ಶೆಟ್ಟಿಕೊಪ್ಪದಲ್ಲಿ ಕಡಹಿನಬೈಲು ಗ್ರಾಮ ಪಂಚಾಯಿತಿಯ ಗ್ರಾಮ ಸಭೆ
ಕಾಡಾನೆ ನಿಯಂತ್ರಣಕ್ಕೆ ರೇಲ್ವೆ ಬ್ಯಾರಿಕೇಡ್ ಒಂದೇ ಪರಿಹಾರ ಎಂದು ಕಡಹಿನಬೈಲು ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಗಾಂಧಿ ಗ್ರಾಮ.ಕೆ.ಎನ್.ನಾಗರಾಜ್ ಹಾಗೂ ಗ್ರಾಮಸ್ಥರು ಸಲಹೆ ನೀಡಿದರು.
ಶನಿವಾರ ತಾಲೂಕಿನ ಶೆಟ್ಟಿಕೊಪ್ಪದ ಗ್ರಾ.ಪಂ. ದ್ವಾಕ್ರ ಕಾರ್ಯಾಗಾರದ ಕಟ್ಟಡದಲ್ಲಿ ಕಡಹಿನಬೈಲು ಗ್ರಾಮ ಪಂಚಾಯಿತಿ ವಿಶೇಷ ಗ್ರಾಮ ಸಭೆಯಲ್ಲಿ ಮಾತನಾಡಿ ಕಾಡಾನೆ ಬಾರದಂತೆ ಈಗ ನಿರ್ಮಿಸಿರುವ ಟಿಂಟೆಕಲ್ ಪೆನ್ಸಿಂಗ್ ಕಳಪೆಯಾಗಿದ್ದು ಯಾವುದೇ ಪ್ರಯೋಜನವಾಗುತ್ತಿಲ್ಲ. ಸರ್ಕಾರ ಕಾಡಾನೆ ಹಾವಳಿಯಿಂದ ಕಂಗೆಟ್ಟಿರುವ ರೈತರ ಬೆಳೆ ರಕ್ಷಿಸಲು ಹಂತ, ಹಂತವಾಗಿ ರೈಲ್ವೇ ಬ್ಯಾರಿಕೇಡ್ ನಿರ್ಮಿಸಬೇಕೆಂದು ಒತ್ತಾಯಿಸಿದರು.ಇತ್ತೀಚೆಗೆ ಈ ಭಾಗದ ರೈತರ ತೋಟಗಳಲ್ಲಿ ಮಂಗಗಳ ಹಾವಳಿಯೂ ಹೆಚ್ಚಾಗಿದೆ. ಇದರಿಂದ ರೈತರ ಅಡಕೆ ತೋಟದ ಬೆಳೆ ನಾಶವಾಗುತ್ತಿದೆ. ಇದಕ್ಕೆ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ನೇರ್ಲೆ ಕೊಪ್ಪ ಗ್ರಾಮದ ಮುಖಂಡ ಡಿ.ಜಿ.ಜಗದೀಶ್, ಪರಮೇಶ್ವರ್ ಮಾತನಾಡಿ, ಕುಡಿವ ನೀರಿನ ಜೆಜೆಎಂ ಕಾಮಗಾರಿ 2 ವರ್ಷವಾದರೂ ಇನ್ನೂ ನೇರ‍್ಲೆಕೊಪ್ಪ ಗ್ರಾಮಕ್ಕೆ ಯೋಜನೆ ಮರೀಚಿಕೆಯಾಗಿದೆ. ಗುತ್ತಿಗೆದಾರನ ಮೇಲೆ ಕ್ರಮಕೈ ಗೊಂಡು ಎಫ್.ಐ.ಆರ್ ದಾಖಲಿಸಬೇಕೆಂದು ಆಗ್ರಹಿಸಿದರು.
ಪೊಲೀಸ್ ಇಲಾಖೆ ಎ.ಎಸ್.ಐ ಶ್ರೀಧರ್ ಮಾತನಾಡಿ ಜನರು ತಮ್ಮ ಮೊಬೈಲ್‌ಗೆ ಬರುವ ಬೇನಾಮಿ ಕರೆಗಳ ಬಗ್ಗೆ ಎಚ್ಚರದಿಂದಿರಬೇಕು. ಬ್ಯಾಂಕಿನ ವಿವರ ಯಾರೊಂದಿಗೂ ಹಂಚಿಕೊಳ್ಳಬೇಡಿ. ವಾಹನದ ಇನ್ಸೂರೆನ್ಸ್ ಕಡ್ಡಾಯವಾಗಿ ಪಾವತಿಸಬೇಕು. ಅಪ್ರಾಪ್ತರಿಗೆ ವಾಹನ ಚಾಲನೆಗೆ ಅವಕಾಶ ಕೊಡಬೇಡಿ. ತಮ್ಮ ಮನೆಗಳಿಗೆ ಉತ್ತಮ ಗುಣ ಮಟ್ಟದ ಡೋರ್ ಲಾಕ್ ಅಳವಡಿಸಿ ಎಂದು ಸಲಹೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ. ಆಡಳಿತಾಧಿಕಾರಿ ಬಿಸಿಎಂ ಇಲಾಖೆ ಅಧಿಕಾರಿ ಧರ್ಮರಾಜ್ ವಹಿಸಿದ್ದರು. ಗ್ರಾಮ ಸಭೆಯಲ್ಲಿ ನೋಡಲ್ ಅಧಿಕಾರಿ ತೋಟಗಾರಿಕೆ ಇಲಾಖೆ ಪುನೀತ್, ಆಹಾರ ಇಲಾಖೆ ಗಣಪತಿ, ಆರೋಗ್ಯ ಇಲಾಖೆ ದರ್ಶನ್, ವಿವಿಧ ಇಲಾಖೆಗಳ ಅಧಿಕಾರಿಗಳಾದ ಮಂಜುನಾಥ್, ಶಂಕರ್, ಎಂಜಿನಿಯರ್ ರಶ್ಮಿ, ನಾಗಲಕ್ಷೀ, ಮೆಸ್ಕಾಂ ಇಲಾಖೆ ಪವನ್, ಪಿಡಿಓ ವಿಂದ್ಯಾ ಮತ್ತಿತರು ಉಪಸ್ಥಿತರಿದ್ದರು.