ಕಾಡಾನೆ ಹಾವಳಿ ತಡೆಗೆ ರೇಲ್ವೆ ಬ್ಯಾರಿಕೇಡ್ ನಿರ್ಮಾಣ: ಟಿ.ಡಿ.ರಾಜೇಗೌಡ

KannadaprabhaNewsNetwork | Published : Dec 5, 2024 12:32 AM

ಸಾರಾಂಶ

ನರಸಿಂಹರಾಜಪುರ, ಶಾಶ್ವತವಾಗಿ ಆನೆ ಹಾವಳಿ ತಡೆಗಟ್ಟಲು ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ಆನೆ ದಾಳಿಯಿಂದ ಮೃತಪಟ್ಟ ಕೆರೆಗದ್ದೆಯ ಉಮೇಶ್‌ ಕುಟುಂಬಕ್ಕೆ ಸಹಾಯಧನ ಚೆಕ್‌ ವಿತರಣೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಶಾಶ್ವತವಾಗಿ ಆನೆ ಹಾವಳಿ ತಡೆಗಟ್ಟಲು ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.ಬುಧವಾರ ತಾಲೂಕಿನ ಕೆರೆಗದ್ದೆಯಲ್ಲಿ ಆನೆ ದಾಳಿಯಿಂದ ಮೃತ ಉಮೇಶ್ ಅವರ ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ ₹5 ಲಕ್ಷ ಹಾಗೂ ವೈಯಕ್ತಿಕವಾಗಿ ₹1 ಲಕ್ಷ ಪರಿಹಾರದ ಚೆಕ್ ವಿತರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಆನೆ ನಿರೋಧಕ ಕಂದಕದಿಂದ ಹಾಗೂ ಟೆಂಟಕಲ್ ಫೆನ್ಸಿಂಗ್ ನಿಂದ ಆನೆ ಹಾವಳಿ ತಡೆಗಟ್ಟಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಬೆಳಗಾವಿಯಲ್ಲಿ ನಡೆಯುವ ಅಧಿವೇಶನದ ಸಂದರ್ಭದಲ್ಲಿ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಆನೆ ಹಾವಳಿ ತಡೆ ಗಟ್ಟಲು ಶಾಶ್ವತ ಪರಿಹಾರ ಒದಗಿಸಲು ಮನವಿ ಮಾಡಲಾಗುವುದು ಎಂದರು.

ವಿಭಾಗೀಯ ಮಟ್ಟದಲ್ಲಿ ಮಾಹಿತಿ ಕೇಂದ್ರ ಸ್ಥಾಪಿಸಿ ಆನೆಗಳ ಚಲನ, ವಲನಗಳ ಬಗ್ಗೆ ಮಾಹಿತಿ ನೀಡಲಾಗುವುದು. ಕೆರೆ ಗದ್ದೆಯ ಉಮೇಶ ಅ‍ವರ ಸಾವಿಗೆ ಕಾರಣವಾದ ಆನೆ ಪತ್ತೆ ಹಚ್ಚುವ ಕಾರ್ಯಾಚರಣೆ ಮುಂದುವರಿದಿದ್ದು ಇದು ಪತ್ತೆಯಾದ ಕೂಡಲೇ ಬೇರೆಡೆಗೆ ಸ್ಥಳಾಂತರಿಸಲು ಕ್ರಮಕೈಗೊಳ್ಳಲಾಗುವುದು. ಆನೆ ದಾಳಿಯಿಂದ ಮೃತಪಟ್ಟವರಿಗೆ ಪರಿಹಾರ ನೀಡಿದ ಕೂಡಲೇ ಸಮಸ್ಯೆ ಪರಿಹಾರವಾಗುವುದಿಲ್ಲ. ಆನೆ, ಕಾಡುಕೋಣ, ಹಂದಿ ಹಾಗೂ ಇತರೆ ಕಾಡು ಪ್ರಾಣಿಗಳ ಸಂಖ್ಯೆ ಹೆಚ್ಚಾಗಿದ್ದು ಬೆಳೆ ನಷ್ಟಮಾಡುತ್ತಿವೆ. ಕಾಡು ಪ್ರಾಣಿಗಳಿಂದ ಬೆಳೆ ಹಾನಿಯಾಗಿದ್ದಕ್ಕೆ ತುರ್ತಾಗಿ ಪರಿಹಾರವನ್ನು ನೀಡ ಲಾಗುತ್ತಿದೆ. ಹಿಂದೆ ಕಾಡು ಪ್ರಾಣಿಗಳ ದಾಳಿಯಿಂದ ಮಾನವ ಮೃತಪಟ್ಟರೆ ₹5 ಲಕ್ಷ ಪರಿಹಾರ ನೀಡಲಾಗುತ್ತಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಪರಿಹಾರದ ಮೊತ್ತವನ್ನು ₹15 ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.

