ನಾಪೋಕ್ಲು: ವರುಣನ ಆರ್ಭಟ, ರಸ್ತೆ ಸಂಚಾರಕ್ಕೆ ಅಡ್ಡಿ

KannadaprabhaNewsNetwork |  
Published : May 27, 2025, 12:16 AM ISTUpdated : May 27, 2025, 12:17 AM IST
ಆರ್ಭಟ | Kannada Prabha

ಸಾರಾಂಶ

ಸುತ್ತಮುತ್ತಲಿನ ಗ್ರಾಮಗಳಲ್ಲಿ ಮುಂಗಾರು ಮಳೆಯ ಆರ್ಭಟ ಮುಂದುವರೆದಿದೆ. ಅಲ್ಲಲ್ಲಿ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ.

ಕನ್ನಡಪ್ರಭ ವಾರ್ತೆ ನಾಪೋಕ್ಲು

ನಾಪೋಕ್ಲುವಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮುಂಗಾರು ಮಳೆಯ ಆರ್ಭಟ ಕಳೆದ ಮೂರು ದಿನಗಳಿಂದ ಮುಂದುವರೆದಿದ್ದು ಅಲ್ಲಲ್ಲಿ ರಸ್ತೆ ಸಂಚಾರಕ್ಕೆ ಅಡ್ಡಿ ಒಂದು ಕಡೆಯಾದರೆ ಕೆಲವು ಕಡೆ ಮನೆ ಹಾಗೂ ತಡೆ ಗೋಡೆಗಳಿಗೆ ಹಾನಿಯಾಗಿ ನಷ್ಟ ಸಂಭವಿಸಿದೆ.

ಇಲ್ಲಿಗೆ ಸಮೀಪದ ಕಲ್ಲು ಮೊಟ್ಟೆಯಲ್ಲಿ ಮಳೆ ಗಾಳಿಯಿಂದಾಗಿ ಮನೆಯ ತಡೆಗೋಡೆ ಕುಸಿದು ಬಿದ್ದು ನಷ್ಟ ಸಂಭವಿಸಿದೆ. ಕಲ್ಲು ಮೊಟ್ಟೆನಿವಾಸಿ ಕೆ.ಕೆ.ಪುಷ್ಪ ಎಂಬವರ ನೂತನ ಮನೆಗೆ ಸುಮಾರು 40 ಅಡಿ ಉದ್ದ ಹಾಗೂ 8 ಅಡಿ ಎತ್ತರದ ತಡೆಗೋಡೆ ನಿರ್ಮಿಸಿದ್ದು ಭಾನುವಾರ ರಾತ್ರಿ ಅಧಿಕ ಮಳೆ ಗಾಳಿ ಯಿಂದ ಸಂಪೂರ್ಣ ಧರಾಶಾಹಿಯಾಗಿದೆ. ಇದರಿಂದ ಸುಮಾರು 80 ಸಾವಿರ ರು. ನಷ್ಟ ಸಂಭವಿಸಿರುವುದಾಗಿ ತಿಳಿದು ಬಂದಿದೆ.

ಸಂಚಾರಕ್ಕೆ ತೊಡಕು:

ಇಲ್ಲಿಗೆ ಸಮೀಪದ ಎಮ್ಮೆಮಾಡು - ಕೂರುಳಿ ರಸ್ತೆಯಲ್ಲಿ ಸೋಮವಾರ ಅಡ್ಡಲಾಗಿ ಬಿದ್ದ ಮರದಿ೦ದ ಸಂಚಾರಕ್ಕೆ ತೊಡಕಾಗಿದೆ. ಎಮ್ಮೆಮಾಡು ಕೂರುಳಿ ಗ್ರಾಮಕ್ಕೆ ತೆರಳುವ ಸುಭಾಷ್ ನಗರ ಪೈಸಾರಿ ಬಳಿಯ ರಸ್ತೆಗೆ ಅಡ್ಡಲಾಗಿ ಮರ ಬಿದ್ದು ಸಂಚಾರಕ್ಕೆ ತೊಡಕುಂಟಾಗಿದೆ. ಮರ ಬಿದ್ದ ಪರಿಣಾಮ ವಿದ್ಯುತ್ ಕಂಬಕ್ಕೆ ಹಾನಿಯಾಗಿ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ.

ನಾಪೋಕ್ಲುವಿನಲ್ಲಿ ಸುರಿದ ಭಾರಿ ಗಾಳಿ ಮಳೆಗೆ ಬೇತು ರಸ್ತೆಯಲ್ಲಿರುವ ಹಂಸ ಎಂಬವರ ಒಡೆತನದ ಮಣ್ಣಿನಿಂದ ನಿರ್ಮಿಸಿದ ಹಳೇ ಕಟ್ಟಡದ ಮೇಲ್ಛಾವಣಿ ಕುಸಿತವಾಗಿದೆ. ಕಟ್ಟಡದ ಪುನರ್ ನಿರ್ಮಾಣದ ಹಿನ್ನೆಲೆ ಕೆಲವು ತಿಂಗಳುಗಳ ಹಿಂದೆ ಇದರಲ್ಲಿ ವ್ಯಾಪಾರ ಮಾಡುತ್ತಿರುವವರನ್ನು ತೆರವುಗೊಳಿಸಲಾಗಿತ್ತು. ಸೋಮವಾರ ಮುಂಜಾನೆ ಕಟ್ಟಡ ಕುಸಿದಿದ್ದು ಮೇಲ್ಚಾವಣಿ ಮರ ಮುಟ್ಟುಗಳು ಹಾಗೂ ಹೆಂಚುಗಳು ಹಾನಿಯಾಗಿ ನಷ್ಟ ಸಂಭವಿಸಿದೆ.

