ಮಲೆನಾಡಿನಲ್ಲೂ ಬಾರದ ಮಳೆ, ಬಾಡಿದ ಬೆಳೆ

KannadaprabhaNewsNetwork |  
Published : Sep 21, 2026, 01:30 AM IST
ಪೋಟೋ: 20ಎಸ್‌ಎಂಜಿಕೆಪಿ05ಹೊಳೆಹೊನ್ನೂರು ಸಮೀಪದಲ್ಲಿ ಬಿಸಿಲ ಝಳಕ್ಕೆ ಫಲಿಸಿಗೆ ಬಂದ ಮೆಕ್ಕೆಜೋಳ ಬಾಡುತ್ತಿರುವುದು.  | Kannada Prabha

ಸಾರಾಂಶ

ಮುಂಗಾರಿನ ಅಪಾರ ನಿರೀಕ್ಷೆಯೊಂದಿಗೆ ಅರೆ ಹಸಿ ನೆಲದಲ್ಲೇ ಬಿತ್ತನೆ ಮಾಡಿದ್ದ ಜಿಲ್ಲೆಯ ರೈತರಿಗೆ ಇದೀಗ ತೀವ್ರ ಆಘಾತ ಉಂಟಾಗಿದೆ.

ಗಣೇಶ್‌ ತಮ್ಮಡಿಹಳ್ಳಿ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಮುಂಗಾರಿನ ಅಪಾರ ನಿರೀಕ್ಷೆಯೊಂದಿಗೆ ಅರೆ ಹಸಿ ನೆಲದಲ್ಲೇ ಬಿತ್ತನೆ ಮಾಡಿದ್ದ ಜಿಲ್ಲೆಯ ರೈತರಿಗೆ ಇದೀಗ ತೀವ್ರ ಆಘಾತ ಉಂಟಾಗಿದೆ. ಜಿಲ್ಲೆಯಲ್ಲಿ ಬರಗಾಲದ ನಡುವೆಯೂ ಸಾವಿರಾರು ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಿರುವ ಬೆಳೆ ಈಗ ಮಳೆ ಬಾರದೆ ಬಾಡುತ್ತಿದೆ. ಫಸಲಿಗೆ ಬರಬೇಕಿದ್ದ ಬೆಳೆ ಬಿಸಿಲಿಗೆ ಬಾಡುತ್ತಿದ್ದು, ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.

ಸದ್ಯ ಜಿಲ್ಲೆಯಲ್ಲಿ ಮಳೆ ಕಣ್ಮರೆಯಾಗಿದ್ದು, ಮಳೆಗಾಲದಲ್ಲೂ ಬಿರು ಬಿಸಿಲು ಸುಡುತ್ತಿದೆ. ಮಳೆಯನ್ನೇ ನೆಚ್ಚಿಕೊಂಡು ಬೆಳೆಯನ್ನು ಬಿತ್ತನೆ ಮಾಡಿದವರು ಈಗ ಆಕಾಶದತ್ತ ನೋಡುವಂತಾಗಿದೆ. ಬರದ ನಡುವೆಯೂ ಮೆಕ್ಕೆಜೋಳ ಬಿತ್ತನೆ ಮಾಡಿದವರು ಈಗ ಮಳೆ ಇಲ್ಲದೆ ಕಂಗಾಲಾಗಿದ್ದಾರೆ. ಸದ್ಯ ಭತ್ತಕ್ಕೆ ಅಷ್ಟಾಗಿ ಮಳೆ ಕೊರತೆ ಕಾಡದೆ ಇದ್ದರೂ, ಹಲವಡೆ ಸರಿಯಾಗಿ ಮಳೆ ಇಲ್ಲದೆ ಬೆಳೆ ಬಾಡುತ್ತಿದೆ. ಇದೇ ರೀತಿ ವಾತಾವರಣ ಮುಂದುವರೆದರೆ ಮುಂದೆ ಭತ್ತಕ್ಕೂ ಸಂಕಷ್ಟ ತಪ್ಪಿದ್ದಲ್ಲ.

ವಾಡಿಕೆಗಿಂತ ಕಡಿಮೆ ಮಳೆ: ಕೃಷಿ ಇಲಾಖೆ ಮಾಹಿತಿಯಂತೆ ಜುಲೈನಲ್ಲಿ ಶೇ.32 ಹಾಗೂ ಆಗಸ್ಟ್‌ನಲ್ಲಿ ಶೇ.46ರಷ್ಟು ಮಳೆ ಕೊರತೆಯಾಗಿದೆ. ಪ್ರಸಕ್ತ ಸಾಲಿನಲ್ಲಿ ಒಟ್ಟು 1,13,458 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಬರಗಾಲದಲ್ಲೂ 98,130 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. 31660 ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ, 63885 ಹೆಕ್ಟೇರ್‌ನಲ್ಲಿ ಭತ್ತ, 1691 ಹೆಕ್ಟೇರ್‌ನಲ್ಲಿ ರಾಗಿ ಬಿತ್ತನೆಯಾಗಿದೆ.

