ಬಿಸಿಲನಾಡಿನಲ್ಲಿ ಗರಿಷ್ಠ ತಾಪಮಾನದ ತಾಂಡವ

KannadaprabhaNewsNetwork |  
Published : Apr 07, 2024, 01:52 AM IST
06ಕೆಪಿಆರ್‌ಸಿಆರ್‌02ಮತ್ತು02ಅ: | Kannada Prabha

ಸಾರಾಂಶ

43 ಡಿಗ್ರಿ ಸೆಲ್ಸಿಯಸ್ ತಲುಪಿದ ಉಷ್ಣಾಂಶ, ಬಿಸಿಲಿಗೆ ಜನ ಹೈರಾಣ. ರಾಯಚೂರು ಜಿಲ್ಲಾಡಳಿತದಿಂದ ರಸ್ತೆಯಲ್ಲಿ ವಾಹನ ಸವಾರರಿಗೆ ನೆರಳಿನ ವ್ಯವಸ್ಥೆ ಮಾಡಲಾಗಿದೆ. ಮಕ್ಕಳು, ಮಹಿಳೆಯರು, ಗರ್ಭೀಣಿಯರು, ವೃದ್ಧರಲ್ಲಿ ನಿರ್ಜಲೀಕರಣ ಪ್ರಮಾಣವು ಹೆಚ್ಚಾಗುತ್ತಿದ್ದು, ನೆರಳಿನ ಆಸರೆಯ ಜೊತೆಗೆ ತಂಪು-ಪಾನೀಯಗಳ ಮೊರೆ ಹೋಗುತ್ತಿದ್ದಾರೆ.

ರಾಮಕೃಷ್ಣ ದಾಸರಿ

ಕನ್ನಡಪ್ರಭ ವಾರ್ತೆ ರಾಯಚೂರು

ಪ್ರಸಕ್ತ ಸಾಲಿನ ಬೇಸಿಯ ತಾಪವು ದಿನೇ ದಿನೆ ತಾರಕಕ್ಕೇರುತ್ತಿದ್ದು, ಬಿಸಿಲನಾಡಿನಲ್ಲಿ ಗರಿಷ್ಠ ತಾಪಮಾನವು ತಾಂಡವಾಡುತ್ತಿರುವುದರಿಂದ ಜನರ ಬದುಕಿನಲ್ಲಿ ಏರುಪೇರಾಗುತ್ತಿದೆ.

ನಗರ ಸೇರಿದಂತೆ ಜಿಲ್ಲೆಯಾದ್ಯಂತ ಬೇಸಿಗೆಯ ಸೂರ್ಯನ ತಾಪವು ಗರಿಷ್ಠ ಪ್ರಮಾಣ ತಲುಪುತ್ತಿರುವುದು ಹಲವಾರು ಸಮಸ್ಯೆಗಳನ್ನು ತಂದೊಡ್ಡುವಂತೆ ಮಾಡುತಿದೆ. ಬೇಸಿಗೆ ಆರಂಭದಿಂದಲೂ 40 ಡಿಗ್ರಿ ಸೆಲ್ಸಿಯಸ್ ಹಾಸುಪಾಸಿನಲ್ಲಿ ದಾಖಲಾಗುತ್ತಿದ್ದ ಗರಿಷ್ಠ ಉಷ್ಣಾಂಶವು ಕಳೆದ ಹತ್ತು ದಿನಗಳಿಂದ 42 ಡಿಗ್ರಿಯಲ್ಲಿತ್ತು. ಶನಿವಾರ 43 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು ಇದು ಪ್ರಸಕ್ತ ಸಾಲಿನ ಅತ್ಯಂತ ಗರಿಷ್ಠ ತಾಪಮಾನವಾಗಿದೆ. ಇನ್ನು ರಾತ್ರಿ ಸಮಯದಲ್ಲಿ ಸಹ ವಾತಾವರಣದಲ್ಲಿ ಒಣಗಾಳಿ ಹೆಚ್ಚಾಗುರುತ್ತಿರುವುದರಿಂದ 25 ರಿಂದ 27 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶವು ದಾಖಲಾಗುತ್ತಿರುವುದು ಜಿಲ್ಲೆ ಜನಸಾಮಾನ್ಯರಲ್ಲಿ ಬೇಸಿಗೆಯ ಹಲವಾರು ಸಮಸ್ಯೆಗಳನ್ನು ಅನುಭವಿಸುವಂತೆ ಮಾಡಿದೆ.

ಹೆಚ್ಚಳಕ್ಕೆ ಕಾರಣ:ಬಿಸಿಲನಾಡು ರಾಯಚೂರಿನಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಗರಿಷ್ಠ ತಾಪಮಾನವು ಏರಿಕೆಯಾಗುತ್ತಲೆನೇ ಬರುತ್ತಿದೆ. ಕಳೆದ 2016ರಲ್ಲಿ 43.10 ಗರಿಷ್ಠ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ನಂತರದ ಬೇಸಿಗೆಯಲ್ಲಿ ಗರಿಷ್ಠ ಉಷ್ಣಾಂಶ 40 ರಿಂದ 42ರ ವರೆಗೆ ದಾಖಲಾಗಿತ್ತು ಮತ್ತೆ 2019ರಲ್ಲಿ ಗರಿಷ್ಠ ಉಷ್ಣಾಂಶವು 43 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿತ್ತು. ಆದರೆ ಈ ವರ್ಷ ಏಪ್ರಿಲ್‌ ಆರಂಭದಲ್ಲಿಯೇ 43 ಗಡಿಯನ್ನು ದಾಟಿರುವ ತಾಪಮಾನ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳನ್ನು ಗೋಚರಿಸುವಂತೆ ಮಾಡಿದೆ.