ನಾಪೋಕ್ಲು ಕೈಕಾಡು ಪಾರಾಣೆ ಮಾರ್ಗವಾಗಿ ವಿರಾಜಪೇಟೆಗೆ ತೆರಳುವ ಮುಖ್ಯ ರಸ್ತೆಗೆ ಮರ ಬುಡ ಸಮೇತ ಬಿದ್ದಿದ್ದು ಸಂಚಾರಕ್ಕೆ ಅಡ್ಡಿಯಾಗಿದೆ. ಪಾರಾಣೆಯಿಂದ ಬೆಳ್ಳುಮಾಡು ತೆರಳುವ ಮುಖ್ಯ ರಸ್ತೆಯ ವಲ್ಲಂಡ ಕೊಟ್ಟ್ ಎಂಬಲ್ಲಿ ರಸ್ತೆಗೆ ಅಡ್ಡಲಾಗಿ ಮರ ಬಿದ್ದು ಸಂಚಾರಕ್ಕೆ ತೊಡಕುಂಟಾಗಿತ್ತು. ಬಳಿಕ ಸಾರ್ವಜನಿಕರು ಹಾಗೂ ಜೆಸಿಪಿ ಯಂತ್ರದ ಮೂಲಕ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಸಿಬ್ಬಂದಿ ಭೇಟಿ, ಪರಿಶೀಲನೆ

ಕರಡ ಗ್ರಾಮದ ನಿವಾಸಿಯಾಗಿರುವ ಸುಮಿತ್ರಾ ರವರ ವಾಸದ ಮನೆಯ ಛಾವಣಿಗೆ ಅಳವಡಿಸಲಾಗಿದ್ದ ಸಿಮೆಂಟ್ ಶೀಟ್ ಗಾಳಿ ಮಳೆಗೆ ಹಾರಿ ಹೋಗಿದ್ದು ನಷ್ಟ ಸಂಭವಿಸಿದೆ . ಇದೇ ಗ್ರಾಮದ ದೇವಯ್ಯ ಎಂಬವರ ವಾಸದ ಮನೆ ಮೇಲೆ ಮರ ಬಿದ್ದು ಭಾಗಶ: ಹಾನಿಯಾಗಿದ್ದು ಸ್ಥಳಕ್ಕೆ ಕಂದಾಯ ಪರಿವೀಕ್ಷಕ ರವಿಕುಮಾರ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.

ಕೊಳಕೇರಿ ಗ್ರಾಮದ ಬೀರಾನ್ ಎಂಬುವವರ ಮನೆ ಮೇಲೆ ಭಾರಿ ಗಾತ್ರದ ಮರ ಬಿದ್ದು ಮನೆಯ ಆರ್ ಸಿ ಸಿ ಹಾನಿಯಾಗಿ ನಷ್ಟವಾಗಿದೆ .

ಈ ವರ್ಷ ಬೇಗನೆ ಪ್ರಾರಂಭಗೊಂಡ ಮುಂಗಾರು ಬಿರುಸಿನ ಮಳೆ ಗಾಳಿ ಯಿಂದಾಗಿ ಜನರು ಸಮಸ್ಯೆ ಎದುರಿಸುವಂತಾಗಿದೆ. ವಿದ್ಯುತ್ ಕಂಬಗಳು ಮುರಿದು ಬಿದ್ದ ಕಾರಣದಿಂದಾಗಿ ವಿದ್ಯುತ್ ಪೂರೈಕೆ ಇಲ್ಲದೆ ಹಲವು ಕಡೆ ಕತ್ತಲಲ್ಲಿ ದಿನ ಕಳೆಯುವಂತಾಗಿದೆ .ಈ ವ್ಯಾಪ್ತಿಯಲ್ಲಿ ಸುಮಾರು 20 ಕ್ಕೂ ಅಧಿಕ ವಿದ್ಯುತ್ ಕಂಬಗಳ ತುಂಡಾಗಿ ಬಿದ್ದಿದ್ದು ಸರಿಪಡಿಸುವಲ್ಲಿ ಸಿಬ್ಬಂದಿ ಕಾರ್ಯಪ್ರವೃತ್ತರಾಗಿದ್ದಾರೆ.

ನಾಪೋಕ್ಲು ಹೋಬಳಿ ವ್ಯಾಪ್ತಿಯಲ್ಲಿ ಕಳೆದ 24 ಗಂಟೆಗಳಲ್ಲಿ ಮಳೆಯ ಪ್ರಮಾಣ ನಾಲಡಿಯಲ್ಲಿ 224.6 m.m ಗರಿಷ್ಠ ಮಳೆಯಾಗಿದೆ. ನಾಪೋಕ್ಲು ಪಟ್ಟಣ ವ್ಯಾಪ್ತಿಯಲ್ಲಿ 126.2 m.m ಮಳೆ ಸುರಿದಿದೆ. ನೆಲಜಿ ಗ್ರಾಮದಲ್ಲಿ 7.50. ಇಂಚು, ಅಯ್ಯಂಗೇರಿಯಲ್ಲಿ 7.47 ಇಂಚು ಮಳೆಯಾಗಿದ್ದು ಜನವರಿಯಿಂದ ಇಂದಿನವರೆಗೆ ಒಟ್ಟು 26.94 ಇಂಚು ಮಳೆಯಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

400 ಕೋಟಿ ರು. ದರೋಡೆ ಪ್ರಮುಖ ಆರೋಪಿ ಬಂಧನ
ಕಾಂಗ್ರೆಸ್‌ನವರಿಗೆ ಬಜೆಟ್ ಅರ್ಥವಾಗಲ್ಲ: ಜೋಶಿ ಚಾಟಿ