ಪ್ರಯಾಸ ಪಡುತ್ತಿರುವ ರೈಲ್ವೆ ಪ್ರಯಾಣಿಕರು, ಎಸ್ಕಲೇಟರ್‌ಗೆ ಬೇಡಿಕೆ

KannadaprabhaNewsNetwork | Published : Oct 6, 2023 1:16 AM

ಸಾರಾಂಶ

ಹಾವೇರಿಯ ಮಹದೇವಪ್ಪ ಮೈಲಾರ ರೈಲ್ವೆ ನಿಲ್ದಾಣದ ಒಂದು ಪ್ಲಾಟ್‌ ಫಾರ್ಮ್‌ನಿಂದ ಮತ್ತೊಂದಕ್ಕೆ ಹೋಗಲು ಪ್ರಯಾಣಿಕರು ಫುಟ್‌ ಓವರ್ ಬ್ರಿಡ್ಜ್ ಏರಲು ಏದುಸಿರು ಬಿಟ್ಟು ಪ್ರಯಾಸಪಡುತ್ತಿದ್ದಾರೆ. ಮೂಲಸೌಲಭ್ಯಗಳಿಂದ ವಂಚಿತವಾಗಿರುವ ಇಲ್ಲಿಯ ರೈಲ್ವೆ ನಿಲ್ದಾಣದಲ್ಲಿ ಎಸ್ಕಲೇಟರ್‌ ಅಳವಡಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.
ಮೂಲಸೌಲಭ್ಯಗಳಿಂದ ವಂಚಿತವಾಗಿರುವ ಹಾವೇರಿ ರೈಲು ನಿಲ್ದಾಣ ನಾರಾಯಣ ಹೆಗಡೆ ಕನ್ನಡಪ್ರಭ ವಾರ್ತೆ ಹಾವೇರಿ ಹಾವೇರಿಯ ಮಹದೇವಪ್ಪ ಮೈಲಾರ ರೈಲ್ವೆ ನಿಲ್ದಾಣದ ಒಂದು ಪ್ಲಾಟ್‌ ಫಾರ್ಮ್‌ನಿಂದ ಮತ್ತೊಂದಕ್ಕೆ ಹೋಗಲು ಪ್ರಯಾಣಿಕರು ಫುಟ್‌ ಓವರ್ ಬ್ರಿಡ್ಜ್ ಏರಲು ಏದುಸಿರು ಬಿಟ್ಟು ಪ್ರಯಾಸಪಡುತ್ತಿದ್ದಾರೆ. ಮೂಲಸೌಲಭ್ಯಗಳಿಂದ ವಂಚಿತವಾಗಿರುವ ಇಲ್ಲಿಯ ರೈಲ್ವೆ ನಿಲ್ದಾಣದಲ್ಲಿ ಎಸ್ಕಲೇಟರ್‌ ಅಳವಡಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ. ಅತ್ತ ಹುಬ್ಬಳ್ಳಿ ರೈಲ್ವೆ ನಿಲ್ದಾಣವು ವಿಶ್ವದರ್ಜೆಗೆ ಏರಿಕೆಯಾಗುತ್ತಿದ್ದರೆ, ಇತ್ತ ದಾವಣಗೆರೆ ರೈಲ್ವೆ ನಿಲ್ದಾಣ ಕೂಡ ಅಭಿವೃದ್ಧಿಯಾಗುತ್ತಿದೆ. ರಾಜ್ಯದ 8 ರೈಲ್ವೆ ನಿಲ್ದಾಣ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಈ ವರ್ಷ ಅನುದಾನ ಒದಗಿಸುತ್ತಿದೆ. ಆದರೆ, ಹುಬ್ಬಳ್ಳಿ ಮತ್ತು ಬೆಂಗಳೂರು ನಡುವಿನ ಪ್ರಮುಖ ರೈಲ್ವೆ ನಿಲ್ದಾಣ ಎನಿಸಿರುವ ಹಾವೇರಿಯಲ್ಲಿ ಮಾತ್ರ ಮೂಲಸೌಲಭ್ಯಗಳಿಲ್ಲದೇ ಪ್ರಯಾಣಿಕರು ಸಮಸ್ಯೆ ಎದುರಿಸುತ್ತಿದ್ದಾರೆ. ಕನಿಷ್ಠ ಸೌಕರ್ಯ ಕೂಡ ಇಲ್ಲದ್ದರಿಂದ ತೊಂದರೆ ಅನುಭವಿಸುವಂತಾಗಿದೆ. ಪ್ರಯಾಣಿಕರಿಗೆ ಪ್ರಯಾಸ: ಹಾವೇರಿ ನಿಲ್ದಾಣದ ಮೂಲಕ ನಿತ್ಯ ಹತ್ತಾರು ಎಕ್ಸ್‌ಪ್ರೆಸ್‌ ರೈಲು ಗಾಡಿಗಳು ಓಡಾಡುತ್ತವೆ. ಆದರೆ, ಅವೆಲ್ಲ ಇಲ್ಲಿ ಕೇವಲ ಒಂದು ನಿಮಿಷ ನಿಲುಗಡೆಯಾಗುತ್ತವೆ. ಅಷ್ಟರಲ್ಲಿ ಪ್ರಯಾಣಿಕರು ರೈಲು ಏರಿಳಿಯಬೇಕು. ಎರಡು ಪ್ಲಾಟ್‌ಫಾರ್ಮ್‌ಗಳಿದ್ದು, ಫುಟ್‌ ಓವರ್‌ ಬ್ರಿಡ್ಜ್‌ ಏರಿ ಹೋಗಬೇಕು. ಭಾರವಾದ ಲಗೇಜ್‌ ಎತ್ತಿಕೊಂಡು ವೃದ್ಧರು, ಮಹಿಳೆಯರು ಮೆಟ್ಟಿಲು ಏರುವುದೇ ದುಸ್ತರವಾಗಿದೆ. ಮೆಟ್ಟಿಲು ಹತ್ತಲಾಗದೇ ಅರ್ಧದಲ್ಲೇ ವೃದ್ಧರನೇಕರು ಕುಳಿತು ದಣಿವಾರಿಸಿಕೊಳ್ಳುವ ದೃಶ್ಯಗಳು ನಿತ್ಯವೂ ಕಾಣುತ್ತವೆ. ಎತ್ತರದ ಮೇಲು ದಾರಿ ಬಿಟ್ಟು ಅನೇಕ ಯುವಕರು ಅಪಾಯಕರ ರೀತಿಯಲ್ಲಿ ನೇರವಾಗಿ ರೈಲ್ವೆ ಹಳಿಯನ್ನೇ ದಾಟಿ ಬರುವವರೂ ಸಾಕಷ್ಟಿದ್ದಾರೆ. ಇನ್ನು ವಿಕಲಚೇತನರಂತೂ ಒಂದು ಪ್ಲಾಟ್‌ಫಾರ್ಮ್‌ನಿಂದ ಮತ್ತೊಂದಕ್ಕೆ ಹೋಗಲು ಸಾಧ್ಯವಿಲ್ಲದ ಸ್ಥಿತಿಯಿದೆ. ಎಸ್ಕಲೇಟರ್‌ಗೆ ಬೇಡಿಕೆ: ಹಾವೇರಿ ರೈಲ್ವೆ ನಿಲ್ದಾಣದಿಂದ ನಿತ್ಯ ಸಾವಿರಾರು ಪ್ರಯಾಣಿಕರು ವಿವಿಧೆಡೆ ಪ್ರಯಾಣಿಸುತ್ತಾರೆ. ಇಲ್ಲಿಂದ ಇಲಾಖೆಗೆ ಸಾಕಷ್ಟು ವರಮಾನವೂ ಇದೆ. ಸುತ್ತಮುತ್ತಲಿನ ಎಲ್ಲ ತಾಲೂಕುಗಳ ಹಾಗೂ ಶಿರಸಿ ಕಡೆಯಿಂದಲೂ ಹಾವೇರಿ ನಿಲ್ದಾಣದ ಮೂಲಕ ಅನೇಕರು ಪ್ರಯಾಣ ಬೆಳೆಸುತ್ತಾರೆ. ನಿಲ್ದಾಣ ಮೇಲ್ದರ್ಜೆಗೇರಿಸುವ ಪ್ರಯತ್ನವೂ ಜನಪ್ರತಿನಿಧಿಗಳಿಂದ ಆಗಿಲ್ಲ. ಕನಿಷ್ಠ ಎರಡು ಎಸ್ಕಲೇಟರ್‌ ಅಳವಡಿಸಬೇಕು ಎಂಬುದು ಜಿಲ್ಲೆಯ ಜನರ ಬೇಡಿಕೆಯಾಗಿದೆ. ಇದರಿಂದ ವಯೋವೃದ್ಧರು ಮೆಟ್ಟಿಲು ಏರುವ ಪ್ರಯಾಸ ತಪ್ಪಲಿದೆ. ಹಾವೇರಿಯ ಜನತೆ ಬೆಂಗಳೂರಿಗೆ ಹೋಗಿ ಬರಲು ರೈಲನ್ನೇ ಅವಲಂಬಿಸಿದ್ದಾರೆ. ಆದರೆ, ಇಲ್ಲಿ ಸೌಲಭ್ಯಗಳಿಲ್ಲದ್ದರಿಂದ ಎಲ್ಲರಿಗೂ ಸಮಸ್ಯೆಯಾಗುತ್ತಿದೆ. ಮೆಟ್ಟಿಲು ಹತ್ತಲಾಗದೇ ವೃದ್ಧರು ಕುಸಿದು ಬಿದ್ದಿರುವ ಘಟನೆಗಳು ನಡೆದಿವೆ. ರೈಲ್ವೆ ಇಲಾಖೆ ಈ ಬಗ್ಗೆ ಗಮನಹರಿಸಬೇಕು ಎಂದು ಹಿರಿಯ ಪ್ರಯಾಣಿಕ, ನಗರದ ಅಶೋಕ ಮುದ್ಗಲ್‌ ಒತ್ತಾಯಿಸಿದ್ದಾರೆ. ಹಾವೇರಿ ನಿಲ್ದಾಣದಲ್ಲಿ ಎಕ್ಸ್‌ಪ್ರೆಸ್‌ ರೈಲುಗಳು ಕೇವಲ ಒಂದು ನಿಮಿಷ ನಿಲುಗಡೆಯಾಗುತ್ತಿವೆ. ಲಗೇಜಿನೊಂದಿಗೆ ಮೆಟ್ಟಿಲು ಹತ್ತಿ ಹೋಗುವಾಗ ಅನೇಕರು ಜಾರಿ ಬಿದ್ದಿರುವ ಘಟನೆ ಜರುಗಿವೆ. ಅದಕ್ಕಾಗಿ ಹಾವೇರಿಯಲ್ಲಿ ಎಕ್ಸ್‌ಪ್ರೆಸ್‌ ರೈಲುಗಳ ನಿಲುಗಡೆ ಸಮಯವನ್ನು 2 ನಿಮಿಷಗಳಿಗೆ ಏರಿಸಬೇಕು. ಮೆಟ್ಟಿಲು ಹತ್ತಿ ಹೋಗಲು ವೃದ್ಧರು, ಮಹಿಳೆಯರಿಗೆ ಸಮಸ್ಯೆಯಾಗುತ್ತಿದೆ. ಅದಕ್ಕಾಗಿ ಪ್ರಯಾಣಿಕರ ಅನುಕೂಲಕ್ಕಾಗಿ 2 ಎಸ್ಕಲೇಟರ್‌ ವ್ಯವಸ್ಥೆ ಮಾಡಿಕೊಡಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಪತ್ರ ಬರೆದು ಮನವಿ ಮಾಡಲಾಗಿದೆ ಎನ್ನುತ್ತಾರೆ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ

Share this article