ರಾಯಚೂರು ವಿವಿಗೆ ಮಹರ್ಷಿ ವಾಲ್ಮೀಕಿ ಹೆಸರು

KannadaprabhaNewsNetwork |  
Published : Oct 19, 2024, 12:17 AM IST
18ಕೆಪಿಆರ್‌ಸಿಆರ್‌ 01:  | Kannada Prabha

ಸಾರಾಂಶ

ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರಿಶಿಷ್ಟ ವರ್ಗದ ಎಲ್ಲ ವಸತಿ ಶಾಲೆಗಳು ಹಾಗೂ ರಾಯಚೂರು ವಿಶ್ವವಿದ್ಯಾಲಯಕ್ಕೆ ಮಹರ್ಷಿ ವಾಲ್ಮೀಕಿ ಹೆಸರು ನಾಮಕರಣ ಮಾಡಲಾಗುವುದು ಎಂದು ಘೋಷಿಸಿದ್ದಾರೆ. ರಾಜ್ಯ ಸರ್ಕಾರದ ಈ ತೀರ್ಮಾನಕ್ಕೆ ಎಲ್ಲೆಡೆ ಸ್ವಾಗತ ವ್ಯಕ್ತವಾಗುತ್ತಿದೆ.

ರಾಮಕೃಷ್ಣ ದಾಸರಿ

ಕನ್ನಡಪ್ರಭ ವಾರ್ತೆ ರಾಯಚೂರು

ಇಲ್ಲಿನ ವಿಶ್ವವಿದ್ಯಾಲಯಕ್ಕೆ ರಾಜ್ಯ ಸರ್ಕಾರ ಮರು ನಾಮಕರಣ ಮಾಡಿದ್ದು, ಮಹಾಗ್ರಂಥ ಶ್ರೀ ರಾಮಯಣಂ ಬರೆದ ಆದಿಕವಿ ಮಹರ್ಷಿ ವಾಲ್ಮೀಕಿ ಅವರ ಹೆಸರನ್ನು ವಿವಿಗೆ ಇಡುವುದರ ಮೂಲಕ ಈ ಭಾಗದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿರುವ ಪರಿಶಿಷ್ಟ ಪಂಗಡದ ಸಮುದಾಯ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ.

ಬೆಂಗಳೂರಿನ ವಿಧಾನ ಸೌಧದ ಬ್ಯಾಂಕ್ವೇಟ್ ಹಾಲ್‌ನಲ್ಲಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯಿಂದ ಗುರುವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರಿಶಿಷ್ಟ ವರ್ಗದ ಎಲ್ಲ ವಸತಿ ಶಾಲೆಗಳು ಹಾಗೂ ರಾಯಚೂರು ವಿಶ್ವವಿದ್ಯಾಲಯಕ್ಕೆ ಮಹರ್ಷಿ ವಾಲ್ಮೀಕಿ ಹೆಸರು ನಾಮಕರಣ ಮಾಡಲಾಗುವುದು ಎಂದು ಘೋಷಿಸಿದ್ದಾರೆ. ರಾಜ್ಯ ಸರ್ಕಾರದ ಈ ತೀರ್ಮಾನಕ್ಕೆ ಎಲ್ಲೆಡೆ ಸ್ವಾಗತ ವ್ಯಕ್ತವಾಗುತ್ತಿದೆ.

ಹೆಸರಿಗೆ ಅರ್ಹತೆ:

