ಆ.೫ರಂದು ಬೆಂಗಳೂರಿನಲ್ಲಿ ರಾಹುಲ್ ಪ್ರತಿಭಟನೆ: ಸಚಿವ ಚಲುವರಾಯಸ್ವಾಮಿ

KannadaprabhaNewsNetwork |  
Published : Aug 03, 2025, 01:30 AM IST
೨ಕೆಎಂಎನ್‌ಡಿ-೩ಮಂಡ್ಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿದರು. | Kannada Prabha

ಸಾರಾಂಶ

ರಾಹುಲ್ ಗಾಂಧಿ ಅವರು ಮತ ಕಳ್ಳತನದ ಕುರಿತಾಗಿ ಗಂಭೀರ ಚರ್ಚೆ ನಡೆಸಲಿದ್ದಾರೆ. ದಾಖಲೆಯ ಸಮೇತ ಸತ್ಯ ಬಿಚ್ಚಿಡಲಿದ್ದಾರೆ. ರಾಷ್ಟ್ರದಲ್ಲಿ ಬಿಜೆಪಿ ಅಧಿಕಾರದಲ್ಲಿರುವುದರಿಂದ ಆದಾಯ ತೆರಿಗೆ ಇಲಾಖೆ, ಇಡಿ ಜೊತೆಗೆ ಚುನಾವಣಾ ಆಯೋಗ ಅದರ ದುರುಪಯೋಗ ಮಾಡಿಕೊಳ್ಳುತ್ತಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕಳೆದ ಲೋಕಸಭಾ ಚುನಾವಣೆಯಲ್ಲಿ ಮತ ಕಳ್ಳತನ ನಡೆದಿರುವ ಕುರಿತು ರಾಹುಲ್ ಗಾಂಧಿ ನೇತೃತ್ವದಲ್ಲಿ ಆ.೫ ರಂದು ಬೆಳಗ್ಗೆ ೧೧ ಗಂಟೆಗೆ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್‌. ಚಲುವರಾಯಸ್ವಾಮಿ ಹೇಳಿದರು.

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದು, ಪ್ರತಿಭಟನೆಯಲ್ಲಿ ಕೆ.ಸಿ.ವೇಣುಗೋಪಾಲ್, ರಣದೀಪ್‌ಸಿಂಗ್ ಸುರ್ಜೇವಾಲ, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸೇರಿ ಎಲ್ಲಾ ಮಂತ್ರಿಗಳು, ಶಾಸಕರು, ಕಾಂಗ್ರೆಸ್‌ನ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಭಾಗಿಯಾಗಲಿದ್ದಾರೆ ಎಂದರು.

ಮಂಡ್ಯ ಜಿಲ್ಲೆಯಿಂದ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಭಾಗವಹಿಸಬೇಕು, ಜಿಲ್ಲೆಯಿಂದ ಕನಿಷ್ಠ ೫ ಸಾವಿರ ಜನರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ. ಸಾಧ್ಯವಾದಷ್ಟು ಯುವಕರು ಭಾಗಿಯಾಗಿ ರಾಷ್ಟ್ರದ ಸ್ಥಿತಿಗತಿಯ ಕುರಿತು ತಿಳಿದುಕೊಳ್ಳಬೇಕು ಎಂದರು.

ಪ್ರತಿಭಟನೆಯಲ್ಲಿ ರಾಹುಲ್ ಗಾಂಧಿ ಅವರು ಮತ ಕಳ್ಳತನದ ಕುರಿತಾಗಿ ಗಂಭೀರ ಚರ್ಚೆ ನಡೆಸಲಿದ್ದಾರೆ. ದಾಖಲೆಯ ಸಮೇತ ಸತ್ಯ ಬಿಚ್ಚಿಡಲಿದ್ದಾರೆ. ರಾಷ್ಟ್ರದಲ್ಲಿ ಬಿಜೆಪಿ ಅಧಿಕಾರದಲ್ಲಿರುವುದರಿಂದ ಆದಾಯ ತೆರಿಗೆ ಇಲಾಖೆ, ಇಡಿ ಜೊತೆಗೆ ಚುನಾವಣಾ ಆಯೋಗ ಅದರ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ಈ ಹಿಂದೆಯೂ ಚುನಾವಣಾ ಆಯೋಗದ ವಿರುದ್ಧ ಆರೋಪ ಮಾಡಿದ್ದೇವೆ. ಆಗ ಯಾರು ಅಷ್ಟೊಂದು ಗಂಭೀರವಾಗಿ ಪರಿಗಣಿಸಿರಲಿಲ್ಲ. ನಮ್ಮವರೂ ಸ್ವಲ್ಪ ಊದಾಸಿನಿನ ತೋರಿದ್ದರು. ಚುನಾವಣಾ ಆಯೋಗದಿಂದ ಆಕ್ರಮ ನಡೆಯಲ್ಲ ಎಂಬ ನಂಬಿಕೆ ಇತ್ತು. ಆದರೆ, ಈಗ ಚುನಾವಣೆಯಲ್ಲಿ ಅಕ್ರಮ ನಡೆದಿರುವುದು ಪಕ್ಷದಿಂದ ನಡೆಸಲಾದ ಸರ್ವೇಯಿಂದ ಸಾಬೀತಾಗಿರುವುದು ಕಂಡು ಬಂದಿದೆ ಎಂದರು.

