ಕನ್ನಡ ಆಡಳಿತ, ಕಲಿಕೆ ಚಿಂತನೆಯ ಭಾಗವಾಗಲಿ: ಡಾ. ಅಶೋಕ ಸಂಗಪ್ಪ ಆಲೂರ

KannadaprabhaNewsNetwork |  
Published : Nov 21, 2025, 02:45 AM IST

ಸಾರಾಂಶ

ಸೈಂಟ್ ಆನ್ಸ್ ಪದವಿ ಕಾಲೇಜು ಕನ್ನಡ ಭಾಷಾ ವಿಭಾಗ, ಕೊಡಗು ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತು, ಮತ್ತು ವಿರಾಜಪೇಟೆ ಕನ್ನಡ ಸಾಹಿತ್ಯ ಪರಿಷತ್ತು ಸಂಯುಕ್ತ ಆಶ್ರಯದಲ್ಲಿ ಕಾಲೇಜು ಆವರಣದಲ್ಲಿ ಕನ್ನಡ ರಾಜ್ಯೋತ್ಸವ ದ ಅಂಗವಾಗಿ ‘ನುಡಿ ನಡೆ ಯುವಜನರ ಕಡೆ’ ಶೀರ್ಷಿಕೆ ಅಡಿಯಲ್ಲಿ ನುಡಿ ಉತ್ಸವ ಅಂತರ್ ತರಗತಿ ಕನ್ನಡ ಗಾಯನ ಸ್ಪರ್ಧೆ ನೆರವೇರಿತು.

ಮಡಿಕೇರಿ: ಭವ್ಯ ಪರಂಪರೆಯ, ವಿವಿಧತೆಯಲ್ಲಿ ಏಕತೆ ಕಂಡ ಜಾನಪದ ಸೊಗಡು ಕಂಡ ಭಾಷೆ ಕನ್ನಡ. ಇತರ ಭಾಷೆಗಳನ್ನು ಗೌರವಿಸಿ ತಾಯಿ ಕನ್ನಡ ಭಾಷೆ ಧೀಮಂತಗೊಳಿಸುವ ಪ್ರಯತ್ನ ನಿರಂತರವಾಗಿ ಸಾಗಬೇಕು ಎಂದು ಕೊಡಗು ವಿಶ್ವವಿದ್ಯಾಲಯ ಕುಲಪತಿ ಡಾ. ಅಶೋಕ ಸಂಗಪ್ಪ ಆಲೂರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸೈಂಟ್ ಆನ್ಸ್ ಪದವಿ ಕಾಲೇಜು ಕನ್ನಡ ಭಾಷಾ ವಿಭಾಗ, ಕೊಡಗು ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತು, ಮತ್ತು ವಿರಾಜಪೇಟೆ ಕನ್ನಡ ಸಾಹಿತ್ಯ ಪರಿಷತ್ತು ಸಂಯುಕ್ತ ಆಶ್ರಯದಲ್ಲಿ ಕಾಲೇಜು ಆವರಣದಲ್ಲಿ ಕನ್ನಡ ರಾಜ್ಯೋತ್ಸವ ದ ಅಂಗವಾಗಿ ‘ನುಡಿ ನಡೆ ಯುವಜನರ ಕಡೆ’ ಶೀರ್ಷಿಕೆ ಅಡಿಯಲ್ಲಿ ನುಡಿ ಉತ್ಸವ ಅಂತರ್ ತರಗತಿ ಕನ್ನಡ ಗಾಯನ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.

ಧೀಮಂತ ಸಂಸ್ಕೃತಿ ಹೊಂದಿರುವ ಕನ್ನಡ ಭಾಷೆಯನ್ನು ಪೋಷಕರು ಮನೆಯಿಂದ, ಶಿಕ್ಷಕರು ವಿದ್ಯಾಲಯದಿಂದ ತಿಳಿಯಪಡಿಸುವಂತಾಗಬೇಕು. ನಾವೇ ಭಾಷೆಗೆ ಗೌರವವಿತ್ತು ಇತರರಿಗೆ ಧಾರೆಯೆರೆಯುವಂತಾಗಬೇಕು. ಕನ್ನಡ ಭಾಷೆಯ ಮೇಲೆ ಹಲವು ಭಾಷೆಗಳ ಪ್ರಭಾವದಿಂದಾಗಿ ವಾಕ್ಯ ಬಳಕೆ ಮಾಡುವ ಸಂದರ್ಭ ಒಂದು ಕನ್ನಡ ಪದವಾದರೇ ಇತರ ಭಾಷೆಗಳ ಬಳಕೆ ಅಧಿಕವಾಗಿ ಬಳಕೆಯಾಗುತ್ತಿರುವುದು ಕಳವಳಕಾರಿ ಸಂಗತಿ ಎಂದರು.

