ತಾಲೂಕಿನಾದ್ಯಂತ 188.08 ಮಿಮೀ ಮಳೆ । ಜಲಾವೃತ್ತಗೊಂಡ ಟೊಮೆಟೊ, ಅಡಿಕೆ, ಪಪ್ಪಾಯಿ ಬೆಳೆ
ತಾಲೂಕಿನಾದ್ಯಂತ ಗುರುವಾರ ರಾತ್ರಿ ನಿರೀಕ್ಷೆಗೂ ಮೀರಿ ಉತ್ತಮ ಮಳೆಯಾಗಿದ್ದು, ಗ್ರಾಮಾಂತರ ಪ್ರದೇಶದ ಹಲವಾರು ಮನೆ ಹಾಗೂ ಜಮೀನುಗಳಿಗೆ ನೀರು ನುಗ್ಗಿ ಅಪಾರ ನಷ್ಟ ಸಂಭವಿಸಿದೆ.
ಗುರುವಾರ ತಡರಾತ್ರಿ ನಾಯಕನಹಟ್ಟಿ-77.04 ಮಿಮೀ, ಪರಶುರಾಮಪುರ-41.02 ಮಿಮೀ, ತಳಕು-34.04 ಮಿಮೀ, ಚಳ್ಳಕೆರೆ-23.02 ಮಿಮೀ, ದೇವರಮರಿಕುಂಟೆ-13.06 ಮಿಮೀ ಮಳೆ ಸುರಿದಿದ್ದು, ಒಟ್ಟು ತಾಲೂಕಿನಾದ್ಯಂತ 188.08 ಮಿಮೀ. ಮಳೆಯಾಗಿದೆ.ತಾಲೂಕಿನ ಬಾಲೇನಹಳ್ಳಿ ಗ್ರಾಮದ ಪುಟ್ಟಮ್ಮ ಎಂಬುವವರ ಮನೆಗೆ ಏಕಾಏಕಿ ನೀರು ನುಗ್ಗಿ ಮನೆಯಲ್ಲಿದ್ದ ಸಾಮಾನುಗಳು ನೀರಿನಲ್ಲಿ ಮುಳುಗಿ ಸುಮಾರು ₹50 ಸಾವಿರಕ್ಕೂ ಹೆಚ್ಚು ನಷ್ಟ ಸಂಭವಿಸಿದೆ.
ಗರ‍್ಲಕಟ್ಟೆ ಗ್ರಾಮದ ಸರ್ವೆ.ನಂ. 46ರ ಮಧುರೆ ನಿಂಗಪ್ಪ ಎಂಬುವವರಿಗೆ ಸೇರಿದ ಮೂರು ಎಕರೆ ಪ್ರದೇಶದಲ್ಲಿ ಬೆಳೆದ ಟೊಮೆಟೊ ಬೆಳೆ ಸಂಪೂರ್ಣ ನೀರಲ್ಲಿ ಮುಳುಗಿ ಲಕ್ಷಾಂತರ ರು. ಹಾನಿ ಉಂಟಾಗಿದೆ. ಅಲ್ಲದೆ ರಾಮಜೋಗಿಹಳ್ಳಿಯ ತಿಪ್ಪೇಸ್ವಾಮಿ ಮನೆ ಹಿಂಭಾಗದ ಗೋಡೆ ಬಿದ್ದು ₹20 ಸಾವಿರ ನಷ್ಟವಾಗಿದೆ.