ಹಾನಗಲ್ಲ: ಒಂದೆಡೆ ರಾಜ್ಯ ಸರ್ಕಾರ ಬೆಲೆ ಏರಿಕೆ ಬಿಸಿಯಿಂದ ತತ್ತರಿಸಿರುವ ಜನರ ನೆರವಿಗೆ ಗ್ಯಾರಂಟಿ ಯೋಜನೆಗಳ ಮೂಲಕ ಸಹಾಯದ ಹಸ್ತ ಚಾಚಿದ್ದರೆ ಇನ್ನೊಂದೆಡೆ ಕೇಂದ್ರ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸಿ, ಜನಸಾಮಾನ್ಯರ ಗಾಯದ ಮೇಲೆ ಬರೆ ಎಳೆಯುತ್ತಿದೆ. ಪ್ರತಿಯೊಂದಕ್ಕೂ ನಿರ್ಬಂಧ ಹೇರುತ್ತಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಆಕ್ರೋಶ ವ್ಯಕ್ತಪಡಿಸಿದರು.
ಶಿಗ್ಗಾಂವಿ, ಸವಣೂರು ಕ್ಷೇತ್ರದ ಶಾಸಕ ಯಾಸೀರ್‌ಖಾನ ಪಠಾಣ ಮಾತನಾಡಿ, ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಜತೆಗೆ ಹಾನಗಲ್ ತಾಲೂಕಿನಲ್ಲಿ ಶಾಸಕ ಶ್ರೀನಿವಾಸ ಮಾನೆ ಅವರು ೬ನೇ ಗ್ಯಾರಂಟಿಯ ಘೋಷಣೆ ಮಾಡಿದ್ದರು. ಅದರನ್ವಯ ಇದೀಗ ೧೩ ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಮನೆ ಮಾಲೀಕತ್ವ ಕೊಡಿಸುತ್ತಿದ್ದಾರೆ ಎಂದರು.
ತಹಸೀಲ್ದಾರ್ ರೇಣುಕಾ ಎಸ್. ಮಾತನಾಡಿ, ತಾಲೂಕಿನಲ್ಲಿ ಭೂಗ್ಯಾರಂಟಿ ಕಾರ್ಯಕ್ರಮದಡಿ ಈಗಾಗಲೇ ೮ ಸಾವಿರ ಹಕ್ಕುಪತ್ರ ನೀಡಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಮನೆ ಇದ್ದರೂ ಮಾಲೀಕತ್ವ ಇಲ್ಲದ ಕುಟುಂಬಗಳಿಂದು ಶಾಶ್ವತ ಅಳಿಸಲಾಗದ ದಾಖಲೆಗಳೊಂದಿಗೆ ಮಾಲೀಕತ್ವ ಹೊಂದುತ್ತಿವೆ. ಕೇಂದ್ರ ಸರ್ಕಾರದ ಜನಗಣತಿ ಮುಗಿದ ಬಳಿಕ ತಾಲೂಕಿನ ಇನ್ನಷ್ಟು ಕುಟುಂಬಗಳಿಗೆ ಮನೆ ಮಾಲೀಕತ್ವ ನೀಡಲಾಗುವುದು ಎಂದು ತಿಳಿಸಿದರು.ಮಾತು ಉಳಿಸಿಕೊಂಡ ತೃಪ್ತಿ: ಹಾನಗಲ್ ತಾಲೂಕಿನಲ್ಲಿ ದಿನದ ದುಡಿಮೆ ಮೇಲೆ ಅವಲಂಬಿತ ಕುಟುಂಬಗಳ ಸಂಖ್ಯೆ ಹೆಚ್ಚಿದೆ. ಇಂಥ ಸಾಕಷ್ಟು ಕುಟುಂಬಗಳು ಮನೆ ಮಾಲೀಕತ್ವ ಇಲ್ಲದೇ ಅಭದ್ರತೆಯಲ್ಲಿ ದಿನ ದೂಡುತ್ತಿದ್ದವು. ಮನೆ ಮಾಲೀಕತ್ವ ಒದಗಿಸಿ ಕುಟುಂಬಗಳಿಗೆ ಭದ್ರತೆ ಕಲ್ಪಿಸುವ ಭರವಸೆ ೨೦೨೩ರ ಚುನಾವಣೆ ಸಂದರ್ಭದಲ್ಲಿ ನೀಡಲಾಗಿತ್ತು. ಮಾತು ಉಳಿಸಿಕೊಂಡ ತೃಪ್ತಿ ನಮಗೆ ಇದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.