ಮತ ಕಳ್ಳತನಕ್ಕಕೆ ಚುನಾವಣಾ ಆಯೋಗವನ್ನು ಬಳಸಿಕೊಂಡಿರುವುದು ಪ್ರಜಾಪ್ರಭುತ್ವಕ್ಕೆ ಮಾರಕ. ಪ್ರಜಾಪ್ರಭುತ್ವ ಉಳಿಯಬೇಕು ಎಂದರೆ ಆಡಳಿತದಲ್ಲಿ ಪಾರದರ್ಶಕತೆ ಕಾಪಾಡಬೇಕಿದೆ. ಇವಿಎಂ ಯಂತ್ರಕ್ಕೂ ಮತಕಳ್ಳತನಕ್ಕೂ ಸಂಬಂಧವಿಲ್ಲ. ಇವಿಎಂ ಯಂತ್ರದ ಅನುಮಾನವೇ ಬೇರೆ, ಮತಪಟ್ಟಿ ಅಕ್ರಮವೇ ಬೇರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ರಾಜ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ರೈತರ ಆತ್ಮಹತ್ಯೆಯನ್ನು ನಿಲ್ಲಿಸಬೇಕು ಅಂದುಕೊಂಡಿದ್ದೇವೆ. ಅದಕ್ಕಾಗಿಯೇ ನಾವು ಐದು ಗ್ಯಾರಂಟಿಯನ್ನು ಕೊಟ್ಟಿದ್ದೇವೆ. ಇಷ್ಟಾದರೂ ರೈತರ ಆತ್ಮಹತ್ಯೆ ಪ್ರಕರಣಗಳು ಮುಂದುವರೆಯುತ್ತಿವೆ. ಯಾವ ಕಾರಣಕ್ಕಾಗಿ ಆತ್ಮಹತ್ಯೆ ಆಗುತ್ತಿವೆ ಎಂಬುದು ನಿಖರವಾಗಿ ತಿಳಿದುಬಂದಿಲ್ಲ. ಈ ಕುರಿತು ಪೊಲೀಸರಿಂದ ಒಂದು ತಂಡ ರಚಿಸಿ ತನಿಖೆ ಮಾಡಿಸಿದ್ದೇವೆ ಎಂದರು.

ಮುಖ್ಯಮಂತ್ರಿಗಳು ಖಾಸಗಿ ಸಂಸ್ಥೆಯಿಂದ ತನಿಖೆ ನಡೆಸಲು ಸೂಚನೆ ನೀಡಿದ್ದಾರೆ. ಪ್ರಸ್ತುತ ರೈತ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಕಡಿಮೆ ಆಗಿದೆ. ಆದರೆ, ಕಡಿಮೆ ಆಗಿರೋದು ಖುಷಿ ತಂದಿಲ್ಲ ರೈತ ಆತ್ಮಹತ್ಯೆ ಸಂಪೂರ್ಣ ನಿಲ್ಲಬೇಕು ಎಂದರು.

ರಾಜ್ಯ ಸರ್ಕಾರಕ್ಕೆ ರಸಗೊಬ್ಬರ ಕಳುಹಿಸುವುದು ಕೇಂದ್ರ ಸರ್ಕಾರ ರಸಗೊಬ್ಬರ ತಯಾರಿಕೆ ಮಾಡುವ ಅಧಿಕಾರ ಇರುವುದು ಕೇಂದ್ರ ಸರ್ಕಾರಕ್ಕೆ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ಅವರಿಗೆ ಇದರ ಕುರಿತಾಗಿ ಸಾಮಾನ್ಯ ಜ್ಞಾನ ಇಲ್ಲ. ಕೇಂದ್ರದಿಂದ ರಾಜ್ಯ ಸರ್ಕಾರಕ್ಕೆ ನೀಡಬೇಕಿದ್ದ ೧.೨೫ ಸಾವಿರ ಮೆಟ್ರಿಕ್ ಟನ್ ರಸಗೊಬ್ಬರವನ್ನು ಕೇಂದ್ರ ನೀಡಿಲ್ಲ. ಇದರಿಂದ ಸಣ್ಣ ಪ್ರಮಾಣದಲ್ಲಿ ರಸಗೊಬ್ಬರ ವಿತರಣೆಯಲ್ಲಿ ವಿಳಂಬವಾಗಿದೆ ಅಷ್ಟೇ ಎಂದರು.

ಸುದ್ದಿಗೋಷ್ಠಿಯಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಅಧ್ಯಕ್ಷ ರಮೇಶ ಬಂಡಿಸಿದ್ದೇಗೌಡ, ಮೈಷುಗರ್ ಕಂಪನಿ ಅಧ್ಯಕ್ಷ ಸಿ.ಡಿ.ಗಂಗಾಧರ್, ಜಿಲ್ಲಾ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಶುಭದಾಯಿನಿ, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಚಿದಂಬರ್ ಇತರರಿದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...