ದುಂಡಳ್ಳಿ ಗ್ರಾ.ಪಂ.ವತಿಯಿಂದ 17.30 ಲಕ್ಷ ರು. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಸಂಜೀವಿನಿ ಸಭಾಂಗಣವನ್ನು ಸಂಸದ ಯದುವೀರ್ ಒಡೆಯರ್ ಉದ್ಘಾಟಿಸಿದರು.
ದುಂಡಳ್ಳಿ ಗ್ರಾ.ಪಂ. ಸಂಜೀವಿನಿ ಸಭಾಂಗಣ ಲೋಕಾರ್ಪಣೆ
ಶನಿವಾರಸಂತೆ: ರಾಜ್ಯದಲ್ಲೆ ರೈಲ್ವೆ ಸಂಪರ್ಕ ಇಲ್ಲದಿರುವ ಕೊಡಗಿಗೆ ರೈಲ್ವೆ ಸಂಪರ್ಕ ಕಲ್ಪಿಸುವ ಸಮಯ ಸಮೀಪಿಸುತ್ತಿದೆ ಎಂದು ಕೊಡಗು ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭರವಸೆ ನೀಡಿದ್ದಾರೆ.ದುಂಡಳ್ಳಿ ಗ್ರಾ.ಪಂ.ವತಿಯಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಮತ್ತು ವಿವಿಧ ಇಲಾಖೆ ಅನುದಾನದಲ್ಲಿ 17.30 ಲಕ್ಷ ರು. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಸಂಜೀವಿನಿ ಸಭಾಂಗಣವನ್ನು ಉದ್ಘಾಟಿಸಿದ ಬಳಿಕ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.ಗ್ರಾಮೀಣ ಪ್ರದೇಶದಲ್ಲಿ ಗ್ರಾ.ಪಂ.ಗೆ ಸಂಬಂಧ ಪಟ್ಟ ಸುಸಜ್ಜಿತವಾದ ಸಭಾಂಗಣ ನಿರ್ಮಿಸಿರುವುದು ಮೈಸೂರಿನಂತಹ ನಗರ ಪ್ರದೇಶಗಳಿಗೆ ಬೆರಗು ನೀಡುವಂತಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದ ಅವರು, ಉದ್ಯೋಗ ಖಾತ್ರಿ ಯೋಜನೆ ಮೂಲಕ ಗ್ರಾ.ಪಂ.ವತಿಯಿಂದ ಸಂಜೀವಿನಿ ಸಭಾಂಗಣದ ವ್ಯವಸ್ಥೆ ಸದ್ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.
ನನ್ನ ಅಧಿಕಾರದ ಅವಧಿಯ ಒಳಗಡೆ ಮೈಸೂರುನಿಂದ ಕೊಡಗಿನ ಕುಶಾಲನಗರದ ವರೆಗೆ ರೈಲು ಸಂಪರ್ಕ ಕಲ್ಪಿಸಿಕೊಡುವೆನೆಂಬ ವಿಶ್ವಾಸ ಇಟ್ಟುಕೊಂಡಿದ್ದೇನೆ. ಕೊಡಗಿಗೆ ಸಂಸದರ ಅನುದಾನ ನೀಡುವ ಮೂಲಕ ಜಿಲ್ಲೆಯ ಪ್ರಗತಿಗೆ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.ದುಂಡಳ್ಳಿ ಗ್ರಾ.ಪಂ.ಅಧ್ಯಕ್ಷೆ ಭವಾನಿ ಗುರುಪ್ರಸಾದ್, ಉಪಾಧ್ಯಕ್ಷೆ ಗೋಪಿಕಾ ಹರೀಶ್, ಸದಸ್ಯರಾದ ಡಿ.ಪಿ.ಬೋಜಪ್ಪ, ಸಿ.ಜೆ.ಗಿರೀಶ್, ಪೂರ್ಣಿಮಾ ಕಿರಣ್, ಸತ್ಯವತಿ ದೇವರಾಜ್, ಎಸ್.ಪಿ.ಭಾಗ್ಯ, ನಿತಿನ್, ಎಂ.ಡಿ.ದೇವರಾಜ್, ಜಾನಕಿ ಸುಬ್ರಮಣ್ಯ, ಮನು ಮಹಾಂತೇಶ್, ಎಸ್.ಪಿ.ಕಾಂತರಾಜ್, ನಂದಿನಿ ನಂದೀಶ್ ಗ್ರಾ.ಪಂ.ಅಭಿವೃದ್ದಿ ಅಧಿಕಾರಿ ಎಂ.ಕೆ.ಆಯಿಷಾ ಮತ್ತಿತರರು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.