ರೈಲ್ವೆ ಮಾರ್ಗ: ಭೂಸ್ವಾಧೀನಕ್ಕೆ ಬೇಕಿದೆ ₹ 300 ಕೋಟಿ!

KannadaprabhaNewsNetwork |  
Published : Mar 13, 2026, 02:45 AM IST
ರೈಲು | Kannada Prabha

ಸಾರಾಂಶ

ರೈಲ್ವೆ ಖಾತೆಯ ಮಾಜಿ ಸಚಿವ ದಿ. ಸುರೇಶ ಅಂಗಡಿ ಅವರು ಈ ಮಾರ್ಗಕ್ಕೆ ಕೇಂದ್ರದಿಂದ ಅನುಮೋದನೆ ಕೊಡಿಸಿದ್ದರು. 73 ಕಿಮೀ ದೂರದ ಈ ಮಾರ್ಗದ ನಿರ್ಮಾಣದಿಂದ ಹುಬ್ಬಳ್ಳಿ-ಧಾರವಾಡ-ಬೆಳಗಾವಿ ಮಧ್ಯೆ ರೈಲು ಸಂಚಾರದ ಅವಧಿ ಒಂದುವರೆ ಗಂಟೆಗೂ ಕಡಿಮೆಯಾಗುತ್ತದೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ರಾಜ್ಯದಲ್ಲಿ ನಡೆಯಲಿರುವ ರೈಲು ಯೋಜನೆಗಳ ಭೂಸ್ವಾಧೀನಕ್ಕೆ ಬಜೆಟ್‌ನಲ್ಲಿ ರಾಜ್ಯ ಸರ್ಕಾರ ₹ 2950 ಕೋಟಿ ಘೋಷಿಸಿದೆ. ಇದೀಗ ಧಾರವಾಡ-ಕಿತ್ತೂರ- ಬೆಳಗಾವಿ ರೈಲು ಮಾರ್ಗದ ನಿರ್ಮಾಣಕ್ಕೆ ಮೊದಲ ಹಂತದ ಭೂಸ್ವಾಧೀನಕ್ಕೆ ₹ 300 ಕೋಟಿ ತಕ್ಷಣವೇ ಬೇಕಿದ್ದು, ರಾಜ್ಯ ಸರ್ಕಾರ ತಡ ಮಾಡದೇ ಬಿಡುಗಡೆ ಮಾಡಿ ಕಾಮಗಾರಿ ಶೀಘ್ರವೇ ಪ್ರಾರಂಭಿಸಬೇಕೆಂಬುದು ರೈಲು ಹೋರಾಟಗಾರರ ಒಕ್ಕೊರಲಿನ ಆಗ್ರಹ.

ರೈಲ್ವೆ ಖಾತೆಯ ಮಾಜಿ ಸಚಿವ ದಿ. ಸುರೇಶ ಅಂಗಡಿ ಅವರು ಈ ಮಾರ್ಗಕ್ಕೆ ಕೇಂದ್ರದಿಂದ ಅನುಮೋದನೆ ಕೊಡಿಸಿದ್ದರು. 73 ಕಿಮೀ ದೂರದ ಈ ಮಾರ್ಗದ ನಿರ್ಮಾಣದಿಂದ ಹುಬ್ಬಳ್ಳಿ-ಧಾರವಾಡ-ಬೆಳಗಾವಿ ಮಧ್ಯೆ ರೈಲು ಸಂಚಾರದ ಅವಧಿ ಒಂದುವರೆ ಗಂಟೆಗೂ ಕಡಿಮೆಯಾಗುತ್ತದೆ. ಮೂರು ನಗರಗಳು ತ್ರಿವಳಿ ನಗರಗಳಂತೆ ಬೆಳವಣಿಗೆ ಹೊಂದಲು ಸಹಕಾರಿಯಾಗುತ್ತವೆ. ಅಭಿವೃದ್ಧಿಗೆ ಪೂರಕವಾದ ಈ ಯೋಜನೆಗೆ ಭೂಸ್ವಾಧೀನ ಪ್ರಕ್ರಿಯೆಯೇ ಅಡ್ಡಿಯಾಗಿದೆ. ಹಾಗಂತ ಭೂಸ್ವಾಧೀನವೇ ಆಗಿಲ್ಲ ಅಂತೇನೂ ಇಲ್ಲ. ತಕ್ಕಮಟ್ಟಿಗೆ ಭೂಸ್ವಾಧೀನವೂ ಆಗಿದ್ದು ಪರಿಹಾರ ಹಣ ನೀಡಬೇಕಿದೆ.

