ಬ್ಯಾಡಗಿಯಲ್ಲಿ ಗಾಳಿ ಸಹಿತ ಮಳೆ, ಜನಜೀವನ ಅಸ್ತವ್ಯಸ್ತ

KannadaprabhaNewsNetwork |  
Published : May 17, 2026, 02:15 AM IST
ಶನಿವಾರ ಸಂಜೆ ಸುರಿದ ಮಳೆಗಾಳಿಗೆ ಬ್ಯಾಡಗಿ ತಾಲೂಕಿನ ಬನ್ನಿಹಟ್ಟಿ-ಬಿಸಲಹಳ್ಳಿ ಗ್ರಾಮದ ರಸ್ತೆಯ ಮಧ್ಯೆ ಮರಗಳು ಹಾಗೂ ವಿದ್ಯುತ್ ಕಂಬಗಳು ಬಿದ್ದಿವೆ. | Kannada Prabha

ಸಾರಾಂಶ

ಬ್ಯಾಡಗಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಶನಿವಾರ ಸಂಜೆ ಗುಡುಗು, ಮಿಂಚು ಸಹಿತ ಗಾಳಿ ಮಳೆಗೆ ವಿದ್ಯುತ್ ಕಂಬಗಳು ಹಾಗೂ ಮರಗಿಡಗಳು ಧರೆಗುರುಳಿದ್ದು, ಸಾರ್ವಜನಿಕ ಜನಜೀವನ ಅಸ್ತವ್ಯಸ್ಥಗೊಂಡಿದೆ.

ಬ್ಯಾಡಗಿ: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಶನಿವಾರ ಸಂಜೆ ಗುಡುಗು, ಮಿಂಚು ಸಹಿತ ಗಾಳಿ ಮಳೆಗೆ ವಿದ್ಯುತ್ ಕಂಬಗಳು ಹಾಗೂ ಮರಗಿಡಗಳು ಧರೆಗುರುಳಿದ್ದು, ಸಾರ್ವಜನಿಕ ಜನಜೀವನ ಅಸ್ತವ್ಯಸ್ಥಗೊಂಡಿದೆ.

ಶನಿವಾರ ಸಂಜೆ 5.30ರ ವರೆಗೂ ಗಾಳಿ-ಮಳೆ ಯಾವುದೇ ಲಕ್ಷಣಗಳು ಕಂಡು ಬಂದಿರಲಿಲ್ಲ. ಬಿಸಿಲ ಬೇಗೆಯ ನಡುವೆ ವಾರದ ಸಂತೆ ಕೂಡ ನಡೆಯುತ್ತಿತ್ತು. ಆದರೆ ಕೇವಲ 10 ನಿಮಿಷಗಳಲ್ಲಿ ಗಾಳಿ ಸಹಿತ ಮಳೆಗೆ ಜನ ತತ್ತರಿಸುವಂತಾಗಿದೆ.

ರಸ್ತೆ ಸಂಚಾರ ಸ್ಥಗಿತ: ಗಾಳಿಯ ಆರ್ಭಟಕ್ಕೆ ಬಹುತೇಕ ಮರದ ಟೊಂಗೆಗಳು ಮುರಿದು ರಸ್ತೆಯಲ್ಲಿ ಬಿದ್ದಿದ್ದವು. ಬನ್ನಿಹಟ್ಟಿ-ಬಿಸಲಹಳ್ಳಿ ಗ್ರಾಮಗಳ ಮಧ್ಯೆ ಕೆಲಕಾಲ ವಾಹನಗಳ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು. ಗಾಳಿಯ ರಭಸಕ್ಕೆ ಮರಗಳು ವಿದ್ಯುತ್ ತಂತಿಗಳು ಮೇಲೆ ಬಿದ್ದು ಹರಿದ ತಂತಿಗಳು ರಸ್ತೆ ಮಧ್ಯೆ ಚೆಲ್ಲಾಪಿಲ್ಲಿಯಾಗಿದ್ದವು.

ಹಾರಿದ ಹೋದ ತಗಡಿನ ಮೇಲ್ಚಾವಣಿ: ಗಾಳಿಯ ರಭಸಕ್ಕೆ ಇತ್ತೀಚೆಗಷ್ಟೆ ಮನೆ ಮೇಲೆ ಅಳವಡಿಸಿದ್ದ ಚಾವಣಿ ಕಿತ್ತು ಹೋಗಿದ್ದು, ತಗಡುಗಳು ಹಾರಿ ಹೋಗಿವೆ. ಕಳೆದ 8 ತಿಂಗಳಷ್ಟೇ ₹5 ಲಕ್ಷ ವ್ಯಯಿಸಿ ಮೇಲ್ಚಾವಣಿ ನಿರ್ಮಿಸಿದ್ದ ಮಂಜುನಾಥ ವಿರೂಪಾಕ್ಷಪ್ಬ ಬಳ್ಳಾರಿ ಇವರ ಮನೆಯ ಮೇಲಿನ ತಗಡು ಹಾರಿಹೋಗಿವೆ.

ಅಗಲೀಕರಣಕ್ಕೂ ಅಡ್ಡಿಪಡಿಸುತ್ತಿರುವ ಮಳೆ: ಪಟ್ಟಣದಲ್ಲಿ ಅಗಲೀಕರಣ ಕಾಮಗಾರಿ ಭರದಿಂದ ಸಾಗಿದೆ. ಆದರೆ ಮಳೆಯಿಂದಾಗಿ ರಸ್ತೆ ಮೇಲಿರುವ ಮಣ್ಣು ಸಂಪೂರ್ಣವಾಗಿ ತೊಯ್ದಿದ್ದು, ಮಣ್ಣಿನಲ್ಲಿ ತೇವಾಂಶ ಕಡಿಮೆಯಾಗುವ ವರೆಗೂ ಅದನ್ನು ಸ್ಥಳಾಂತರಿಸಲು ಸಾಧ್ಯವಾಗುವುದಿಲ್ಲ.

10ಕ್ಕೂ ಹೆಚ್ಚು ವಿದ್ಯುತ್ ಕಂಬ ನೆಲಕ್ಕೆ: ಮಳೆಗಾಳಿಯ ರಭಸಕ್ಕೆ ಯಾವುದೇ ಸಾವು ನೋವಿನ ವರದಿಯಾಗಿಲ್ಲ. ತಾಲೂಕಿನ ವಿವಿಧೆಡೆ 10ಕ್ಕೂ ಹೆಚ್ಚು ಕಂಬಗಳು ಧರೆಗುರುಳಿವೆ. ಹೀಗಾಗಿ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅರಣ್ಯ ಇಲಾಖೆಯ ಅನುಮತಿ ಇಲ್ಲದೆ ಮರಗಳ ಕಡಿತ: ಪ್ರಕರಣ ದಾಖಲು
ಶನೈಶ್ಚರ ದೇವರ ಪ್ರತಿಮೆಗೆ ತೈಲಾಭಿಷೇಕ