ಪರಿಶಿಷ್ಟ ವರ್ಗದ ಸಮಯದಾಯಕ್ಕೆ ಸೇರಿದ ಜನಸಂಖ್ಯೆಯೇ ಜಾಸ್ತಿ ಇರುವ, ಅತೀ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಇದೇ ಸಮುದಾಯಕ್ಕೆ ಮೀಸಲಾತಿ ಅವಕಾಶ ಕಲ್ಪಿಸಿರುವ ಪ್ರದೇಶದ ವಿವಿಗೆ ಅರ್ಹತೆಗನುಗುಣವಾಗಿಯೇ ವಾಲ್ಮೀಕಿ ಅವರ ಹೆಸರು ನಾಮಕರಣ ಮಾಡಲು ಮುಂದಾಗಿರುವುದು ಉತ್ತಮ ಬೆಳವಣಿಗೆಯಾಗಿದೆ. ವಿಶ್ವ ವಿದ್ಯಾಲಯವು ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿದೆ. ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕು ಮತ್ತು ಯಾದಗಿರಿಯ ಒಂದು ಕ್ಷೇತ್ರ ಸೇರಿ ಒಟ್ಟು ಐದು ವಿಧಾನಸಭಾ ಕ್ಷೇತ್ರಗಳು ಅದೇ ರೀತಿ ಉಭಯ ಜಿಲ್ಲೆಗಳ ವ್ಯಾಪ್ತಿಯ ಲೋಕಸಭಾ ಕ್ಷೇತ್ರವು ಸಹ ಎಸ್ಟಿಗೆ ಮೀಸಲಿರುವುದರಿಂದ ಈ ಭಾಗದ ವಿವಿಗೆ ಮಹರ್ಷಿ ವಾಲ್ಮೀಕಿ ಹೆಸರನ್ನಿಡಬೇಕು ಎನ್ನುವ ಕೂಗು ಬಲವಾಗಿ ಕೇಳಿಬಂದಿತ್ತು ಅದರಂತೆ ಸರ್ಕಾರ ಸ್ಪಂದಿಸಿರುವುದರ ಮುಖಾಂತರ ಇಲ್ಲಿನ ಜನರ ಆಶೋತ್ತರಗಳಿಗೆ ಬೆಲೆ ಕೊಟ್ಟಂತಾಗಿದೆ.

ಹೆಸರಿಟ್ಟರೇ ಸಾಲದು ಅಭಿವೃದ್ಧಿಗೆ ಆದ್ಯತೆ ಕೊಡಿ: ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿರುವ ರಾಯಚೂರು ವಿವಿಗೆ ಆದಿಕವಿ ಮಹರ್ಷಿ ವಾಲ್ಮೀಕಿ ಹೆಸರನ್ನು ಮರುನಾಮಕರಣ ಮಾಡಿರುವುದಷ್ಟೇ ಅಲ್ಲ ವಿವಿ ಸಮಗ್ರ ಅಭಿವೃದ್ಧಿಗೂ ಸರ್ಕಾರ ಹೆಚ್ಚಿನ ಗಮನ ಹರಿಸಬೇಕು. ಹೊಸ ವಿವಿಯ ಭೌತಿಕ ಹಾಗೂ ಉನ್ನತ ಶಿಕ್ಷಣಕ್ಕೆ ಅಗತ್ಯವಾದ ಸವಲತ್ತುಗಳನ್ನು ಕಲ್ಪಿಸುವುದು, ವಿಷಯವಾರು ಬೋಧಕ-ಬೋಧಕೇತರ ಸಿಬ್ಬಂದಿ, ಕಟ್ಟಡಗಳು, ಪೀಠೋಪಕರಣಗಳು, ವಾಹನ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಅವಶ್ಯವಾದ ಅನುದಾನವನ್ನು ಸರ್ಕಾರ ಒದಗಿಸಬೇಕು ಇಷ್ಟೇ ಅಲ್ಲದೇ ಈ ಭಾಗದ ಕೆಕೆಆರ್‌ಡಿಬಿಯಡಿಯಲ್ಲಿಯೂ ವಿಶೇಷ ಅನುದಾನ ನೀಡಿ ವಿವಿಯ ಅಭಿವೃದ್ಧಿಗೆ ಸರ್ಕಾರ, ಜನಪ್ರತಿನಿಧಿಗಳು, ಜಿಲ್ಲಾಡಳಿತ ಹಾಗೂ ಅಧಿಕಾರಿ ವರ್ಗವು ಶ್ರಮಿಸಬೇಕು ಎಂದು ಜನರು ಒತ್ತಾಯಿಸುತ್ತಿದ್ದಾರೆ.

ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ಜಿಲ್ಲೆಯಾಗಿರುವ ರಾಯಚೂರು ವಿಶ್ವವಿದ್ಯಾಲಯಕ್ಕೆ ಮಹರ್ಷಿ ವಾಲ್ಮೀಕಿ ಹೆಸರು ಇಡುವ ನಿರ್ಧಾರ ಸ್ವಾಗತರ್ಹವಾಗಿದೆ. ಈಗಾಗಲೇ ಬೇರೆ ಬೇರೆ ಜಿಲ್ಲೆಗಳ ವಿಶ್ವವಿದ್ಯಾಲಯಗಳಿಗೆ ಮಹನೀಯರುಗಳು ಹಾಗೂ ಇತಿಹಾಸ ಸೃಷ್ಟಿಸಿದ ಗಣ್ಯ ವ್ಯಕ್ತಿಗಳ ಹೆಸರನ್ನು ನಾಮಕರಣ ಮಾಡಲಾಗಿದೆ.ಈ ದೀಷೆಯಲ್ಲಿ ನಮ್ಮ ರಾಯಚೂರು ಜಿಲ್ಲಾ ಕೇಂದ್ರದಲ್ಲಿರುವ ವಿಶ್ವವಿದ್ಯಾಲಯಕ್ಕೆ ಶ್ರೀ ಮಹರ್ಷಿ ವಾಲ್ಮೀಕಿ ಅವರ ಹೆಸರು ನಾಮಕರಣ ಮಾಡುವ ರಾಜ್ಯ ಸರ್ಕಾರದ ನಿರ್ಧಾರ ಸ್ವಾಗತಾರ್ಹ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್‌.ಎಸ್‌.ಬೋಸರಾಜು ಹೇಳಿದರು.

ರಾಮಾಯಣ ಮಹಾಕಾವ್ಯ ರಚಿಸುವ ಮೂಲಕ ಜಗತ್ತಿಗೆ ಸುಜ್ಞಾನದ ಬೆಳಕು ಹರಿಸಿ ತಮ್ಮ ಜ್ಞಾನದ ಮೂಲಕ ಸರ್ವರ ಮನಗೆದ್ದ ಮಹಾನ್ ಆದಿಕವಿ ಮಹರ್ಷಿ ವಾಲ್ಮೀಕಿ ಅವರ ಹೆಸರನ್ನು ರಾಯಚೂರು ವಿಶ್ವವಿದ್ಯಾಲಯಕ್ಕೆ ನಾಮಕರಣ ಮಾಡಿರುವುದು ಸ್ವಾಗತಾರ್ಹವಾಗಿದ್ದು, ಜಗತ್ತು ಕಂಡ ಆದಿ ಕವಿ, ನಾಡಿನ ಅತಿ ಶ್ರೇಷ್ಠ ಪವಿತ್ರ ಗ್ರಂಥವಾದ ರಾಮಾ ಯಣದ ಕರ್ತೃ ಶ್ರೀ ಮಹರ್ಶಿ ವಾಲ್ಮೀಕಿ ಜಯಂತಿಯ ದಿನದಂದು ವಿವಿಗೆ ಮರು ನಾಮಕರಣಕ್ಕೆ ಮುಂದಾಗಿರುವುದು ವಿಶೇಷ ಎಂದು ರಾಯಚೂರು ಎಂಪಿ ಕುಮಾರ ನಾಯಕ ಹೇಳಿದರು.

ರಾಯಚೂರು ವಿಶ್ವವಿದ್ಯಾಲಯಕ್ಕೆ ಮಹರ್ಷಿ ವಾಲ್ಮೀಕಿ ಹೆಸರು ನಾಮಕರಣ ಮಾಡುವುದರ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಲ್ಮೀಕಿ ಸಮಾಜದ ಬಹುದಿನದ ಬೇಡಿಕೆಯನ್ನು ಈಡೇರಿಸಿದ್ದಾರೆ. ರಾಜ್ಯ ಸರ್ಕಾರದ ಈ ತೀರ್ಮಾನ ಶ್ಲಾಘನೀಯವಾಗಿದ್ದು, ಮಹರ್ಷಿ ವಾಲ್ಮೀಕಿ ಸರ್ವ ಜನರ ಏಳಿಗೆಗಾಗಿ ಮಹಾನ್ ಗ್ರಂಥ ನೀಡಿದವರು. ಅಂತಹ ಮಹಾನ್ ವ್ಯಕ್ತಿಯ ಹೆಸರನ್ನು ವಿಶ್ವವಿದ್ಯಾಲಯಕ್ಕೆ ನಾಮಕರಣ ಮಾಡಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಹೈದರಾಬಾದ್ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘ ವಿಭಾಗೀಯ ಕಾರ್ಯದರ್ಶಿ ಎನ್‌.ರಘುವೀರ ನಾಯಕ ಅಭಿಪ್ರಾಯಪಟ್ಟರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಕ್ರಮ ಡ್ರಗ್ಸ್‌ ವಾಸನೆ ತಡೆಗೆ ನಾಯಿಗಳ ಮಲಮೂತ್ರ!
ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಭರದ ಸಿದ್ಧತೆ