ನಿರಂತರ ಬೇಡಿಕೆ ಬಳಿಕ ೩೧.೮೭ ಲಕ್ಷ ರು. ಅನುದಾನ ಬಿಡುಗಡೆಯಾಗಿ ರಸ್ತೆ ಸುಸ್ಥಿತಿಗೊಳಗಾಗುತ್ತಿದೆ ಎಂಬ ನಿರೀಕ್ಷೆಯ ನಡುವೆಯೇ ಉಪ್ಪಿನಂಗಡಿ-ಕುಪ್ಪೆಟ್ಟಿ ನಡುವಣ ರಸ್ತೆಗೆ ಹಾಕಲಾದ ಡಾಂಬರು ಕಿತ್ತು ಹೋಗಿದ್ದು, ಕಳಪೆ ಕಾಮಗಾರಿ
ಉಪ್ಪಿನಂಗಡಿ: ನಿರಂತರ ಬೇಡಿಕೆ ಬಳಿಕ ೩೧.೮೭ ಲಕ್ಷ ರು. ಅನುದಾನ ಬಿಡುಗಡೆಯಾಗಿ ರಸ್ತೆ ಸುಸ್ಥಿತಿಗೊಳಗಾಗುತ್ತಿದೆ ಎಂಬ ನಿರೀಕ್ಷೆಯ ನಡುವೆಯೇ ಉಪ್ಪಿನಂಗಡಿ-ಕುಪ್ಪೆಟ್ಟಿ ನಡುವಣ ರಸ್ತೆಗೆ ಹಾಕಲಾದ ಡಾಂಬರು ಕಿತ್ತು ಹೋಗಿದ್ದು, ಕಳಪೆ ಕಾಮಗಾರಿ ಸಂದೇಹ ಮೂಡಿಸುತ್ತಿದೆ. ಸುದೀರ್ಘ ಕಾಲ ಸಂಚಾರಯೋಗ್ಯವಾಗಿಲ್ಲದೆ ರಾಜ್ಯ ವ್ಯಾಪಿ ಗಮನ ಸೆಳೆದಿದ್ದ ಉಪ್ಪಿನಂಗಡಿ-ಗುರುವಾಯನಕೆರೆ ಸಂಪರ್ಕದ ರಾಜ್ಯ ಹೆದ್ದಾರಿಯ ಕುಪ್ಪೆಟ್ಟಿ-ಉಪ್ಪಿನಂಗಡಿ ನಡುವಣ ರಸ್ತೆ ದುಸ್ಥಿತಿ ನಿವಾರಣೆಗೆ ಸರಕಾರ ಕೊನೆಗೂ ಮನಸ್ಸು ಮಾಡಿತ್ತು. ಕುಪ್ಪೆಟ್ಟಿಯಿಂದ ಉಪ್ಪಿನಂಗಡಿ ನೇತ್ರಾವತಿ ಸೇತುವೆ ತನಕ ೦೯.೧೭ ಕಿ.ಮೀ. ಉದ್ದದ ರಸ್ತೆ ದುರಸ್ತಿ (ಪ್ಯಾಚ್ ವರ್ಕ್) ಕಾಮಗಾರಿಗೆ ಲೋಕೋಪಯೋಗಿ ಇಲಾಖೆಯಿಂದ ೩೧ ಲಕ್ಷದ ೮೭ ಸಾವಿರ ರು. ಅನುದಾನ ಮಂಜೂರಾಗಿದ್ದು, ಅದರಂತೆ ಈಗಾಗಲೇ ಕಾಮಗಾರಿ ಮುಗಿಸಲಾಗಿದೆ. ಆದರೆ ಇಲ್ಲಿ ನಡೆದ ಕಾಮಗಾರಿ ಕೇವಲ ನಾಮಕಾವಸ್ಥೆಗೆ ಮಾಡಿದಂತಿದ್ದು, ಸರ್ಕಾರದ ಹಣವನ್ನು ಇಲ್ಲಿ ಪೋಲು ಮಾಡಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಈ ಕಾಮಗಾರಿ ನಡೆಸಿದವರು ತೀರಾ ನಿರ್ಲಕ್ಷತೆ ತೋರಿದ್ದಾರೆ. ಸಾರ್ವಜನಿಕರು, ವಾಹನ ಚಾಲಕರು ವರ್ಷಗಳಿಂದ ಅನುಭವಿಸುತ್ತಿದ್ದ ತೊಂದರೆ, ಸಮಸ್ಯೆಗಳಿಗೆ ಕನಿಷ್ಠ ಪರಿಹಾರ ದೊರೆತಿಲ್ಲ ಎಂಬ ದೂರು ವ್ಯಕ್ತವಾಗಿದೆ.
