ಮಿತ್ರ ಪಕ್ಷ ಮುಳುಗಿಸುತ್ತಿರುವ ರಾಹುಲ್‌ ಗಾಂಧಿ

KannadaprabhaNewsNetwork |  
Published : Nov 15, 2025, 02:15 AM IST
454664 | Kannada Prabha

ಸಾರಾಂಶ

ಆರ್‌ಜೆಡಿ ಅಧಿಕಾರಕ್ಕೆ ಬಂದರೆ ಮತ್ತೆ ಜಂಗಲ್‌ ರಾಜ್ಯ ಬರುತ್ತದೆ ಎಂದುಕೊಂಡು ಎನ್‌ಡಿಎಗೆ ಮತ ಹಾಕುವ ಮೂಲಕ ಮಂಗಲ ರಾಜ್ಯಕ್ಕೆ ಜನ ಮನ್ನಣೆ ನೀಡಿದೆ.

ಹುಬ್ಬಳ್ಳಿ:

ಕಾಂಗ್ರೆಸ್‌ ಪಕ್ಷ ಮುಳುಗುತ್ತಿರುವ ಹಡಗು. ರಾಹುಲ್‌ ಗಾಂಧಿ ತಮ್ಮೊಂದಿಗೆ ಮಿತ್ರಪಕ್ಷಗಳನ್ನೂ ಮುಳುಗಿಸುತ್ತಿದ್ದಾರೆ ಎಂದಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ರಾಹುಲ್‌ ಗಾಂಧಿ ಸೋಲಿನ ಶತಕ ಬಾರಿಸಿದಂತಾಗಿದೆ ಎಂದು ಟೀಕಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್‌ಜೆಡಿ ಅಧಿಕಾರಕ್ಕೆ ಬಂದರೆ ಮತ್ತೆ ಜಂಗಲ್‌ ರಾಜ್ಯ ಬರುತ್ತದೆ ಎಂದುಕೊಂಡು ಎನ್‌ಡಿಎಗೆ ಮತ ಹಾಕುವ ಮೂಲಕ ಮಂಗಲ ರಾಜ್ಯಕ್ಕೆ ಜನ ಮನ್ನಣೆ ನೀಡಿದೆ. ಇದಕ್ಕಾಗಿ ಬಿಹಾರ ಜನತೆಗೆ ಧನ್ಯವಾದಗಳು ಎಂದು ಇದೇ ವೇಳೆ ತಿಳಿಸಿದ್ದಾರೆ.

ರಾಹುಲ್ ಗಾಂಧಿ ನಾಯಕತ್ವದಲ್ಲಿ ಕಾಂಗ್ರೆಸ್‌ ಪಕ್ಷ ದೇಶದೆಲ್ಲೆಡೆ ಮುಳುಗುತ್ತಿದೆ. ಅವರ ʼವೋಟ್‌ಚೋರಿʼ ವೃಥಾ ಆರೋಪದ ತಂತ್ರಗಾರಿಕೆಗೆ ಬಿಹಾರದ ಜನ ಸೊಪ್ಪು ಹಾಕಲಿಲ್ಲ ಎಂದು ಪ್ರತಿಕ್ರಿಯಿಸಿದರು.

ಬಿಹಾರದಲ್ಲಿ ಕಾಂಗ್ರೆಸ್‌ ಪಕ್ಷ ಒಂದಂಕಿ ಫಲಿತಾಂಶಕ್ಕೆ ಸೀಮಿತವಾದಂತಾಗಿದೆ. ರಾಹುಲ್‌ ಗಾಂಧಿ ತಮ್ಮ ಮಿತ್ರಪಕ್ಷಗಳ ಅಸ್ತಿತ್ವವನ್ನೂ ಕಳೆಯುತ್ತಿದ್ದಾರೆ. ರಾಹುಲ್‌ ಗಾಂಧಿ ಯಾವಾಗಲೂ ಪರಮಾಣು ಮತ್ತು ಹೈಡ್ರೋಜನ್ ಬಾಂಬ್‌ಗಳ ಬಗ್ಗೆಯೇ ಮಾತನಾಡುತ್ತಿದ್ದರು. ಅವರು ಈ ಎಲ್ಲ ಬಾಂಬ್‌ಗಳನ್ನು ತಮ್ಮದೇ ಪಕ್ಷ ಮತ್ತು ಮಿತ್ರಪಕ್ಷಗಳ ಮೇಲೆ ಸ್ಫೋಟಿಸಿದ್ದಾರೆ ಎಂದು ಟಾಂಗ್‌ ಕೊಟ್ಟರು.

ರಾಹುಲ್ ಗಾಂಧಿ ದೇಶದ ಒಂದು ಸಾಂವಿಧಾನಿಕ ಸಂಸ್ಥೆ ಮತ್ತು ವ್ಯವಸ್ಥೆಯ ಮೇಲೆಯೇ ಗೂಬೆ ಕೂರಿಸುವ ಪ್ರಯತ್ನ ಮಾಡಿದರು. ವೋಟ್‌ ಚೋರಿ, ಮತಯಂತ್ರ ಲೋಪ ಹೀಗೆ ಇಲ್ಲಸಲ್ಲದ ಆರೋಪ ಮಾಡಿ ಮತದಾರರ ದಿಕ್ಕುತಪ್ಪಿಸಲೆತ್ನಿಸಿ ಒಳ್ಳೆಯ ಫಲ ಕಂಡುಕೊಂಡಿದ್ದಾರೆ. ರಾಹುಲ್‌ ಗಾಂಧಿ ಅವರು ಸೋಲಿನ ಶತಕ ಬಾರಿಸಿದಂತಾಗಿದೆ ಇದಕ್ಕಾಗಿ ಅವರಿಗೂ ಅಭಿನಂದನೆಗಳು ಎಂದು ವ್ಯಂಗ್ಯ ವಾಡಿದರು.