ಕಳೆದ ವರ್ಷದಲ್ಲಿ ಮುಂಗಾರು-ಹಿಂಗಾರು ಮಳೆಗಳು ಸಂಪೂರ್ಣವಾಗಿ ಕೈಕೊಟ್ಟ ಪರಿಣಾಮ ಎಲ್ಲೆಡೆ ತೀವ್ರ ಬರ ಆವರಿಸಿದ್ದರಿಂದ ಜಲಮೂಲಗಳು ಬತ್ತಿ ಹೋಗುತ್ತಿದ್ದು, ಅಂತರ್ಜಲ ಪ್ರಮಾಣವು ಸಹ ಕಡಿಮೆಯಾಗಿದ್ದರಿಂದ ಏಪ್ರಿಲ್‌ ಮೊದಲ ವಾರದಲ್ಲಿಯೇ ಬೇಸಿಗೆಯ ಬಿಸಿಲು ಹೆಚ್ಚಳ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಏನೇ ಇದ್ದರು ಪ್ರಸಕ್ತ ಬೇಸಿಗೆ ಸೂರ್ಯನ ಶಾಖಕ್ಕೆ ಜಿಲ್ಲೆಯ ಎಲ್ಲ ವರ್ಗದ ಮಂದಿ ಮೆತ್ತಗಾಗುತ್ತಿದ್ದಾರೆ.

ಟಿಪ್ಸ್‌ ಪಾಲಿಸಿ:

ತೀವ್ರ ಬೇಸಿಗೆಯ ತಾಪದಿಂದಾಗಿ ಸಾರ್ವಜನಿಕರು ಹೊರಗಡೆ ಬರಲು ಹೆದರುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಮಕ್ಕಳು, ಮಹಿಳೆಯರು, ಗರ್ಭೀಣಿಯರು, ವೃದ್ಧರಲ್ಲಿ ನಿರ್ಜಲೀಕರಣ ಪ್ರಮಾಣವು ಹೆಚ್ಚಾಗುತ್ತಿದ್ದು, ನೆರಳಿನ ಆಸರೆಯ ಜೊತೆಗೆ ತಂಪು-ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಬಿಸಿಲಿನಿಂದಾಗಿ ಜನ ರಾಯಚೂರು ನಗರದ ಟ್ರಾಫಿಕ್‌ ಸಿಗ್ನಲ್‌ಗಳಲ್ಲಿ ನಿಲ್ಲಲ್ಲು ಸಮಸ್ಯೆ ಅನುಭವಿಸುತ್ತಿರುವುದನ್ನು ಗಮನಿಸಿದ ಜಿಲ್ಲಾಡಳಿತ ನೆರಳಿನ ವ್ಯವಸ್ಥೆಯನ್ನು ಮಾಡಿದೆ. ಅಷ್ಟೇ ಅಲ್ಲದೇ ಬೇಸಿಗೆಯ ಬಿಸಿಲಿನಿಂದ ಬಚಾವ್‌ ಆಗಲು ಅಗತ್ಯ ಟಿಪ್ ಪಾಲಿಸುವಂತೆ ಜಿಲ್ಲಾಡಳಿತ ಸಲಹೆ ಸೂಚನೆಗಳನ್ನು ನೀಡಿದ್ದಾರೆ.ಮಳೆ ಕೊರತೆಯಿಂದಾಗಿ ಈ ಸಾಲಿನ ಬೇಸಿಗೆಯ ಉಷ್ಣಾಂಶವು ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಈ ಪ್ರಮಾಣವು ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.

-ಶಾಂತಪ್ಪ, ಹವಮಾನ ವಿಭಾಗದ ಅಧಿಕಾರಿ, ಕೃಷಿ ವಿಜ್ಞಾನಗಳ ವಿವಿ, ರಾಯಚೂರುಜಿಲ್ಲೆಯಲ್ಲಿ ಪ್ರಸ್ತುತ ಹಾಗೂ ಮುಂಬರುವ ಬೇಸಿಗೆ ದಿನಗಳಲ್ಲಿ ಸೂರ್ಯನ ಶಾಖ ದಿನದಿಂದ ದಿನಕ್ಕೆ ಹೆಚ್ಚಾಗುವ ಹಿನ್ನೆಲೆ ಹೀಟ್ ವೇವ್ (ಶಾಖದ ಹೊಡೆತ) ಹೀಟ್ ವೇವ್ ಸ್ಟ್ರೋಕ್‌ನಿಂದಾಗಿ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿರುವುದರಿಂದ ಎಲ್ಲಾ ಸಾರ್ವಜನಿಕರು ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು.

-ಎಲ್.ಚಂದ್ರಶೇಖರ ನಾಯಕ ಜಿಲ್ಲಾಧಿಕಾರಿ, ರಾಯಚೂರು

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