ಕುಂಟುತ್ತಾ ಸಾಗಿದ ರೈಲ್ವೆ ಅಂಡರ್‌ಪಾಸ್ ಕಾಮಗಾರಿ

KannadaprabhaNewsNetwork | Published : Dec 9, 2024 12:48 AM

ಸಾರಾಂಶ

ಕಾರ್ಮಿಕರು, ಆ್ಯಂಬುಲೆನ್ಸ್‌ಗಳು ತಾಸುಗಟ್ಟಲೇ ಕಾಯುತ್ತ ನಿಲ್ಲಬೇಕಾದ ಅನಿವಾರ್ಯತೆ ಎದುರಾಗಿದೆ.

ವಿ.ಎಂ. ನಾಗಭೂಷಣ

ಸಂಡೂರು: ತಾಲೂಕಿನ ತೋರಣಗಲ್ಲು ಹೋಬಳಿಯ ಎಸ್. ಬಸಾಪುರ ಹಾಗೂ ಕುರೆಕುಪ್ಪ ಕ್ರಾಸ್ ಮಾರ್ಗ ಮಧ್ಯದಲ್ಲಿ ಆರಂಭವಾಗಿರುವ ರೈಲ್ವೆ ಅಂಡರ್‌ಪಾಸ್ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದೆ.

ಇದರಿಂದ ಎಸ್. ಬಸಾಪುರ ಹಾಗೂ ಕುರೆಕುಪ್ಪ ಕ್ರಾಸ್ ಮಧ್ಯೆ ಸಂಚರಿಸುವ ಸಾರ್ವಜನಿಕರು, ವಿದ್ಯಾರ್ಥಿಗಳು, ಕಾರ್ಮಿಕರು, ಆ್ಯಂಬುಲೆನ್ಸ್‌ಗಳು ತಾಸುಗಟ್ಟಲೇ ಕಾಯುತ್ತ ನಿಲ್ಲಬೇಕಾದ ಅನಿವಾರ್ಯತೆ ಎದುರಾಗಿದೆ. ಎಸ್. ಬಸಾಪುರ ಹಾಗೂ ಕುರೆಕುಪ್ಪ ಕ್ರಾಸ್ ಮಾರ್ಗವಾಗಿ ಎಸ್. ಬಸಾಪುರದ ಜನತೆ ಸಂಚರಿಸುತ್ತಾರೆ. ಈ ಮಾರ್ಗ ಮಧ್ಯೆ ರೈಲು ಮಾರ್ಗವಿದೆ. ಇಲ್ಲಿ ಪ್ರತಿನಿತ್ಯ ಹಲವು ರೈಲುಗಳು ಸಂಚರಿಸುತ್ತವೆ. ಸಿಗ್ನಲ್ ಸಿಗದಿದ್ದಾಗ ಈ ಮಾರ್ಗದಲ್ಲಿ ಸಾಗುವ ರೈಲುಗಳು ಗಂಟೆಗಟ್ಟಲೇ ನಿಲ್ಲುತ್ತವೆ. ರೈಲುಗಳು ಆರಂಭವಾಗಿ ಮುಂದೆ ಸಂಚರಿಸುವ ವರೆಗೆ ಸಾರ್ವಜನಿಕರು ತುಂಬ ಹೊತ್ತು ಕಾಯಬೇಕಾಗಿದೆ.