ಕಾಂಗ್ರೆಸ್‌ ಮತ್ತು ಮಹಾ ಘಟಬಂಧನ್‌ನ ಎಲ್ಲ ಆರೋಪಗಳನ್ನು ಬಿಹಾರದ ಜನ ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ಇದು ಅವರ ವೋಟ್‌ ಚೋರಿ ಆರೋಪಕ್ಕೆ ತಕ್ಕ ಪ್ರತ್ಯುತ್ತರವಾಗಿದೆ. ರಾಹುಲ್‌ ಗಾಂಧಿ ಇನ್ನಾದರೂ ಮತದಾರರು, ಸಂವಿಧಾನ ಮತ್ತು ಸಂವಿಧಾನಿಕ ಸಂಸ್ಥೆಗಳನ್ನು ಗೌರವಿಸಲಿ ಎಂದು ಚಾಟಿ ಬೀಸಿದರು.

ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟ ಐತಿಹಾಸಿಕ ಗೆಲುವು ದಾಖಲಿಸಿದೆ. ಇದು ಪ್ರಧಾನಿ ನರೇಂದ್ರ ಮೋದಿ ಮತ್ತು ನಿತೀಶ್ ಕುಮಾರ್ ಅವರ ನಾಯಕತ್ವಕ್ಕೆ ಮತದಾರರು ನೀಡಿದ ಜನಾದೇಶ. ಇದಕ್ಕಾಗಿ ಬಿಹಾರದ ಜನರಿಗೆ ಧನ್ಯವಾದ ಹೇಳುತ್ತೇನೆ ಎಂದರು.

ಕರ್ನಾಟಕದಲ್ಲಿ 136 ಸೀಟು ಗೆದ್ದಾಗ ವೋಟ್‌ ಚೋರಿಯಾಗಿತ್ತಾ? ರಾಹುಲ್ ಗಾಂಧಿ ಭಾಷೆಯನ್ನು ಸಿದ್ದರಾಮಯ್ಯ ಮಾತನಾಡುತ್ತಾರೆ. ಎಲ್ಲಿ‌ ಕುರ್ಚಿ ಹೋಗುತ್ತದೆ ಎಂಬ ಆತಂಕದಲ್ಲಿ‌ ಮಾತನಾಡುತ್ತಾರೆ. ರಾಹುಲ್‌ ನಾಯಕತ್ವದಿಂದಲೇ ಈ ಪರಿಸ್ಥಿತಿ ಬಂದಿದೆ ಎನ್ನುವುದು ಸಿದ್ದರಾಮಯ್ಯಗೂ ಗೊತ್ತು ಎಂದರು.

ದೆಹಲಿ ಬಾಂಬ್‌ ಬ್ಲಾಸ್ಟ್‌ ಬಿಹಾರ ಚುನಾವಣೆಗೆ ಬಳಕೆ ಮಾಡಿಕೊಳ್ಳಲಾಗಿದೆ ಎಂಬ ಕಾಂಗ್ರೆಸ್‌ ಆರೋಪಕ್ಕೆ ಕಟುವಾಗಿ ಪ್ರತಿಕ್ರಿಯಿಸಿದ ಜೋಶಿ, ಕಾಂಗ್ರೆಸ್ ಅವಧಿಯಲ್ಲಿ ವರ್ಷಕ್ಕೆ ಎರಡ್ಮೂರು ಘಟನೆಗಳು ನಡೆದಿವೆ. ಯಾಸೀನ್ ಮಲ್ಲಿಕಗೆ ಝೆಡ್+ ಸೆಕ್ಯುರಿಟಿ ಕೊಟ್ಟಿದ್ದರು. ಅವನನ್ನು ಕರೆತಂದು ಪ್ರಧಾನಿ ಜತೆ ಶೇಕ್ ಹ್ಯಾಂಡ್ ಮಾಡಿದಾಗ ಯಾವ ಚುನಾವಣೆ ಇತ್ತು? ಮುಂಬೈ ದಾಳಿಯಾದಾಗ ಯಾವ ಚುನಾವಣೆ ಇತ್ತು. ಕಾಂಗ್ರೆಸ್ ಮತ್ತು ಪಾಕಿಸ್ತಾನದ ಭಾಷೆ ಯಾವತ್ತೂ ಒಂದೇ ಇರುತ್ತದೆ. ಕಾಂಗ್ರೆಸ್ ಚಿಂತನೆ, ಪಾಕಿಸ್ತಾನದ ಚಿಂತನೆ ಎರಡು ಒಂದೇ ಆಗಿರುತ್ತದೆ. ದೊಡ್ಡ ಷಡ್ಯಂತ್ರ ವಿಫಲಗೊಳಿಸುವಲ್ಲಿ ನಮ್ಮ ಏಜೆನ್ಸಿಗಳ ಶ್ರಮಿಸಿವೆ. ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಕಾಂಗ್ರೆಸ್ ಪಾಕಿಸ್ತಾನದ ಪರವಾಗಿ ಹೇಳಿಕೆ‌ ಕೊಡುತ್ತಿದೆ ಎಂದು ಜೋಶಿ ಟೀಕಿಸಿದರು.

PREV

Recommended Stories

ಎರಡನೇ ಬೆಳೆಗಿಲ್ಲ ತುಂಗಭದ್ರಾ ನೀರು
ಬಿಹಾರ ಜನರಿಂದ ಕಾಂಗ್ರೆಸ್‌ಗೆ ತಕ್ಕ ಉತ್ತರ: ಜಿ.ಐ. ಹೆಗಡೆ