ಡಿಕೆ ಸೂಚನೆ ಬೆನ್ನಲ್ಲೇ 150 ರೌಡಿ ಮನೆ ಮೇಲೆ ದಾಳಿ

KannadaprabhaNewsNetwork |  
Published : Nov 23, 2026, 04:00 AM IST
Rowdy 2 | Kannada Prabha

ಸಾರಾಂಶ

ರೌಡಿಗಳ ಚಟುವಟಿಕೆಗಳನ್ನು ಮಟ್ಟ ಹಾಕುವಂತೆ ಸಿಎಂ ಡಿ.ಕೆ.ಶಿವಕುಮಾರ್‌ ಅವರು ಕಟ್ಟುನಿಟ್ಟಿನ ಸೂಚನೆ ನೀಡಿರುವ ಬೆನ್ನಲ್ಲೆ ನಗರದಲ್ಲಿರುವ 150ಕ್ಕೂ ಹೆಚ್ಚು ರೌಡಿಶೀಟರ್‌ ಮನೆಗಳ ಮೇಲೆ ಭಾನುವಾರ ಬೆಳ್ಳಂ ಬೆಳಗ್ಗೆ ಪೊಲೀಸರು ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರೌಡಿಗಳ ಚಟುವಟಿಕೆಗಳನ್ನು ಮಟ್ಟ ಹಾಕುವಂತೆ ಸಿಎಂ ಡಿ.ಕೆ.ಶಿವಕುಮಾರ್‌ ಅವರು ಕಟ್ಟುನಿಟ್ಟಿನ ಸೂಚನೆ ನೀಡಿರುವ ಬೆನ್ನಲ್ಲೆ ನಗರದಲ್ಲಿರುವ 150ಕ್ಕೂ ಹೆಚ್ಚು ರೌಡಿಶೀಟರ್‌ ಮನೆಗಳ ಮೇಲೆ ಭಾನುವಾರ ಬೆಳ್ಳಂ ಬೆಳಗ್ಗೆ ಪೊಲೀಸರು ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆ.

ಪಂಚ ಆಯುಕ್ತರ ಘಟಕದಲ್ಲಿ ಬೆಳಗ್ಗೆಯೇ ದಾಳಿ ಮಾಡುವ ಮೂಲಕ ನಿದ್ದೆಯ ಮಂಪರಿನಲ್ಲಿದ್ದ ರೌಡಿಗಳಿಗೆ ಶಾಕ್‌ ನೀಡಿದ್ದಾರೆ. ಮುಂಜಾನೆಯೇ ರೌಡಿಗಳ ಮನೆಯ ಕದ ತಟ್ಟಿರುವ ಪೊಲೀಸರು ಅವರ ನಿವಾಸಗಳಲ್ಲಿ ಶೋಧ ನಡೆಸಿ ವಿಚಾರಣೆ ನಡೆಸಿ ಬೆವರಿಳಿಸಿದ್ದಾರೆ. ರೌಡಿಗಳಾದ ಆರ್‌.ಡೇವಿಡ್‌, ನಾಗಸಂದ್ರ ಸಂತು, ಕಿಶೋರ್ ಸೇರಿದಂತೆ 150ಕ್ಕೂ ಹೆಚ್ಚು ರೌಡಿಗಳ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ.

