ನಗರದ ಪ್ರತಿಷ್ಠಿತ ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಂ.ಎಸ್. ಗುರುರಾಜ್ ಅವರನ್ನು ನಿರಂತರ ಸಮಾಜಮುಖಿ ಕಾರ್‍ಯಗಳನ್ನು ಗುರುತಿಸಿ ದಕ್ಷಿಣ ಕನ್ನಡ ಜಿಲ್ಲಾ ಮಾಜಿ ಸೈನಿಕರ ಸಂಘದ ವತಿಯಿಂದ ನಗರದ ಅಂಬೇಡ್ಕರ್ ಭವನದಲ್ಲಿ ಗೌರವಿಸಲಾಯಿತು.

ಮಂಗಳೂರು: ನಗರದ ಪ್ರತಿಷ್ಠಿತ ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಂ.ಎಸ್. ಗುರುರಾಜ್ ಅವರನ್ನು ನಿರಂತರ ಸಮಾಜಮುಖಿ ಕಾರ್‍ಯಗಳನ್ನು ಗುರುತಿಸಿ ದಕ್ಷಿಣ ಕನ್ನಡ ಜಿಲ್ಲಾ ಮಾಜಿ ಸೈನಿಕರ ಸಂಘದ ವತಿಯಿಂದ ನಗರದ ಅಂಬೇಡ್ಕರ್ ಭವನದಲ್ಲಿ ಗೌರವಿಸಲಾಯಿತು.ಸೈನಿಕರ ಸಂಘದ ಅಧ್ಯಕ್ಷ ಸಾರ್ಜೆಂಟ್ ಶ್ರೀಕಾಂತ್ ಶೆಟ್ಟಿ ಬಾಳ, ಏರ್ ವೈಸ್ ಮಾರ್ಷಲ್ ರಮೇಶ್ ಕಾರ್ಣಿಕ್, ಬ್ರಿಗೇಡಿಯರ್ ಐ.ಎನ್‌. ರೈ, ಕಾರ್‍ಯದರ್ಶಿ ಕ್ಯಾ. ದೀಪಕ್ ಅಡ್ಯಂತಾಯ, ಖಜಾಂಚಿ ನೌಕಾ ದಳದ ಪಿಒ ಸುಧೀರ್ ಪೈ, ಕರ್ನಲ್ ಎನ್. ಶರತ್ ಭಂಡಾರಿ, ಸಿಪಿಒ ವಿಕ್ರಂ ದತ್ತ ಅವರು ಗುರುರಾಜ್ ಅವರನ್ನು ಸನ್ಮಾನಿಸಿದರು.ಸಂಘದ ಅಧ್ಯಕ್ಷ ಸಾರ್ಜೆಂಟ್ ಶ್ರೀಕಾಂತ್ ಶೆಟ್ಟಿ ಮಾತನಾಡಿ, ಎಂ.ಎಸ್. ಗುರುರಾಜ್ ಅವರು ಸಮಾಜಮುಖಿ ಕಾರ್‍ಯಗಳ ಮೂಲಕ ಸಮಾಜಕ್ಕೆ ನೀಡುತ್ತಿರುವ ಕೊಡುಗೆ ಬಹು ದೊಡ್ಡದು. ಶ್ರೀಶಾ ಸೊಸೈಟಿ ಮೂಲಕ ಅವರು ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಿಗೆ ಸಂಬಂಧಿಸಿದ ನೂರಾರು ಕಾರ್‍ಯಕ್ರಮಗಳನ್ನು ನಿರಂತರ ಆಯೋಜಿಸುತ್ತಿದ್ದಾರೆ. ಇದು ಇತರ ಸಂಘ ಸಂಸ್ಥೆಗಳಿಗೂ ಮಾದರಿ. ನಮ್ಮ ಸೈನಿಕರ ಸಂಘಕ್ಕೂ ದೊಡ್ಡ ಮಟ್ಟದ ಧನ ಸಹಾಯ ನೀಡಿದ್ದಾರೆ. ಶ್ರೀಶಾ ಸೌಹಾರ್ದ ಸೊಸೈಟಿಯು ಇನ್ನೂ ಹೆಚ್ಚಿನ ಸಾಧನೆಗಳನ್ನು ಮಾಡಲಿ ಎಂದು ಹಾರೈಸಿದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಗುರುರಾಜ್, ಸಮಾಜದಿಂದ ಎಲ್ಲವನ್ನೂ ಪಡೆದಿದ್ದೇವೆ. ಸಮಾಜದ ಋಣ ನಮ್ಮ ಮೇಲಿದೆ. ಅದನ್ನು ಕೈಲಾದ ಮಟ್ಟದಲ್ಲಿ ತೀರಿಸುವ ಕೆಲಸ ಮಾಡುತ್ತಿದ್ದೇವೆ. ಇದರಲ್ಲಿ ವಿಶೇಷ ಏನೂ ಇಲ್ಲ. ಸೈನಿಕರು ದೇಶಕ್ಕೆ ಸಲ್ಲಿಸುತ್ತಿರುವ ಸೇವೆಯ ಮುಂದೆ ಇದೆಲ್ಲ ನಗಣ್ಯ. ಅವರ ಯೋಗ ಕ್ಷೇಮ ನೋಡಿಕೊಳ್ಳಬೇಕಾದ್ದು ಸಮಾಜದ ಆದ್ಯ ಕರ್ತವ್ಯ. ಶ್ರೀಶಾ ಸೊಸೈಟಿಯು ವಾರ್ಷಿಕವಾಗಿ ತಾನು ಗಳಿಸಿದ ಲಾಭಾಂಶದಲ್ಲಿ ಒಂದು ಪಾಲನ್ನು ಸೈನಿಕರ ಕಲ್ಯಾಣ ನಿಧಿಗೆ ಮತ್ತು ಸೈನಿಕ ಸಂಘಕ್ಕೆ ನೀಡುತ್ತಿದೆ ಎಂದರು.