ಸೈಂಟ್ ಆನ್ಸ್ ಪದವಿ ಕಾಲೇಜಿನ ಕನ್ನಡ ಭಾಷಾ ವಿಭಾಗ ಮುಖ್ಯಸ್ಥರು ಮತ್ತು ಕೊಡಗು ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಅರ್ಜುನ್ ಮೌರ್ಯ ಪ್ರಾಸ್ತಾವಿಕ ಭಾಷಣದಲ್ಲಿ ಕನ್ನಡ ಭಾಷೆ ಶ್ರೀಮಂತಗೊಳಿಸಲು ಆಡಳಿತ, ಕಲಿಕೆ ಹಾಗೂ ಪ್ರಚಲಿತ ವಿದ್ಯಮಾನಗಳಲ್ಲಿ ಕನ್ನಡ ಭಾಷೆಯನ್ನು ಬಲಿಷ್ಠಗೊಳಿಸಲು ಕಾಲೇಜು ಯುವ ಸಮುದಾಯದಲ್ಲಿ ವಿಶೇಷ ಪ್ರಯತ್ನ ಅಂಗವಾಗಿ ನುಡಿ ಗೀತಗಾಯನ ಸ್ಪರ್ಧೆ ಹಮ್ಮಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.ನುರಿತ ತೀರ್ಪುಗಾರರಿಂದ ತೀರ್ಪು ನೀಡಲಾಗುತಿದ್ದು ಮುಂದೆ ನಡೆಯುವ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಪ್ರಶಸ್ತಿ ನೀಡಲಾಗುತ್ತದೆ. ಚಾಲನೆ ಕಾರ್ಯಕ್ರಮದಲ್ಲಿ ಆರಂಭದಲ್ಲಿ 10 ತಂಡಗಳು ಭಾಗವಹಿಸಲಿದೆ. ಜಾನಪದ, ಕರ್ನಾಟಿಕ್ ಮತ್ತು ಶಾಸ್ತ್ರೀಯ ಸಂಗೀತ ಕನ್ನಡ ಭಾಷಾ ಆಧಾರಿತ ಗುಂಪು ಗಾಯನ ಸ್ಪರ್ಧೆ ಆಯೋಜಿಸಲಾಗಿದೆ ಎಂದರು.

ವಿರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಿ.ಪಿ. ರಾಜೇಶ್ ಪದ್ಮನಾಭ, ನುಡಿ ಉತ್ಸವ ಸಮಿತಿ ಸಂಚಾಲಕ ಅಬ್ದುಲ್ ರೆಹಮಾನ್, ಸೈಂಟ್ ಆನ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ತೃಪ್ತಿ ಬೋಪಣ್ಣ, ಐಕ್ಯೂಎಸಿ ಸಂಯೋಜಕ ಹೇಮ ಬಿ.ಡಿ. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.ವೇದಿಕೆಯಲ್ಲಿ ಪದವಿ ಕಾಲೇಜಿನ ಎಲ್ಲಾ ವಿಭಾಗಗಳ ತಂಡ ಮತ್ತು ಎಂ.ಕಾಂ. ಸ್ನಾತಕೋತ್ತರ ಪದವಿ ವಿಭಾಗದ 10 ತಂಡಗಳ ವಿದ್ಯಾರ್ಥಿಗಳು ನುಡಿ ಗೀತಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಕೊಡಗಿನ ಜಾನಪದ ಕಲೆಗಳಾದ ಪರೆಯ ಕಳಿ ಮತ್ತು ಉಮ್ಮತ್ತಾಟ್ ಪ್ರದರ್ಶನ ವಿದ್ಯಾರ್ಥಿಗಳಿಂದ ಮೂಡಿಬಂದಿತು. ಚಿತ್ರಕಲಾ ಶಿಕ್ಷಕ ಬಸವರಾಜ ಬಡಿಗೇರ್ ಮತ್ತು ಶಾಸ್ತ್ರೀಯ ಸಂಗೀತ ಕಲಾವಿದರಾದ ಚಂದ್ರಶೇಖರ್ ತೀರ್ಪುಗಾರರಾಗಿದ್ದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸೈಂಟ್ ಆನ್ಸ್ ಪದವಿ ಕಾಲೇಜಿನ ವ್ಯವಸ್ಥಾಪಕ ರೆ. ಫಾ. ಮದಲೈ ಮುತ್ತು, ಕನ್ನಡ ಭಾಷೆ ಧೀಮಂತವಾಗಿ ಬೆಳೆಯಬೇಕಾದರೆ ಕನ್ನಡ ಭಾಷೆಯ ಮೇಲೆ ಇತರ ಭಾಷೆಗಳ ಪ್ರಭಾವ ಕಡಿಮೆಯಾಗಬೇಕು ಎಂದರು.ವಿದ್ಯಾರ್ಥಿನಿ ಮೇಘನಾ ಸ್ವಾಗತಿಸಿದರು. ಉಪನ್ಯಾಸಕರಾದ ಮಾಲಿನಿ ಮುತ್ತಮ್ಮ ಹಾಗೂ ತಮ್ಮಯ್ಯ ನಿರೂಪಿಸಿದರು. ವಿದ್ಯಾರ್ಥಿ ಮುತ್ತಪ್ಪ ವಂದಿಸಿದರು.

ಸೈಂಟ್ ಆನ್ಸ್ ಪದವಿ ಕಾಲೇಜಿನ ಕನ್ನಡ ವಿದ್ಯಾರ್ಥಿ ಬಳಗ, ನುಡಿ ಉತ್ಸವ ಸಮಿತಿಯ ಸದಸ್ಯರು, ಪದವಿ ಕಾಲೇಜಿನ ಉಪನ್ಯಾಸಕರು, ಕನ್ನಡ ಸಾಹಿತ್ಯ ಪರಿಷತ್‌ ಸದಸ್ಯರು ಹಾಗೂ ಪದವಿ ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶ್ರೀಶಾ ಸೊಸೈಟಿ ಅಧ್ಯಕ್ಷ ಗುರುರಾಜ್‌ಗೆ ಸನ್ಮಾನ
ಉಪ್ಪಿನಂಗಡಿ-ಕುಪ್ಪೆಟ್ಟಿ ರಸ್ತೆ ದುರಸ್ತಿ: ಕಳಪೆ ಕಾಮಗಾರಿ ಶಂಕೆ