ರಸ್ತೆ ಗುಂಡಿಗಳಿಗೆ ಹಾಕಲಾಗಿರುವ ಡಾಂಬರ್ ಬಹುತೇಕ ಕಡೆಯಲ್ಲಿ ಕಿತ್ತು ಹೋಗಿದೆ, ಡಾಂಬರ್ ನಿಂದ ಬೇರ್ಪಟ್ಟಿರುವ ಜಲ್ಲಿ ಅಲ್ಲಲ್ಲಿ ರಸ್ತೆ ಬದಿಯಲ್ಲಿ ಕಾಣುತ್ತಿದೆ, ಇಲ್ಲಿ ದುರಸ್ತಿ ಸಲುವಾಗಿ ಡಾಂಬರ್ ಹಾಕಲಾಗಿದೆ ಎಂಬ ಕುರುಹು ಮಾತ್ರ ಕಂಡು ಬರುತ್ತಿದೆ. ದೊಡ್ಡ ಹೊಂಡಗಳನ್ನು ಮಾತ್ರ ಮುಚ್ಚಿದ್ದು ಪಕ್ಕದಲ್ಲೇ ಇರುವ ಸಣ್ಣ ಗುಂಡಿಗಳನ್ನು ಹಾಗೆಯೇ ಬಿಡಲಾಗಿದೆ ಎಂದು ವಾಹನ ಚಾಲಕರು ದೂರಿದ್ದಾರೆ.ರಸ್ತೆ ದುರಸ್ತಿ ಕೇವಲ ದಾಖಲೆ ಮತ್ತು ಫೋಟೋಗಳಿಗೆ ಸೀಮಿತವಾಗಿದೆ. ಜನರ ಸುರಕ್ಷತೆ ಮತ್ತು ಅನುಕೂಲಕ್ಕೆ ನೆರವಾಗಬೇಕು. ಸಂಬಂಧಪಟ್ಟ ಅಧಿಕಾರಿಗಳು ಇದರ ಪರಿಶೀಲನೆ ನಡೆಸಿ, ರಸ್ತೆ ಹಾಗೂ ಚರಂಡಿ ವ್ಯವಸ್ಥೆಯನ್ನು ವೈಜ್ಞಾನಿಕವಾಗಿ ಮತ್ತು ಗುಣಮಟ್ಟದಿಂದ ಮರು ದುರಸ್ತಿ ಮಾಡಿಸಬೇಕು. ಇಲ್ಲದಿದ್ದರೆ ಸಾರ್ವಜನಿಕರು ಮತ್ತು ವಾಹನ ಚಾಲಕರು ಬೀದಿಗಿಳಿದು ಪ್ರತಿಭಟನೆ ನಡೆಸುವುದು ಅನಿವಾರ‍್ಯವಾದೀತು ಎಂದು ವಾಹನ ಚಾಲಕರು ತಿಳಿಸಿದ್ದಾರೆ. ಈ ರಸ್ತೆಯಲ್ಲಿ ಸಂಚರಿಸುವಾಗ ಮತ್ತು ರಸ್ತೆಯಲ್ಲಿನ ಕಿತ್ತು ಹೋದ ಡಾಂಬರ್ ನೋಡಿದಾಗ ಈ ಕಾಮಗಾರಿ ನಾಡಿನ ಜನರ ಹಿತಕ್ಕೆ ಮಾಡಿದ ಕಾಮಗಾರಿಯಂತೆ ಕಾಣುತ್ತಿಲ್ಲ. ಯಾರದ್ದೋ ಹಿತಾಸಕ್ತಿಗಾಗಿ ಕಾಮಗಾರಿಯ ನೆಪ ಪ್ರದರ್ಶಿಸಲಾಗಿದೆ. ಲಭಿಸಿದ ಅನುದಾನದಿಂದ ಕನಿಷ್ಠ ಪಕ್ಷ ಕಿಂಚಿತ್ತಾದರೂ ಗುಣಮಟ್ಟದಿಂದ ದುರಸ್ತಿ ಕಾಮಗಾರಿ ನಡೆಸದ ಕಾರಣ ಇನ್ನು ಕೆಲವೇ ದಿನಗಳಲ್ಲಿ ಮತ್ತೆ ಮೊದಲಿನಂತೆ ಸಂಚರಿಸುವ ಸ್ಥಿತಿ ನಿರ್ಮಾಣವಾಗಲಿದೆ.-ರಾಜಗೋಪಾಲ ಭಟ್, ಕುಪ್ಪೆಟ್ಟಿ ನಿವಾಸಿ
ಕಾಮಗಾರಿ ಪರಿಶೀಲನೆ ನಡೆಸಿ, ಅನುದಾನಕ್ಕೆ ಸರಿಯಾಗಿ ಕಾಮಗಾರಿ ಮಾಡದಿದ್ದರೆ, ಅವರಿಂದ ಮತ್ತೆ ಅವುಗಳನ್ನು ಸರಿ ಮಾಡಿಸುವೆ ಮತ್ತು ಉಳಿಸಿಕೊಂಡಿರುವ ಗುಂಡಿಗಳನ್ನು ಮುಚ್ಚಿಸಲಾಗುವುದು. -ಬಕ್ಕಪ್ಪ ಹೊಸಮನಿ, ಸಹಾಯಕ ಕಾರ‍್ಯನಿರ್ವಾಹಕ ಎಂಜಿನಿಯರ್