ದಾಳಿಯ ವೇಳೆ ರೌಡಿಶೀಟರ್‌ಗಳ ವಾಸಸ್ಥಳ, ಪ್ರಸ್ತುತ ಕೆಲಸ ನಿರ್ವಹಿಸುತ್ತಿರುವ ಸ್ಥಳ, ಅವರ ಸಹಚರರು ಹಾಗೂ ಚಟುವಟಿಕೆಗಳ ಕುರಿತು ಸಮಗ್ರವಾಗಿ ಪರಿಶೀಲಿಸಲಾಯಿತು. ಅಲ್ಲದೆ, ರೌಡಿಗಳ ಪ್ರಸ್ತುತ ಚಲನವಲನಗಳ ಬಗ್ಗೆ ಮಾಹಿತಿ ಸಂಗ್ರಹಿಸಿ, ಯಾವುದೇ ರೀತಿಯ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ಹಾಗೂ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುವ ಕೃತ್ಯಗಳಿಂದ ದೂರವಿರುವಂತೆ ಅಧಿಕಾರಿಗಳು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ಈ ವೇಳೆ ಬ್ಯಾಂಕ್‌, ಆಸ್ತಿ ಇತರೆ ದಾಖಲೆಗಳನ್ನು ಪರಿಶೀಲನೆ ನಡೆಸಲಾಗಿದೆ.

ಮುಂದಿನ ದಿನಗಳಲ್ಲಿಯೂ ಸಹ ರೌಡಿಶೀಟರ್‌ಗಳ ಚಟುವಟಿಕೆಗಳ ಮೇಲೆ ನಿರಂತರ ನಿಗಾ ವಹಿಸಲಾಗುವುದು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಇಂತಹ ಮುನ್ನೆಚ್ಚರಿಕಾ ಕ್ರಮಗಳನ್ನು ಮುಂದುವರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಹಳೇ ಅಪರಾಧಿಗಳು ಹಾಗೂ ರೌಡಿಶೀಟರ್‌ಗಳ ಮನೆಗಳ ಮೇಲೆ ದಾಳಿ ನಡೆಸಿ, ಅವರ ಸದ್ಯದ ಚಟುವಟಿಕೆಗಳ ಬಗ್ಗೆ ತೀವ್ರ ನಿಗಾ ವಹಿಸಲಾಗಿದೆ ಮತ್ತು ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗದಂತೆ ಎಚ್ಚರಿಕೆ ನೀಡಲಾಗಿದೆ. ಸಂದೇಹಾಸ್ಪದ ವ್ಯಕ್ತಿಗಳ ವಿಚಾರಣೆ ನಡೆಸಲಾಗಿದೆ. ವಿಶೇಷ ಗಸ್ತು ನಡೆಸುವ ಮೂಲಕ ಮಾದಕದ್ರವ್ಯ ಮಾರಾಟದ ಜಾಲ, ರಾತ್ರಿ ವೇಳೆ ಅನಗತ್ಯವಾಗಿ ಗುಂಪುಗೂಡುವುದು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ.

ಬಾಲ ಬಿಚ್ಚಿದ್ರೆ ಬೇರೆ ಥರ ವ್ಯವಸ್ಥೆ ಆಗುತ್ತೆ: ಬಾಲ ಬಿಚ್ಚಿದ್ರೆ ಬೇರೆ ಥರ ವ್ಯವಸ್ಥೆ ಆಗುತ್ತದೆ. ಹಾರಾಟ ಮಾಡಿದರೆ ರೆಕ್ಕೆ ಕಟ್ ಮಾಡುತ್ತೀವೆ. ಕನಸಿನಲ್ಲೂ ವೆಪನ್ ಮುಟ್ಟುವ ಹಾಗಿಲ್ಲ. ಪ್ರತೀ ತಿಂಗಳು ನಾಲ್ಕು ಸಲ ನನ್ನ ಆಫೀಸಿಗೆ ಬಂದು ಹಾಜರಾಗಬೇಕು ಎಂದು ರೌಡಿಶೀಟರ್ ಕಿಶೋರ್ ಅಲಿಯಾಸ್‌ ಗುಡ್ಡೆ ಮತ್ತು ಆತನ ಸಹಚರನಿಗೆ ಪೂರ್ವ ವಿಭಾಗದ ಆಯುಕ್ತ ಡಾ.ಪಿ.ಎಸ್.ಹರ್ಷ ಎಚ್ಚರಿಕೆ ನೀಡಿದ್ದಾರೆ.

