ಬೆಂಗಳೂರು : ಕರ್ನಾಟಕದಲ್ಲಿ ರೈಲ್ವೆ ವಲಯ ಮಹತ್ತರ ಪರಿವರ್ತನೆ ಕಾಣುತ್ತಿದ್ದು, 54 ಸಾವಿರ ಕೋಟಿ ರು.ನಷ್ಟು ಮೌಲ್ಯದ ರೈಲ್ವೆ ಕಾಮಗಾರಿಗಳು ನಡೆಯುತ್ತಿವೆ ಎಂದು ಕೇಂದ್ರ ರೈಲ್ವೆ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಭಾನುವಾರ ನಡೆದ ಮೆಟ್ರೋ 3ನೇ ಹಂತದ ಯೋಜನೆಗೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿ, ರೈಲ್ವೆ ಇಲಾಖೆ ಮಹತ್ತರ ಬದಲಾವಣೆಗಳನ್ನು ಕಾಣುತ್ತಿದೆ. ಪ್ರಮುಖ ರಾಜ್ಯವಾಗಿದ್ದರೂ ಕರ್ನಾಟಕ ಕೇಂದ್ರ ಬಜೆಟ್‌ನಲ್ಲಿ ಕೇವಲ 835 ಕೋಟಿ ರು.ಗಳಷ್ಟು ಕನಿಷ್ಠ ವಾರ್ಷಿಕ ಅನುದಾನ ಪಡೆಯುತ್ತಿತ್ತು. ಆದರೆ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಪ್ರಸ್ತುತ ₹7,500 ಕೋಟಿ ರು. ಅನ್ನು ರೈಲ್ವೆ ಬಜೆಟ್‌ನಲ್ಲಿ ಕರ್ನಾಟಕ ಪಡೆಯುತ್ತಿದೆ. 54 ಸಾವಿರ ಕೋಟಿ ಮೌಲ್ಯದ ರೈಲ್ವೆ ಕಾಮಗಾರಿಗಳು ರಾಜ್ಯದಲ್ಲಿ ನಡೆಯುತ್ತಿದ್ದು, 61 ರೈಲ್ವೆ ನಿಲ್ದಾಣಗಳನ್ನು ಅಮೃತ್ ಭಾರತ ಯೋಜನೆಯಡಿ ಮರು ನಿರ್ಮಾಣ ಮಾಡಲಾಗುತ್ತಿದೆ. 124 ಆರ್‌ಒಬಿ, ಫ್ಲೈಓವರ್ ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಕಳೆದ 11 ವರ್ಷದಲ್ಲಿ 35,000 ಕಿ.ಮೀ. ಉದ್ದದ ಟ್ರ್ಯಾಕ್‌ಗಳನ್ನು ನಿರ್ಮಿಸಲಾಗಿದೆ. ಎಲ್ಲ ಮಾರ್ಗಗಳನ್ನು ವಿದ್ಯುದ್ದೀಕರಣ ಮಾಡಲಾಗುತ್ತಿದೆ. 1,300 ರೈಲ್ವೆ ನಿಲ್ದಾಣಗಳ ಮರು ನಿರ್ಮಾಣ ಯೋಜನೆ ಪ್ರಗತಿಯಲ್ಲಿದೆ. ಅತ್ಯಾಧುನಿಕ ವಂದೇ ಭಾರತ್, ನಮೋ ಭಾರತ್, ಅಮೃತ್ ಭಾರತ್ ರೈಲುಗಳು ಪ್ರಯಾಣಿಕರ ಸಂಚಾರ ಸುಗಮಗೊಳಿಸಿವೆ ಎಂದರು.
ದೇಶದಲ್ಲಿ ಎಲೆಕ್ಟ್ರಾನಿಕ್ ವಲಯ ಪರಿವರ್ತನೆ ಆಗುತ್ತಿದೆ. 11 ವರ್ಷದಲ್ಲಿ ಭಾರತದ ಎಲೆಕ್ಟ್ರಾನಿಕ್ ಉತ್ಪಾದನಾ ಪ್ರಮಾಣ ಆರು ಪಟ್ಟು ಹೆಚ್ಚಾಗಿದ್ದು, ಉತ್ಪಾದನೆ ₹12 ಲಕ್ಷ ಕೋಟಿ ಮೌಲ್ಯ ತಲುಪಿದ್ದರೆ, ಎಲೆಕ್ಟ್ರಾನಿಕ್ ರಫ್ತು 8 ಪಟ್ಟು ಹೆಚ್ಚಾಗಿದೆ. ಭಾರತ ಜಾಗತಿಕವಾಗಿ ಮೊಬೈಲ್ ಉತ್ಪಾದನೆಯಲ್ಲಿ 2ನೇ ಅತಿದೊಡ್ಡ ರಾಷ್ಟ್ರವಾಗಿದೆ. ಬೆಂಗಳೂರಿನ ದೇವನಹಳ್ಳಿ ಪ್ರಮುಖ ಐಫೋನ್ ಉತ್ಪಾದನಾ ಹಬ್ ಎನಿಸಿಕೊಳ್ಳಲಿದೆ ಎಂದರು.
