsNetwork |  
Published : Oct 07, 2023, 02:20 AM IST
ಹಿಂದು ಜಾಗರಣ ವೇದಿಕೆಯ  | Kannada Prabha

ಸಾರಾಂಶ

ಕಲಬುರಗಿಯಲ್ಲಿ ವಿಶ್ವಗುರು ಭಾರತ ವಿಶೇಷ ಉಪನ್ಯಾಸ ಕಾರ್ಯಕ್ರಮ

ಕಲಬುರಗಿ: ಜಾತಿ ಗಣತಿ ಹೆಸರಿನಲ್ಲಿ, ಜಾತಿ ಜಾತಿಗಳ ಮಧ್ಯೆ ವಿಷಬೀಜ ಬಿತ್ತಿ, ಅಖಂಡವಾಗಿರುವ ಹಿಂದೂಗಳನ್ನು ಒಡೆಯುವ ಹುನ್ನಾರವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೊಂದಿದ್ದಾರೆ ಎಂದು ಖ್ಯಾತ ಚಿಂತಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು. ನಗರದ ಐತಿಹಾಸಿಕ ಕೋಟೆಯ ಮುಂಭಾಗದಲ್ಲಿ ಶುಕ್ರವಾರ ಸಂಜೆ ಹಿಂದು ಜಾಗರಣ ವೇದಿಕೆಯ ಅಡಿಯಲ್ಲಿ ಪ್ರತಿಷ್ಠಾಪನೆ ಮಾಡಲಾದ ಹಿಂದು ಮಹಾಗಣಪತಿಯ ಸಮಿತಿ ವತಿಯಿಂದ ಆಯೋಜಿಸಿದ್ದ, ವಿಶ್ವಗುರು ಭಾರತ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಬಿಹಾರದಲ್ಲಿ ಜಾತಿ ಗಣತಿ ಮಾಡುತ್ತಿದ್ದು, ಇದನ್ನು ಕರ್ನಾಟಕದಲ್ಲಿಯೂ ನಡೆಸಬೇಕು ಎಂದು ಸರ್ಕಾರದ ಹಲವು ಸಚಿವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದು ಒಡೆಯುವ ಕೆಲಸವೆ ಹೊರತು, ಜೋಡಿಸುವ ಕೆಲಸವಲ್ಲ. ಸನಾತನ ಧರ್ಮದ ನಿರ್ಮೂಲನೆ ಮಾಡುವವರು ಈ ನೆಲದಲ್ಲಿ ಬೇರೂರಿದ್ದು, ನನಗೆ ಜೈಲಿಗೆ ಹಾಕುವ ಬೆದರಿಕೆ ನೀಡಿದ್ದಾರೆ. ಆದರೆ, ಜೈಲಿಗೆ ಹೋಗುವುದು ನಮ್ಮಂತಹವರಿಗೆ ಹೊಸದೇನಲ್ಲ. ಹೀಗಾಗಿ ನಿನ್ಯಾವ ಕೊತ್ವಾಲ್ ನಾಯಕ ನನ್ನನ್ನು ಜೈಲಿಗೆ ಹಾಕಲು ಎಂದು ನೇರವಾಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ತಿವಿದರು. ಜಗತ್ತಿನ ೨೦ ರಾಷ್ಟ್ರಗಳು ಭಾರತದಲ್ಲಿ ಒಂದೇ ವೇದಿಕೆಯ ಅಡಿಯಲ್ಲಿ ಕೂತು ಭಾರತದ ಆತಿಥ್ಯವನ್ನು ಸ್ವೀಕರಿಸಿದ್ದು, ಭಾರತದ ಶಕ್ತಿ ಏನೆಂಬುದು ಸಾಬೀತಾಗಿದೆ. ಹೀಗಾಗಿ ಪ್ರಧಾನಿ ಮೋದಿಗೆ ಹಾಗೂ ಅವರ ದೂರದೃಷ್ಟಿಯ ಆಲೋಚನೆಗಳಿಗೆ ಗೌರವ ನೀಡಿದರೆ, ಈ ದೇಶಕ್ಕೆ ಗೌರವ ನೀಡಿದಂತಾಗುತ್ತದೆ ಎಂದರು. ಭಾರತ ವಿಶ್ವಗುರುವಾಗಲು ಎರಡು ಸಣ್ಣ ಗೆರೆಗಳು ಮಾತ್ರ ಬಾಕಿಯಿದ್ದು, ಆ ಕನಸು ನನಸು ಮಾಡುವ ಸಂಕಲ್ಪ ದೇಶದ ಪ್ರಧಾನಿ ಮೋದಿ ಅವರದ್ದಾಗಿದೆ. ಇಂತಹ ಕಾಲಘಟ್ಟಕ್ಕೆ ನಾವೆಲ್ಲರೂ ಸಾಕ್ಷಿಯಾಗುತ್ತಿದ್ದೇವೆ ಎಂದರು. ಭಾರತದ ಮೂಲ ಬೇರು ಸನಾತನ ಧರ್ಮ, ಇದನ್ನು ನಿಮೂ೯ಲನೆ ಮಾಡಬೇಕೆಂಬ ಸ್ಟಾಲಿನ್ ಕನಸು ನನಸಾಗುವುದಿಲ್ಲ. ಇದಕ್ಕೆ ಪೂರಕವಾಗಿ ಸಿದ್ದರಾಮಯ್ಯನವರ ಸಂಪೂರ್ಣ ಕ್ಯಾಬಿನೆಟ್ ಸಚಿವರು ಶಕ್ತಿ ಹಾಕಿದ್ರೂ, ಭಾರತ ಹೆಸರನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದರು. ಯಾವ ದೇಶವನ್ನು ಹಾವಾಡಿಗರ ದೇಶ, ಬುದ್ಧಿ ಇಲ್ಲದವರ ದೇಶವೆಂದು ಹೇಳಿದ ದೇಶಗಳಿಗೆ ಭಾರತ ಕೋವಿಡ್ ಕಾಲದಲ್ಲಿ ವ್ಯಾಕ್ಸಿನ್ ವಿತರಣೆ ಮಾಡಿತು. ಇಂತಹ ಸೇವಾ ಮನೋಭಾವ ಹೊಂದಿರುವ ನಾಯಕನನ್ನು ಸೋಲಿಸುವ ಹುನ್ನಾರವನ್ನು ಇಂಡಿಯಾ ಒಕ್ಕೂಟ ಹೊಂದಿದ್ದು, ನಿಮ್ಮ ಕನಸು ೨೦೨೪ರಲ್ಲಿಯೂ ಕೂಡ ನೆರವೇರುವುದಿಲ್ಲ. ಹೀಗಾಗಿ ನಾವೆಲ್ಲರೂ ದೇಶವನ್ನು ವಿಶ್ವದಾದ್ಯಂತ ಗಟ್ಟಿಯಾಗಿ ನಿಲ್ಲಿಸುವಂತಹ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವ ಸಂಕಲ್ಪ ಮಾಡೋಣಾ ಎಂದರು. ಹಿಂಜಾವೇ ಜಿಲ್ಲಾಧ್ಯಕ್ಷ ನಾಗೇಂದ್ರ ಕಾಬಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಸಂಸದ ಡಾ.ಉಮೇಶ್ ಜಾಧವ್, ಮೇಯರ್ ವಿಶಾಲ ದರ್ಗಿ, ಸಂಜೀವ್ ಗುಪ್ತಾ, ಬಸವರಾಜ ದೇಶಮುಖ್, ಚಂದು ಪಾಟೀಲ್, ಶಿವರಾಜ್ ಪಾಟೀಲ್ ರದ್ದೇವಾಡಗಿ, ಸುರೇಶ್ ಟೆಂಗಳಿ, ರವೀಂದ್ರ ಮುತ್ತಿನ, ಮಲ್ಲಿಕಾರ್ಜುನ ಗಂಗಾ, ಸಿದ್ದಾಜಿ ಪಾಟೀಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಯ್ಯಪ್ಪನ ಮಾಲೆ ಧರಿಸಿದ ಬಾಲಕನ ಮೇಲೆ ಶಿಕ್ಷಕ ಹಲ್ಲೆ!
ತಂದೆಗೆ ಕಿರುಕುಳ ನೀಡದಂತೆ ಚೈತ್ರಾ ಕುಂದಾಪುರಗೆ ಆದೇಶ