ಸಾರ್ವಜನಿಕರು ಈ ಮಾರ್ಗದಲ್ಲಿ ಎದುರಿಸುತ್ತಿರುವ ಸಮಸ್ಯೆ ಕುರಿತು ''''''''ಕನ್ನಡಪ್ರಭ''''''''ದೊಂದಿಗೆ ಮಾತನಾಡಿದ ಗ್ರಾಪಂ ಸದಸ್ಯ ಹಾಗೂ ಎಸ್. ಬಸಾಪುರ ಗ್ರಾಮಸ್ಥ ಜಿ.ಎಸ್. ರುದ್ರಗೌಡ, ಎಸ್. ಬಸಾಪುರ ಹಾಗೂ ಕುರೆಕುಪ್ಪ ಕ್ರಾಸ್ ಮಾರ್ಗ ಮಧ್ಯದ ರೈಲ್ವೆ ಮಾರ್ಗದಲ್ಲಿ ಪ್ರತಿದಿನ ಹೊಸಪೇಟೆ-ತೋರಣಗಲ್ಲು ಮಾರ್ಗ ಮಧ್ಯೆ 80-90 ರೈಲುಗಳು ಸಂಚರಿಸುತ್ತವೆ. ಹಲವು ಬಾರಿ ಸಿಗ್ನಲ್ ಸಿಗದಿದ್ದಾಗ ಇಲ್ಲಿ ರೈಲು ನಿಲುಗಡೆಗೊಂಡರೆ ಸಾರ್ವಜನಿಕರು, ಆ್ಯಂಬುಲೆನ್ಸ್‌ಗಳು, ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಗಂಟೆಗಟ್ಟಲೇ ಕಾಯಬೇಕಾಗುತ್ತದೆ. ಕೆಲ ಬಾರಿ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ರೈಲನ್ನು ತೂರಿಕೊಂಡು ಹೋಗುತ್ತಾರೆ. ಈಗಾಗಲೇ ಇಲ್ಲಿ ರೈಲು ನಿಲುಗಡೆಯಿಂದಾಗಿ ಗ್ರಾಮದ ಕೆಲವರು ಎದೆನೋವು ಕಾಣಿಸಿಕೊಂಡವರು, ಗರ್ಭಿಣಿಯರು ಸೂಕ್ತ ಸಮಯಕ್ಕೆ ಆಸ್ಪತ್ರೆಗೆ ಹೋಗಲಾಗದೇ ಮೃತಪಟ್ಟ ಉದಾಹರಣೆಗಳಿವೆ. ರೈಲ್ವೆ ಅಂಡರ್ ಪಾಸ್ ನಿರ್ಮಾಣ ಕಾಮಗಾರಿ ಆರಂಭವಾಗಿ ಸುಮಾರು ಒಂದೂವರೆ ವರ್ಷವಾಗುತ್ತಾ ಬಂತು. ಇನ್ನು ಮುಗಿದಿಲ್ಲ. ಈ ಅಂಡರ್ ಪಾಸ್ ನಿರ್ಮಾಣ ಕಾರ್ಯ ಮುಗಿದರೆ, ಈ ಸಮಸ್ಯೆ ಪರಿಹಾರವಾಗಲಿದೆ. ಸಾರ್ವಜನಿಕರಿಗೂ ಅನುಕೂಲವಾಗಲಿದೆ. ಈ ಕಾಮಗಾರಿ ಶೀಘ್ರ ಪೂರ್ಣಗೊಳಿಸುವ ಅಗತ್ಯವಿದೆ ಎಂದು ತಿಳಿಸಿದರು.

ರೈಲ್ವೆ ಅಂಡರ್ ಪಾಸ್ ಕಾಮಗಾರಿ ಬೇಗನೆ ಪೂರ್ಣಗೊಂಡರೆ ಈ ಮಾರ್ಗದಲ್ಲಿ ಸಾರ್ವಜನಿಕರು ಅನುಭವಿಸುತ್ತಿರುವ ತೊಂದರೆ ನಿವಾರಣೆಯಾಗಲಿದೆ ಎಂಬ ಅಭಿಪ್ರಾಯ ಗ್ರಾಮಸ್ಥರದ್ದು. ಸಂಬಂಧಪಟ್ಟ ಇಲಾಖೆಯವರು, ಗುತ್ತಿಗೆದಾರರು ಶೀಘ್ರ ರೈಲ್ವೆ ಅಂಡರ್‌ಪಾಸ್ ಕಾಮಗಾರಿ ಪೂರ್ಣಗೊಳಿಸಿ, ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕಿದೆ.

Share this article