ಭಾರತವು ಎಲ್ಲ ರಾಷ್ಟ್ರಗಳನ್ನು ಹಿಂದಿಕ್ಕಿ ಅಮೆರಿಕಕ್ಕೆ ಸ್ಮಾರ್ಟ್‌ಫೋನ್ ರಫ್ತು ಮಾಡುವ ಮುಂಚೂಣಿ ರಾಷ್ಟ್ರ ಅನಿಸಿಕೊಂಡಿದೆ. ಕೃತಕ ಬುದ್ಧಿಮತ್ತೆ ಜಗತ್ತನ್ನು ಆವರಿಸುತ್ತಿದ್ದು, ಪ್ರಧಾನಿ ಮೋದಿ ಈ ತಂತ್ರಜ್ಞಾನ ಎಲ್ಲರಿಗೂ ತಲುಪಬೇಕು ಎಂಬ ಗುರಿ ಹೊಂದಿದ್ದಾರೆ. ಇದಕ್ಕಾಗಿ ಇಂಡಿಯಾ ಎಐ ಮಿಷನ್ ಯೋಜಿಸಲಾಗಿದ್ದು, ಅದರಡಿ 3,40,000 ಗ್ರಾಫಿಕ್ ಪ್ರೊಸೆಸಿಂಗ್ ಯುನಿಟ್ ಗಳನ್ನು (ಜಿಪಿಯು) ಸ್ಥಾಪಿಸಲಾಗಿದ್ದು, ಕಾಮನ್ ಕಂಪ್ಯೂಟಿಂಗ್ ಸೌಲಭ್ಯವನ್ನು ನಾವೀನ್ಯಕಾರರಿಗೆ ಒದಗಿಸಲಾಗಿದೆ.
ಇದರಿಂದ 1 ಗಂಟೆಗೆ 1 ಡಾಲರ್‌ಗೂ ಕಡಿಮೆ ವೆಚ್ಚದಲ್ಲಿ ಬಳಕೆಗೆ ಅನುವು ಮಾಡಿಕೊಡಲಾಗಿದೆ. ಬೆಂಗಳೂರು ಮೂಲದ ನವೋದ್ಯಮ ಸರ್ವಂ ಕಂಪನಿ ನಮ್ಮದೇ ಆದ ಎಲ್ಎಲ್‌ಎಂ, ಭಾರತೀಯ ಡೆಟಾ ಬಳಸಿ ಮಹತ್ತರವಾದ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಶೀಘ್ರ ಮೇಡ್ ಇನ್ ಇಂಡಿಯಾ ಚಿಪ್: ಭಾರತದಲ್ಲಿ ನಮ್ಮದೇ ಆದ ಸೆಮಿಕಂಡಕ್ಟರ್ ಹೊಂದುವ ಕನಸು ಕೂಡ ನನಸಾಗುತ್ತಿದೆ. ಪ್ರಧಾನಿ ಮೋದಿ ಅವರ ವಿಶನ್, ಮಾರ್ಗದರ್ಶನದ ಪರಿಣಾಮ ಪ್ರಸ್ತುತ ದೇಶದಲ್ಲಿ ಆರು ಕಡೆ ಸೆಮಿಕಂಡಕ್ಟರ್ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಶೀಘ್ರ ನಾವು ಈ ಕಂಪನಿಗಳಿಂದ ಮೇಡ್ ಇನ್ ಇಂಡಿಯಾ ಚಿಪ್‌ಗಳನ್ನು ಕಾಣಲಿದ್ದೇವೆ ಎಂದು ಸಚಿವರು ಹೇಳಿದರು.
2047ರ ವಿಕಸಿತ ಭಾರತ ಗುರಿಗಾಗಿ ಪ್ರಧಾನಿ ಮೋದಿ ಅವರು ಶ್ರಮಿಸುತ್ತಿದ್ದು, ದೇಶದ 140 ಕೋಟಿ ಜನ ಇದಕ್ಕೆ ಕೈಜೋಡಿಸಿದ್ದಾರೆ. ಆ ವೇಳೆಗೆ ಅಭಿವೃದ್ಧಿ ರಾಷ್ಟ್ರವಾಗಿ ಬೆಳೆಯಲಿದ್ದೇವೆ. 2014 ರಲ್ಲಿ ದುರ್ಬಲ ಆರ್ಥಿಕತೆ ಎಂದು ಕರೆಸಿಕೊಳ್ಳುತ್ತಿದ್ದ ಭಾರತ ಈಗ ಜಾಗತಿಕ ಮಟ್ಟದ ಅನಿಶ್ಚಿತತೆ ನಡುವೆಯೂ ಅಭಿವೃದ್ಧಿಯಲ್ಲಿ ಮುಂಚೂಣಿ ರಾಷ್ಟ್ರ ಅನಿಸಿಕೊಂಡಿದೆ ಎಂದು ಹೇಳಿದರು.