ಹಾವೇರಿ: ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಆ. ೧೫ರಂದು ಆಯೋಜಿಸಿರುವ ೭೯ನೇ ಸ್ವಾತಂತ್ರ್ಯೋತ್ಸವದ ಸಂಭ್ರಮಕ್ಕೆ ಜಿಟಿ ಜಿಟಿ ಮಳೆ ಅಡ್ಡಿಯಾಗಿದೆ. ಜಿಲ್ಲಾ ಕ್ರೀಡಾಂಗಣ ಮಳೆಯಿಂದ ರಾಡಿಮಯವಾಗಿದ್ದು, ಕವಾಯತು ಸಾಗುವ ಮಾರ್ಗದಲ್ಲಿ ಕಲ್ಲುಪುಡಿ ಹಾಕಿ ಅಂತಿಮ ಹಂತದ ಸಿದ್ಧತಾ ಕಾರ್ಯ ನಡೆಸಲಾಗಿದೆ.
ಬೆಳಗ್ಗೆ ೮ ಗಂಟೆಗೆ ಹುತಾತ್ಮ ಮೈಲಾರ ಮಹದೇವಪ್ಪ ವೃತ್ತದಲ್ಲಿರುವ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಎಂ.ಜಿ. ರಸ್ತೆ, ಜೆ.ಪಿ. ವೃತ್ತದ ಮೂಲಕ ಜಿಲ್ಲಾ ಕ್ರೀಡಾಂಗಣಕ್ಕೆ ಪ್ರಭಾತಪೇರಿ, ಬೆಳಗ್ಗೆ ೯ ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಂದ ಧ್ವಜಾರೋಹಣ, ೯.೧೫ಕ್ಕೆ ಪೊಲೀಸ್, ಗೃಹರಕ್ಷಕದಳ, ಎನ್.ಸಿ.ಸಿ., ಸ್ಕೌಟ್ಸ್ ಆ್ಯಂಡ್ ಗೈಡ್ಸ್, ಅಬಕಾರಿ, ಅರಣ್ಯ ಇಲಾಖೆ, ಸೇವಾದಳ, ಶಾಲಾ- ಕಾಲೇಜು ವಿದ್ಯಾರ್ಥಿಗಳಿಂದ ಪಥಸಂಚಲನ, ಜಿಲ್ಲಾ ಉಸ್ತುವಾರಿ ಸಚಿವರಿಂದ ಸ್ವಾತಂತ್ರ್ಯೋತ್ಸವ ಸಂದೇಶ, ೯.೩೦ರಿಂದ ೧೦.೩೦ರ ವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸಂಜೆ ೪ ಗಂಟೆಗೆ ಗುರುಭವನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲು ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ.ಜಿಲ್ಲಾದ್ಯಂತ ೭೯ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ ಕಳೆಗಟ್ಟಿದ್ದು, ನಗರದ ಹಲವೆಡೆ ಹೆಚ್ಚು ಜನದಟ್ಟಣೆ ಕಂಡುಬರುವ ಕಡೆ ತ್ರಿವರ್ಣ ಧ್ವಜಗಳ ಮಾರಾಟ ಮತ್ತು ಖರೀದಿ ಬಹಳ ಜೋರಾಗಿ ನಡೆಯುತ್ತಿದೆ. ಜತೆಗೆ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಬೇಕಾದ ಅಲಂಕಾರಿಕ ವಸ್ತುಗಳ ಖರೀದಿಯೂ ಸ್ಟೇಶನರಿ ಅಂಗಡಿಗಳು, ಬಟ್ಟೆಯಂಗಡಿಗಳಲ್ಲಿ ಜೋರಾಗಿದೆ. ಹೊಸಮನಿ ಸಿದ್ದಪ್ಪ ವೃತ್ತ, ಜೆ.ಪಿ. ವೃತ್ತ, ಎಂ.ಜಿ. ವೃತ್ತ ಸೇರಿದಂತೆ ವಿವಿಧ ವೃತ್ತಗಳಲ್ಲಿ ದಾವಣಗೆರೆ, ಹರಿಹರ ಸೇರಿದಂತೆ ವಿವಿಧ ಜಿಲ್ಲೆಯಿಂದ ಬಂದಿರುವ ಕೆಲವರು ರಾಷ್ಟ್ರಧ್ವಜ ಹಿಡಿದು ಮಾರಾಟ ಮಾಡುತ್ತಿದ್ದಾರೆ.