ರೈಲ್ವೆ ಪರೀಕ್ಷೆಯಲ್ಲೂ ಮಂಗಳಸೂತ್ರ ನಿಷಿದ್ಧ!

KannadaprabhaNewsNetwork |  
Published : Apr 28, 2025, 01:32 AM ISTUpdated : Apr 28, 2025, 08:08 AM IST
ಮಂಗಳಸೂತ್ರ | Kannada Prabha

ಸಾರಾಂಶ

 ಕೇಂದ್ರ ಸರ್ಕಾರದ ರೈಲ್ವೆ ನೇಮಕಾತಿ ಮಂಡಳಿ (ಆರ್‌ಆರ್‌ಬಿ) ನಡೆಸುವ ಪರೀಕ್ಷೆಯಲ್ಲಿ ಮಂಗಳಸೂತ್ರ ಮತ್ತು ಧರ್ಮದ ಸಂಕೇತಗಳನ್ನು ಧರಿಸದಂತೆ ಸೂಚನೆ ನೀಡಲಾಗಿದೆ.

 ಮಂಗಳೂರು : ಇತ್ತೀಚೆಗೆ ಜನಿವಾರ ಧರಿಸಿ ಸಿಇಟಿ ಬರೆಯಲು ಪ್ರವೇಶ ನಿರಾಕರಿಸಿದ ಪ್ರಕರಣ ರಾಜ್ಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾದ ಬೆನ್ನಲ್ಲೇ ಇದೀಗ ಕೇಂದ್ರ ಸರ್ಕಾರದ ರೈಲ್ವೆ ನೇಮಕಾತಿ ಮಂಡಳಿ (ಆರ್‌ಆರ್‌ಬಿ) ನಡೆಸುವ ಪರೀಕ್ಷೆಯಲ್ಲಿ ಮಂಗಳಸೂತ್ರ ಮತ್ತು ಧರ್ಮದ ಸಂಕೇತಗಳನ್ನು ಧರಿಸದಂತೆ ಸೂಚನೆ ನೀಡಲಾಗಿದೆ.

ರೈಲ್ವೆ ಇಲಾಖೆಯ ನರ್ಸಿಂಗ್‌ ಸೂಪರಿಂಟೆಂಡೆಂಟ್‌ ಹುದ್ದೆಗೆ ಮಂಗಳವಾರ ಪರೀಕ್ಷೆ ನಡೆಯಲಿದ್ದು, ಪರೀಕ್ಷಾ ಕೇಂದ್ರದೊಳಗೆ ಪಾಲಿಸಬೇಕಾದ ಸೂಚನೆಗಳನ್ನು ಪ್ರವೇಶ ಪತ್ರದಲ್ಲಿ ನಮೂದಿಸಲಾಗಿದೆ. ಪ್ರವೇಶ ಪತ್ರದ ಏಳನೇ ಕ್ರಮಾಂಕದ ಸೂಚನೆಯಲ್ಲಿ ಮಂಗಳಸೂತ್ರ ಧರಿಸುವಂತಿಲ್ಲ ಎಂದು ಸ್ಪಷ್ಟವಾಗಿ ಸೂಚಿಸಲಾಗಿದೆ.

 ಧರ್ಮದ ಸಂಕೇತ (ರಿಲಿಜಿಯಸ್‌ ಸಿಂಬಲ್ಸ್‌)ಗಳನ್ನು ಧರಿಸದಂತೆ ತಿಳಿಸಿದ್ದು, ಅವು ಯಾವು ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಹಾಗಾಗಿ ಬ್ರಾಹ್ಮಣ ಹಾಗೂ ಇತರ ಸಮುದಾಯದವರು ಧರಿಸುವ ಜನಿವಾರ, ವೀರಶೈವರು ಧರಿಸುವ ಕರಡಿಗೆಗೂ ಅವಕಾಶವಿಲ್ಲವೆ ಎಂಬ ಜಿಜ್ಞಾಸೆ ಮೂಡಿದೆ. ಈ ಹಿಂದೆ ರಾಜ್ಯದಲ್ಲಿ ನಡೆದ ನೇಮಕಾತಿ ಪರೀಕ್ಷೆಯೊಂದರ ವೇಳೆ ಮಂಗಳಸೂತ್ರ ಬಿಚ್ಚಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಿದ್ದು ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು.

ವಿಹಿಂಪ ಆಕ್ಷೇಪ: ಪರೀಕ್ಷೆ ವೇಳೆ ಮಂಗಳ ಸೂತ್ರ ಮತ್ತು ಧರ್ಮದ ಸಂಕೇತ ಧರಿಸುವಂತಿಲ್ಲ ಎಂಬ ಸೂಚನೆಗೆ ವಿಶ್ವ ಹಿಂದೂ ಪರಿಷತ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ರೈಲ್ವೆ ಇಲಾಖೆಯ ನರ್ಸಿಂಗ್ ಸೂಪರಿಂಟೆಂಡೆಂಟ್ ಹುದ್ದೆಗೆ ಏ.29ರಂದು ಬೋಂದೆಲ್‌ನ ಮಣೇಲ್ ಶ್ರೀನಿವಾಸ್ ನಾಯಕ್ ಬೆಸೆಂಟ್ ವಿದ್ಯಾಕೇಂದ್ರದಲ್ಲಿ ಪರೀಕ್ಷೆ ನಡೆಯಲಿದೆ. ಹಿಂದೂಗಳು ಅವರ ಧಾರ್ಮಿಕ ಚಿಹ್ನೆಗಳಾದ ಮಂಗಳಸೂತ್ರ, ಜನಿವಾರ ತೆಗೆಯಲು ಹೇಳಿದರೆ ಸರಿ ಹೋಗುವುದಿಲ್ಲ. ಈ ರೀತಿಯ ಧಾರ್ಮಿಕ ವಿರೋಧಿ ಧೋರಣೆ ಸಹಿಸಲು ಅಸಾಧ್ಯ. ಜಿಲ್ಲಾಧಿಕಾರಿ, ಸಂಸದರು ಈ ಬಗ್ಗೆ ಗಮನ ಹರಿಸಿ, ಈ ಅಂಶವನ್ನು ಕೈಬಿಡಬೇಕು. 

ಪರೀಕ್ಷೆಯಲ್ಲಿ ಹಿಂದುಗಳ ಭಾವನೆಗೆ ಧಕ್ಕೆ ಬಾರದ ರೀತಿ ಪರೀಕ್ಷಾರ್ಥಿಗಳಿಗೆ ಅವಕಾಶ ಮಾಡಿಕೊಡಬೇಕು ಎಂದು ವಿಹಿಂಪ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್ ಒತ್ತಾಯಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