ಕಾಯಿ ಕಟ್ಟುವ ಹಂತದಲ್ಲಿರುವ ಮೆಕ್ಕೆಜೊಳ ಬೆಳೆಗಳಿಗೆ ಮಳೆಯ ಅವಶ್ಯಕತೆ ತುಂಬಾ ಇದೆ. ಮಳೆ ಇಲ್ಲದ ಕಾರಣಕ್ಕೆ ಬೆಳೆದು ನಿಂತ ಮೆಕ್ಕೆಜೋಳ, ಬೆಳೆ ಸೂರ್ಯನ ಪ್ರಖರತೆಗೆ ಬಾಡುತ್ತಿವೆ. ಬೆಳೆಗಳಿಗೆ ಸಮೀಪದ ಹಳ್ಳಗಳಿಂದ ನೀರು ಹಾಯಿಸಲು ರೈತರು ಹರಸಾಹಸ ಪಡುತ್ತಿದ್ದಾರೆ. ಕೆಲವೆಡೆ ಕೊಳವೆ ಬಾವಿಗಳ ಮೊರೆ ಹೋಗಿದ್ದಾರೆ. ಕೊಳವೆಬಾವಿಯಲ್ಲೂ ನೀರಿನ ಪ್ರಮಾಣ ಕಡಿಮೆಯಾಗಿರುವುದು ರೈತರನ್ನು ಚಿಂತೆಗೀಡುಮಾಡಿದೆ.

ತಿಂಗಳಾದರೂ ಮಳೆ ಬಾರದ ಕಾರಣ ತಾಲೂಕಿನ ಬಹುತೇಕ ಕಡೆಗಳಲ್ಲಿ ಬಿತ್ತನೆ ಮಾಡಿದ್ದ ಜೋಳ, ಭತ್ತೆ ಸೇರಿದಂತೆ ಇತರೆ ಬೆಳೆಗಳು ಒಣಗಲಾರಂಭಿಸಿವೆ.

ಮೇ ಆರಂಭದಲ್ಲಿ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಜೋರು ಮಳೆಯಾದ ಪರಿಣಾಮ ಜಮೀನು ಹದ ಮಾಡಿಕೊಂಡಿದ್ದ ರೈತರು ಜೂನ್‌ ಹಾಗೂ ಜುಲೈ ನಂತರದಲ್ಲಿ ಬಿದ್ದ ಮಳೆಯಿಂದ ವಿವಿಧ ಬೆಳೆಗಳ ಬಿತ್ತನೆ ಮಾಡಿದ್ದಾರೆ. ಆದರೆ, ಈಗ ತಿಂಗಳಾದರೂ ಮಳೆಯಾಗುವ ಲಕ್ಷ ಣಗಳು ಕಾಣುತ್ತಿಲ್ಲ. ಬಿಸಿಲ ಝಳ ದಿನೇ ದಿನೇ ಹೆಚ್ಚಾಗುತ್ತಿದ್ದು, ಬಿಸಿಲ ಹೊತ್ತಿನಲ್ಲಿ ಪೈರುಗಳು ಬಾಡಿ ನಿಲ್ಲುವ ಕಾರಣ ಜಮೀನಿನ ಕಡೆ ಹೋಗಲು ರೈತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಟ್ರ್ಯಾಕ್ಟರ್‌ನ ಉಳುಮೆ, ರಾಸಾಯಿನಿಕ ಗೊಬ್ಬರ, ದುಬಾರಿ ಕೂಲಿಯಾಳು, ದುಪ್ಪಟ್ಟು ಹಣ ಕೊಟ್ಟು ಖಾಸಗಿ ಮಾರಾಟಗಾರರಿಂದ ಖರೀದಿಸಿದ ಬಿತ್ತನೆ ಬೀಜ ಎಲ್ಲದಕ್ಕೂ ಸಾವಿರಾರು ರೂಪಾಯಿ ಖರ್ಚಾಗಿದೆ. ಕೃಷಿ ಲಾಭದಾಯಕವಲ್ಲ ಎಂಬುದು ತಿಳಿದಿದ್ದರೂ ಜೀವನೋಪಾಯಕ್ಕೆ ಬದಲಿ ವ್ಯವಸ್ಥೆಗಳಿಲ್ಲದ ಕಾರಣ, ಇನ್ನೂ ಕೆಲವರು ಜಾನುವಾರುಗಳ ಮೇವಿಗೆ ಅನುಕೂಲ ಆಗುತ್ತದೆ ಎಂಬ ಕಾರಣಕ್ಕೆ ಬಿತ್ತನೆ ಮಾಡಿದ್ದಾರೆ. ಈಗ ಮಳೆಯಿಲ್ಲದೇ ಬಹುತೇಕ ಎಲ್ಲಾ ಬೆಳೆಗಳು ಒಣಗುತ್ತಿದ್ದು, ನಾವು ಸಾಲಗಾರರಾಗುವಂತಾಯಿತು ಎಂದು ರೈತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಜಲಾಶಯಗಳಲ್ಲೂ ನೀರಿನ ಕೊರತೆ