ಆನೆ ದಾಳಿಯಿಂದ ಮೃತ ಪಟ್ಟ ಉಮೇಶ್ ಅವರ ಕುಟುಂಬಕ್ಕೆ ಸರ್ಕಾರದೊಂದಿಗೆ ಚರ್ಚಿಸಿ ಮಾನವೀಯತೆಯಿಂದ ಹೆಚ್ಚಿನ ಪರಿಹಾರ ಕೊಡಿಸುವ ಪ್ರಯತ್ನ ಮಾಡಲಾಗಿದೆ. ಮೃತರ ಪುತ್ರನಿಗೆ ಅರಣ್ಯ ಇಲಾಖೆಯಲ್ಲಿ ಅರಣ್ಯ ವೀಕ್ಷಕ ಹುದ್ದೆ ಕೊಡಿಸಲು ಸರ್ವ ರೀತಿಯಲ್ಲೂ ಪ್ರಯತ್ನಿಸುವುದಾಗಿ ತಿಳಿಸಿದರು.

ಕೊಪ್ಪ ವಲಯ ಉಪ ಅರಣ್ಯ ಸಂರಕ್ಷಣಾಧಿಕಾರಿ ನಂದೀಶ್ ಮಾತನಾಡಿ, ಡಿ.10 ರಂದು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ ಐ)ಯ ವಿಜ್ಞಾನಿ ಅವಿನಾಶ್ ರಿಂದ ಅರಣ್ಯ ಇಲಾಖೆ ಸಿಬ್ಬಂದಿಗೆ, ಆಯ್ದ ಗ್ರಾಮ ಅರಣ್ಯ ಸಮಿತಿ ಸದಸ್ಯರಿಗೆ ಪ್ರಾಣಿ ಗಳ ವರ್ತನೆಗಳ ಬಗ್ಗೆ , ಅವುಗಳ ನಿರ್ವಹಣೆ ಬಗ್ಗೆ ಅರಿವು ಮೂಡಿಸುವ ಸಲುವಾಗಿ ತರಬೇತಿ ಹಮ್ಮಿಕೊಳ್ಳಲಾಗಿದೆ. ಪ್ರಾಣಿ ಗಳ ವರ್ತನೆ ಬಗ್ಗೆ ಜ್ಞಾನವಿದ್ದರೆ ಅನಾಹುತ ತಡೆಗಟ್ಟಲು ಸಾಧ್ಯವಾಗುತ್ತದೆ. ತರಬೇತಿ ನೀಡಿದ ನಂತರ ವಿಜ್ಞಾನಿಗಳು ನೀಡುವ ಸಲಹೆಗಳನ್ನು ಮಾಧ್ಯಮದ ಮೂಲಕ ವ್ಯಾ‍ಪಕವಾಗಿ ಪ್ರಚಾರ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ನರಸಿಂಹರಾಜಪುರ ವಲಯ ಅರಣ್ಯಾಧಿಕಾರಿ ಪ್ರವೀಣ್ , ಚಿಕ್ಕಗ್ರಹಾರ ವಲಯ ಅರಣ್ಯಾಧಿಕಾರಿ ಆದರ್ಶ, ಸೀತೂರು ಗ್ರಾಮ ಪಂಚಾಯಿತಿ ಸದಸ್ಯ ರಮೇಶ್, ಸೀತೂರು ಹರಿದ್ವರ್ಣ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಎನ್.ಪಿ.ರವಿ, ಕೊಪ್ಪ ಎಪಿಎಂಸಿ ಉಪಾಧ್ಯಕ್ಷ ಎಚ್.ಎಲ್.ದೀಪಕ್, ಕೊಪ್ಪ ಪಿಸಿಎಲ್‌.ಡಿಬ್ಯಾಂಕ್‌ ಅಧ್ಯಕ್ಷ ಇನೇಶ್‌, ಸೀತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್‌.ಇ.ಮಹೇಶ್‌, ಕಾಂಗ್ರೆಸ್‌ ಮುಖಂಡ ಎಂ.ಆರ್‌.ರವಿಶಂಕರ್‌, ನುಗ್ಗಿ ಮಂಜುನಾಥ್ ಮತ್ತಿತರರು ಇದ್ದರು.

Share this article