ಎಷ್ಟೆಷ್ಟು ಭೂಮಿ; ಪರಿಹಾರ ಎಷ್ಟು?:

73 ಕಿಮೀ ದೂರದ ಈ ರೈಲು ಮಾರ್ಗಕ್ಕೆ 888.47 ಎಕರೆ ಮೊದಲ ಹಂತದಲ್ಲಿ ಬೇಕಾದರೆ, ಎರಡನೆಯ ಹಂತದಲ್ಲಿ 700 ಎಕರೆಗೂ ಹೆಚ್ಚು ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಬೇಕಿದೆ. ಒಟ್ಟು 1500ಕ್ಕೂ ಅಧಿಕ ಎಕರೆ ಪ್ರದೇಶ ಯೋಜನೆಗೆ ಬೇಕು. ಸದ್ಯ ಧಾರವಾಡ ಜಿಲ್ಲೆಯಲ್ಲಿ 350 ಎಕರೆ ಸ್ವಾಧೀನ ಪಡಿಸಿಕೊಂಡಿದ್ದು ಕಿತ್ತೂರ ವರೆಗೂ ಆಗಿದೆ. ಇನ್ನು ಅಲ್ಲಿನ ಭೂಮಿಗೆ ತಕ್ಕಂತೆ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ಎಕರೆ ಭೂಮಿಗೆ ₹ 90 ಲಕ್ಷ, ಹೆದ್ದಾರಿ ಬಿಟ್ಟು ಇರುವ ಭೂಮಿಗೆ ₹ 45 ಲಕ್ಷ, ₹ 35 ಲಕ್ಷ ಎಂಬಂತೆ ಅಲ್ಲಿನ ಬೆಲೆಗೆ ತಕ್ಕಂತೆ ಪರಿಹಾರಕ್ಕೆ ನಿರ್ಧರಿಸಲಾಗಿದೆ. 1500 ಎಕರೆ ಪೈಕಿ ಸರಿ ಸುಮಾರು 600 ಎಕರೆಗೂ ಹೆಚ್ಚು ಭೂಸ್ವಾಧೀನಪಡಿಸಿಕೊಂಡಿದ್ದು ಪರಿಹಾರ ಕೊಡುವುದು ಬಾಕಿಯಿದೆ. ಮುಂದಿನ ವಾರ ಪರಿಹಾರ ನೀಡುವ ನಿರೀಕ್ಷೆ ಇದ್ದು ₹ 300 ಕೋಟಿ ಬೇಕಾಗಿದೆ. ಈ ಪೈಕಿ ಸದ್ಯ ₹ 50 ಕೋಟಿ ಇದೆ ಎಂದು ಕೆಐಎಡಿಬಿ ಮೂಲಗಳು ತಿಳಿಸಿವೆ.

ಇನ್ನು ಮಮ್ಮಿಗಟ್ಟಿ ಬಳಿ 41 ಎಕರೆ ಸ್ವಾಧೀನಕ್ಕೆ ರೈತರ ವಿರೋಧ ವ್ಯಕ್ತವಾಗಿದೆ. ಇದನ್ನು ಇಲಾಖೆ ಅಧಿಕಾರಿ ವರ್ಗ ಸರಿಪಡಿಸಿಬೇಕಿದೆ. ಈ ನಿಟ್ಟಿನಲ್ಲಿ ಅಧಿಕಾರಿ ವರ್ಗ ಕೆಲಸ ಮಾಡುತ್ತಿದೆ.

ಬಿಡುಗಡೆ ಮಾಡಲಿ:

ಈ ನಡುವೆ ರೈಲ್ವೆ ಯೋಜನೆಗಳ ಭೂಸ್ವಾಧೀನಕ್ಕೆ ₹ 2950 ಕೋಟಿ ಮೀಸಲಿಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದು ಇದು ಬರೀ ಘೋಷಣೆಯಾಗದೇ ₹ 500 ಕೋಟಿಗೂ ಅಧಿಕ ಹಣವನ್ನು ಧಾರವಾಡ- ಕಿತ್ತೂರ- ಬೆಳಗಾವಿ ಯೋಜನೆಗೆ ಬಿಡುಗಡೆ ಮಾಡಬೇಕು. ಪರಿಹಾರ ನೀಡಿ ಸ್ವಾಧೀನ ಪಡಿಸಿಕೊಂಡು ರೈಲ್ವೆ ಇಲಾಖೆಗೆ ಹಸ್ತಾಂತರಿಸಿದರೆ ಕಾಮಗಾರಿ ಶುರುವಾಗಲಿದೆ.ಕೋಟ್‌...

ರಾಜ್ಯ ಸರ್ಕಾರ ರೈಲು ಯೋಜನೆಗಳಿಗಾಗಿ ಪ್ರತ್ಯೇಕ ಹಣ ಮೀಸಲಿಟ್ಟಿರುವುದಾಗಿ ಘೋಷಿಸಿರುವುದು ಸಂತಸಕರ. ಆದರೆ, ಇದು ಬರೀ ಘೋಷಣೆಯಷ್ಟೇ ಆಗದೇ ಆದಷ್ಟು ಶೀಘ್ರ ಬಿಡುಗಡೆ ಮಾಡುವ ಮೂಲಕ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಅಂದಾಗ ರೈಲು ಹಳಿ ಕೆಲಸ ಶುರುವಾಗುತ್ತದೆ.

ಮಂಜುನಾಥ ಪಾಟೀಲ, ಉದ್ಯಮಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಂಕರಪುರ ಕ್ಷೇತ್ರ: 31ರಿಂದ ಮುಖ್ಯಪ್ರಾಣ ಶಿಲಾಮೂರ್ತಿ ಬ್ರಹ್ಮಕಲಶೋತ್ಸವ
ಡಾ ಮಂತರ್ ಪ್ರಯತ್ನ: ಕೊಡವ ಹೆರಿಟೇಜ್ ಸೆಂಟರ್ ಶೀಘ್ರ ಲೋಕಾರ್ಪಣೆ