ಜುಲೈ ಹಾಗೂ ಆಗಸ್ಟ್‌ನಲ್ಲಿ ಸುರಿದ ಮಳೆ, ಬರದ ನಡುವೆಯೂ ಜಲಾಶಯಗಳಿಗೆ ಕೊಂಚ ಮಟ್ಟಿನ ಜೀವ ಕಳೆ ತುಂಬಿತ್ತು. ಆಗಸ್ಟ್‌ ಎರಡನೇ ವಾರದ ಬಳಿಕ ಮಳೆ ಕಣ್ಮರೆಯಾಗಿದ್ದು, ಬಿಸಿಲ ಶಾಖಕ್ಕೆ ಜಿಲ್ಲೆಯ ಜಲಾಶಯಗಳಲ್ಲೂ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಈ ಬಾರಿ ತುಂಗಾ ಜಲಾಶಯ ಮಾತ್ರ ಭರ್ತಿಯಾಗಿದ್ದು ಬಿಟ್ಟರೆ ಇನ್ಯಾವ ಜಲಾಶಯಗಳು ಭರ್ತಿಯಾಗಿಲ್ಲ.

ಆತಂಕದ ಸಂಗತಿ ಎಂದರೆ ಜಿಲ್ಲೆಯ ಪ್ರಮುಖ ಜಲಾಶಯಗಳಾಗಿರುವ ಭದ್ರಾ ಹಾಗೂ ಲಿಂಗನಮಕ್ಕಿ ಜಲಾಶಯಗಳಲ್ಲಿ ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಸಾಕಷ್ಟು ನೀರಿನ ಪ್ರಮಾಣದಲ್ಲಿ ಕಡಿಮೆಯಾಗಿದೆ.

ಕಳೆದ ಬಾರಿ ಈ ಅವಧಿಯಲ್ಲಿ ಭರ್ತಿಯಾಗಿದ್ದ 186 ಅಡಿ ನೀರಿನ ಸಾಮರ್ಥ್ಯ ಹೊಂದಿರುವ ಭದ್ರಾ ಜಲಾಶಯದಲ್ಲಿ ಈ ಬಾರಿ 177 ಅಡಿಯಷ್ಟು ಮಾತ್ರ ನೀರಿದೆ. ಭದ್ರಾ ಜಲನಯನ ಪ್ರದೇಶದಲ್ಲಿ ಮಳೆ ಕೊರತೆಯಿಂದಾಗಿ ಈ ಬಾರಿ ಜಲಾಶಯದ ಮಟ್ಟ 180 ಅಡಿಗೆ ತಲುಪಿಲ್ಲ. ಈ ನಡುವೆ ಭದ್ರಾ ಮೇಲ್ದಂಡೆ ಯೋಜನೆ ಮೂಲಕ ಚಿತ್ರದುರ್ಗಕ್ಕೆ ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಹರಿಸಲಾಗುತ್ತಿದೆ. ಜೊತೆಗೆ ಭದ್ರಾ ಅಚ್ಚುಕಟ್ಟು ಪ್ರದೇಶದ ಜನ- ಜಾನುವಾರುಗಳ ಕುಡಿಯುವ ನೀರಿಗಾಗಿ ನಾಲೆಗಳಿಗೆ ನೀರು ಹರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮಳೆ ಬಾರದಿದ್ದರೆ ನೀರಿನ ಅಭಾವ ತಪ್ಪಿದ್ದಲ್ಲ.

ಇನ್ನೂ ರಾಜ್ಯದ ಪ್ರಮುಖ ಜಲಾಶಯವಾದ ಲಿಂಗನಮಕ್ಕಿಯ ನೀರಿನ ಮಟ್ಟ ಸಂಪೂರ್ಣವಾಗಿ ಕುಸಿದಿದೆ. 1819 ಅಡಿ ನೀರಿನ ಮಟ್ಟ ಹೊಂದಿರುವ ಲಿಂಗನಮಕ್ಕಿ ಜಲಾಶಯದ ಮಟ್ಟ 1795 ಅಡಿಯಷ್ಟಿದೆ. 151 ಟಿಎಂಸಿ ಸಾಮರ್ಥ್ಯ ಹೊಂದಿರುವ ಲಿಂಗನಮಕ್ಕಿ ಜಲಾಶಯದಲ್ಲಿ ಈವರೆಗೆ 86 ಟಿಎಂಸಿ (ಶೇ.56.72) ಯಷ್ಟು ಮಾತ್ರ ನೀರಿನ ಸಂಗ್ರಹವಿದೆ. ಕಳೆದ ಬಾರಿ ಈ ಅವಧಿಯಲ್ಲಿ 143 ಟಿಎಂಸಿ (ಶೇ.94.58)ಯಷ್ಟು ನೀರಿನ ಸಂಗ್ರಹವಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರ ಆರೋಗ್ಯ ವ್ಯವಸ್ಥೆ ಬಲಪಡಿಸಲಿ: ಡಾ. ಗಂಗಾಧರ್‌
ಜ್ಞಾನವನ್ನು ಸಮಾಜದ ಒಳಿತಿಗೆ ಬಳಸಿ: ಡಾ. ಉಮಾ