ರಾಯಚೂರು ಕಾಂಗ್ರೆಸ್‌ ಬಣ ರಾಜಕಾರಣ ಬೆಂಗಳೂರಿನಲ್ಲಿ ಬಟಾ ಬಯಲು

KannadaprabhaNewsNetwork | Published : Mar 12, 2025 12:45 AM

ಸಾರಾಂಶ

ಅಧಿಕಾರಿಗಳ ವರ್ಗಾವಣೆ, ಆಡಳಿತದಲ್ಲಿ ಹಸ್ತಕ್ಷೇಪ ವಿಚಾರವಾಗಿ ಉಭಯ ಸಚಿವರು ಹಾಗೂ ಜಿಲ್ಲಾ ಕಾಂಗ್ರೆಸ್ ಬಣಗಳ ನಡುವೆ ನಿರಂತರವಾಗಿ ಆಂತರಿಕ ಸಂಘರ್ಷದ ಜ್ವಾಲೆಯು ಕೊತಕೊತ ಕುದಿಯುತ್ತಿತ್ತು, ಆದರೆ ಸಿಎಲ್‌ಪಿ ಸಭೆಯಲ್ಲಿ ಅದು ಭಾರಿ ಪ್ರಮಾಣದಲ್ಲಿ ಸ್ಫೋಟಗೊಂಡು ಸಂಚಲನ ಮೂಡಿಸಿದೆ.

ರಾಮಕೃಷ್ಣ ದಾಸರಿ

ಕನ್ನಡಪ್ರಭ ವಾರ್ತೆ ರಾಯಚೂರುಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಸೋಮವಾರ ರಾತ್ರಿ ನಡೆದ ಕಾಂಗ್ರೆಸ್‌ ಶಾಸಕಾಂಗ ಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಮತ್ತು ಜಿಲ್ಲೆಯವರಾದ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್‌.ಎಸ್‌.ಬೋಸರಾಜು ಅವರ ನಡುವೆ ಜೋರು ಮಾತಿನ ಸಮರ ನಡೆದಿದ್ದು, ಇಷ್ಟು ದಿನ ಜಿಲ್ಲಾಮಟ್ಟದಲ್ಲಿಯೇ ಸಾಗಿದ್ದ ಕಾಂಗ್ರೆಸ್‌ ಪಕ್ಷದ ಬಣಗಳ ದ್ವೇಷ ರಾಜಕೀಯವು ಇದೀಗ ರಾಜ್ಯ ನಾಯಕರ ಮುಂದೆ ಸ್ಫೋಟಗೊಂಡಂತಾಗಿದೆ.ಅಧಿಕಾರಿಗಳ ವರ್ಗಾವಣೆ, ಆಡಳಿತದಲ್ಲಿ ಹಸ್ತಕ್ಷೇಪ ವಿಚಾರವಾಗಿ ಉಭಯ ಸಚಿವರು ಹಾಗೂ ಜಿಲ್ಲಾ ಕಾಂಗ್ರೆಸ್ ಬಣಗಳ ನಡುವೆ ನಿರಂತರವಾಗಿ ಆಂತರಿಕ ಸಂಘರ್ಷದ ಜ್ವಾಲೆಯು ಕೊತಕೊತ ಕುದಿಯುತ್ತಿತ್ತು, ಆದರೆ ಸಿಎಲ್‌ಪಿ ಸಭೆಯಲ್ಲಿ ಅದು ಭಾರಿ ಪ್ರಮಾಣದಲ್ಲಿ ಸ್ಫೋಟಗೊಂಡು ಸಂಚಲನ ಮೂಡಿಸಿದ್ದು, ಸಚಿವಧ್ವಯರ ವಾಗ್ವಾದವು ಇಷ್ಟು ದಿನ ಅವಿತ್ತಿದ್ದ ಅಸಮಾಧಾನ, ಕೋಪ-ಆಕ್ರೋಶಗಳ ಕಟ್ಟೆ ಹೊಡೆದು ನಮ್ಮಲ್ಲಿ ಏನೂ ಸರಿಯಿಲ್ಲ ಎನ್ನುವ ಸಂದೇಶವನ್ನು ಸಾರಿದೆ.ಏಕೆ ವಾಗ್ವಾದ ?: ಸಭೆ ಕೊನೆ ಹಂತ ತಲುಪಿದ್ದ ಸಮಯದಲ್ಲಿ ಸಚಿವ ಎನ್‌.ಎಸ್‌.ಬೋಸರಾಜು ಅವರು ಅಧಿಕಾರಿಯೊಬ್ಬರ ವರ್ಗಾವಣೆ ವಿಚಾರವಾಗಿ ನಾನು ಜಿಲ್ಲೆಯವನಾಗಿದ್ದು, ನಮ್ಮ ಗಮನಕ್ಕೆ ತಾರದೇ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್‌ ಅವರು ಶಿಫಾರಸು ಪತ್ರ ನೀಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಕುಪಿತಕೊಂಡ ಡಾ.ಶರಣಪ್ರಕಾಶ ಪಾಟೀಲ್‌ ಅವರು ನಾನು ಜಿಲ್ಲಾ ಉಸ್ತುವಾರಿ, ಶಾಸಕರು ಪತ್ರವನ್ನು ನೀಡಿದರೆ ಅವರಿಗೆ ಪತ್ರ ನೀಡಿದ್ದೇನೆ. ಜಿಲ್ಲೆ ಶಾಸಕರ ಬೇಡಿಕೆಯನ್ನು ಸ್ಪಂದಿಸೋದು ನನ್ನ ಜವಾಬ್ದಾರಿಯಾಗಿದೆ ಎಂದು ತಿರುಗೇಟು ನೀಡಿದ್ದಾರೆ.ಗ್ರಾಮೀಣ ಶಾಸಕ ಬಸನಗೌಡ ದದ್ದಲ್‌ ಅವರು ಪತ್ರ ನೀಡಿದ್ದಕ್ಕೆ ಬೋಸರಾಜು ಗರಂಗೊಂಡಿದ್ದು, ನನ್ನ ಕೇಳದೇ ಪತ್ರ ನೀಡಿದ್ದಕ್ಕೆ ಉಸ್ತುವಾರಿ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಉಭಯ ಸಚಿವರ ನಡುವೆ ಮಾತಿಗೆ ಮಾತು ಬೆಳೆದು ಗದ್ದಲ ಉಂಟಾಗಿದ್ದು, ತಕ್ಷಣ ಸಭೆಯಲ್ಲಿದ್ದ ಸಿಎಂ ಸಿದ್ದರಾಮಯ್ಯ ಹಾಗೂ ಇತರೆ ನಾಯಕರು ಮಧ್ಯಪ್ರವೇಶ ಮಾಡಿ ಇಬ್ಬರನ್ನು ಸಮಧಾನಪಡಿಸಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.ಬಣ ರಾಜಕೀಯದ ಸಂಘರ್ಷ ಹೊಸದಲ್ಲರಾಯಚೂರು ಜಿಲ್ಲಾ ಕಾಂಗ್ರೆಸ್‌ ಸಮಿತಿಯಲ್ಲಿ ಬಣಗಳ ಸಂಘರ್ಷ, ಗುಂಪುಗಳ ನಡುವೆ ರಾಜಕೀಯ ಹೊಸದಲ್ಲ. ಕಳೆದ ಹಲವು ವರ್ಷಗಳಿಂದ ಸಚಿವ ಎನ್‌.ಎಸ್‌.ಬೋಸರಾಜು ಹಾಗೂ ಎಂಎಲ್ಸಿ ಎ.ವಸಂತ ಕುಮಾರ ನಡುವಿನ ಬಣಗಳ ನಡುವೆ ನಿರಂತರವಾಗಿ ಜಗಳಗಳು ಆಗಾಗ ಸಂಭವಿಸುತ್ತಲೇ ಇವೆ. ಚುನಾವಣೆ ಸಮಯದಲ್ಲಿ ಟಿಕೆಟ್ ಪಡೆಯಲು, ನಗರಸಭೆಯಲ್ಲಿ ಅಧಿಕಾರ ಹಿಡಿಯಲು, ಬೇಕಾದ ಅಧಿಕಾರಿ ಗಳನ್ನು ತಂದರೇ ಅವರನ್ನು ಹೇಳದೇ ಕೇಳದೇ ವರ್ಗಾವಣೆ ಮಾಡಿಸೋದು, ತಮ್ಮ ಮಾತು ಕೇಳುವ ಅಧಿಕಾರಿಗಳಿಂದ ವಿರೋಧಿ ಬಣಗಳ ಆಟ ನಡೆಯದಂತೆ ನೋಡಿಕೊಳ್ಳುವುದು ಹೀಗೆ ಜಿಲ್ಲಾ ‘ಕೈ’ ಪಕ್ಷ ದಲ್ಲಿ ಒಬ್ಬರಿಗೊಬ್ಬರು ಕಾಲು ಎಳೆಯುವ ಪದ್ಧತಿ ಸರ್ವೇಸಾಮಾನ್ಯವಾಗಿ ಬಿಟ್ಟಿತ್ತು. ಆದರೆ ಜಿಲ್ಲಾ ಮಟ್ಟಕ್ಕೆ ಸೀಮಿತಗೊಂಡಿದ್ದ ಗುಂಪು ಸಂಘರ್ಷವು ಇದೀಗ ಸಿಎಂ, ಡಿಸಿಎಂ, ಸಚಿವರು, ಶಾಸಕರು ಹಾಗೂ ಎಂಎಲ್ಸಿಗಳ ಮುಂದೆಯೇ ಜರುಗಿ, ಇಬ್ಬರ ನಡುವೆ ರಾಯಚೂರಿನ ಸಮಗ್ರ ಅಭಿವೃದ್ಧಿ ಎತ್ತ ಸಾಗಿದೆ ಎಂಬಾಂತಾಗಿದ್ದು, ಇಲ್ಲಿನ ಆಡಳಿತದ ದುರ್ಗತಿಯನ್ನು ಬಿಂಬಿಸುವಂತೆ ಮಾಡಿದೆ.

Share this article