--

ಸಮಾಜಘಾತುಕ ಶಕ್ತಿ ಹತ್ತಿಕ್ಕುವ ಗುರಿ

ಪೊಲೀಸ್ ಇಲಾಖೆಯು ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ರೌಡಿಗಳು, ಸುಲಿಗೆ ಮತ್ತು ಮಚ್ಚು-ಲಾಂಗುಗಳೊಂದಿಗೆ ಓಡಾಡುವ ಸಮಾಜಘಾತುಕ ಶಕ್ತಿಗಳನ್ನು ಹತ್ತಿಕ್ಕಲಾಗುವುದು ಎಂದು ಬೆಂಗಳೂರು ಪೂರ್ವ ವಿಭಾಗದ ಆಯುಕ್ತ ಡಾ.ಪಿ.ಎಸ್.ಹರ್ಷ ತಿಳಿಸಿದ್ದಾರೆ. ಕೊಲೆ ಪ್ರಕರಣಗಳು ಸೇರಿದಂತೆ ಗಂಭೀರ ಅಪರಾಧಗಳಲ್ಲಿ ಶಾಮೀಲಾದ ರೌಡಿಗಳನ್ನು, ಅದರಲ್ಲೂ ವಿಶೇಷವಾಗಿ ತಲೆಮರೆಸಿಕೊಂಡವರನ್ನು ಗುರುತಿಸಿ ಮೊದಲು ಕ್ರಮ ಕೈಗೊಳ್ಳಲಾಗುವುದು. ಕಾನೂನುಬದ್ಧವಾಗಿ ಕಾರ್ಯನಿರ್ವಹಿಸುವ ಮೂಲಕ ರೌಡಿಗಳಿಗೆ ಯಾವುದೇ ಕಾರಣಕ್ಕೂ ನ್ಯಾಯಾಲಯದ ದಿನಾಂಕಗಳನ್ನು ತಪ್ಪಿಸಲು ಅವಕಾಶ ನೀಡುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಎಲ್ಲೆಲ್ಲಿ ಎಷ್ಟು ಪರಿಶೀಲನೆ?:

ಪೂರ್ವ ಆಯುಕ್ತರ ಘಟಕ 32, ಪಶ್ಚಿಮ ಆಯುಕ್ತರ ಘಟಕ 39, ಉತ್ತರ ಆಯುಕ್ತರ ಘಟಕ 27, ದಕ್ಷಿಣ ಆಯುಕ್ತರ ಘಟಕ 23, ಕೇಂದ್ರ ಆಯುಕ್ತರ ಘಟಕ28 ಸೇರಿದಂತೆ ಒಟ್ಟು 149 ಕಡೆಗಿಂತಲೂ ರೌಡಿಗಳ ಮನೆ ಮೇಲೆ ಪರಿಶೀಲನೆ ನಡೆಸಿದ್ದಾರೆ.

--

ನಗರದ ಎಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ರೌಡಿಗಳ ಮನೆಗಳ ಮೇಲೆ ಶೋಧ ಕಾರ್ಯಾಚರಣೆ ನಡೆಸಲಾಗಿದೆ. ಎಲ್ಲ ರೌಡಿಗಳಿಗೆ ಕಾನೂನು ಪಾಲಿಸುವಂತೆ ಎಚ್ಚರಿಕೆ ನೀಡಿ, ಸೂಚನೆಗಳನ್ನು ನೀಡಲಾಗಿದೆ.

ಆರ್‌.ಹಿತೇಂದ್ರ, ನಗರ ಮುಖ್ಯ ಪೊಲೀಸ್‌ ಆಯುಕ್ತರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಐವರ ಪೈಕಿ ಓರ್ವ ಮಾತ್ರ ಅಕ್ರಮ ಬಾಂಗ್ಲಾದ ಪ್ರಜೆ: ಡಿಸಿಪಿ ಸ್ಪಷ್ಟನೆ
3 ದಿನಗಳ ವೀರಲೋಕ ಪುಸ್ತಕ ಸಂತೆಗೆ ತೆರೆ