ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಬದುಕಿನ ಅವಧಿಯಲ್ಲೇ ಪ್ರಾಯೋಗಿಕ ಜ್ಞಾನಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಕೇವಲ ಪಠ್ಯಪುಸ್ತಕದ ಜ್ಞಾನಕ್ಕೆ ಸೀಮಿತವಾಗದೆ, ಕಲಿತ ವಿಷಯಗಳನ್ನು ನೈಜ ಬದುಕಿನಲ್ಲಿ ಅಳವಡಿಸಿಕೊಂಡು ಸಮಾಜಕ್ಕೆ ಉಪಯುಕ್ತವಾಗುವಂತಹ ಹೊಸ ಆವಿಷ್ಕಾರಗಳು ಮತ್ತು ಪರಿಹಾರಗಳನ್ನು ರೂಪಿಸುವ ಅಗತ್ಯವಿದೆ.
ಕನ್ನಡಪ್ರಭವಾರ್ತೆ, ಹಾಸನ
ನಗರದ ಕುವೆಂಪು ರಸ್ತೆ ಬಳಿ ಇರುವ ಹಾಸನ ಜಿಲ್ಲಾ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಇಂಜಿನಿಯರ್ ಮತ್ತು ಶಿಕ್ಷಕರ ದಿನಾಚರಣೆ ಅಂಗವಾಗಿ ಎಂಸಿಇ ಕಾಲೇಜಿನ ಪ್ರೊಫೆಸರ್ ಡಾ. ಉಮಾ, ಬೇಲೂರು ತಾಲೂಕು ಗಬ್ಬಲಗೋಡು ಸರಕಾರಿ ಫ್ರೌಡಶಾಲೆ ಶಿಕ್ಷಕಿ ಎಂ.ಇ. ಗೀತಾ, ಹಳೇಬಿಡು ಸರ್ಕಾರಿ ಶಾಲೆ ಶಿಕ್ಷಕಿ ಎನ್. ನೇತ್ರಾವತಿ ಅವರ ಸೇವೆ ಪರಿಗಣಿಸಿ ಲಯನ್ಸ್ ಕ್ಲಬ್ ಅಧ್ಯಕ್ಷ ವೆಂಕಟೇಶ್ ಜವರಪ್ಪ ಅಧ್ಯಕ್ಷತೆಯಲ್ಲಿ ಸನ್ಮಾನಿಸಲಾಯಿತು.ನಂತರ ಎಂಸಿಇ ಕಾಲೇಜು ಪ್ರೊಫೆಸರ್ ಡಾ. ಉಮಾ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಬದುಕಿನ ಅವಧಿಯಲ್ಲೇ ಪ್ರಾಯೋಗಿಕ ಜ್ಞಾನಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಕೇವಲ ಪಠ್ಯಪುಸ್ತಕದ ಜ್ಞಾನಕ್ಕೆ ಸೀಮಿತವಾಗದೆ, ಕಲಿತ ವಿಷಯಗಳನ್ನು ನೈಜ ಬದುಕಿನಲ್ಲಿ ಅಳವಡಿಸಿಕೊಂಡು ಸಮಾಜಕ್ಕೆ ಉಪಯುಕ್ತವಾಗುವಂತಹ ಹೊಸ ಆವಿಷ್ಕಾರಗಳು ಮತ್ತು ಪರಿಹಾರಗಳನ್ನು ರೂಪಿಸುವ ಅಗತ್ಯವಿದೆ ಎಂದು ಹೇಳಿದರು.
ಇಂದಿನ ಜಗತ್ತಿನಲ್ಲಿ ತಂತ್ರಜ್ಞಾನ ಅತ್ಯಂತ ವೇಗವಾಗಿ ಅಭಿವೃದ್ಧಿಯಾಗುತ್ತಿದೆ. ಕೃತಕ ಬುದ್ಧಿಮತ್ತೆ, ರೋಬೋಟಿಕ್ಸ್, ಎಂಬೆಡೆಡ್ ವ್ಯವಸ್ಥೆಗಳು ಸೇರಿದಂತೆ ಹಲವು ಹೊಸ ತಂತ್ರಜ್ಞಾನಗಳು ವಿವಿಧ ಕ್ಷೇತ್ರಗಳಲ್ಲಿ ಮಹತ್ವದ ಬದಲಾವಣೆಗಳನ್ನು ತರುತ್ತಿವೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಾಂತ್ರಿಕ ಜ್ಞಾನವನ್ನು ಆಳವಾಗಿ ಪಡೆದುಕೊಳ್ಳುವುದರ ಜೊತೆಗೆ ಅದರ ಸಾಮಾಜಿಕ ಪರಿಣಾಮಗಳನ್ನು ಅರ್ಥಮಾಡಿಕೊಳ್ಳಬೇಕು. ತಂತ್ರಜ್ಞಾನವನ್ನು ಜನರ ಬದುಕನ್ನು ಸುಲಭಗೊಳಿಸಲು ಹಾಗೂ ಸಮಾಜದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಬಳಸಬೇಕು ಎಂದು ಹೇಳಿದರು.ಒಬ್ಬ ವಿದ್ಯಾರ್ಥಿ ತನ್ನ ಜ್ಞಾನವನ್ನು ತನ್ನ ವೈಯಕ್ತಿಕ ಬೆಳವಣಿಗೆಗೆ ಮಾತ್ರ ಬಳಸಿಕೊಳ್ಳದೆ, ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಿದಾಗ ಶಿಕ್ಷಣದ ನಿಜವಾದ ಉದ್ದೇಶ ಸಾರ್ಥಕವಾಗುತ್ತದೆ. ವಿದ್ಯಾರ್ಥಿಗಳಿಗೆ ಪ್ರಯೋಗ ಮಾಡಲು, ತಪ್ಪುಗಳಿಂದ ಕಲಿಯಲು ಮತ್ತು ಹೊಸ ಆಲೋಚನೆಗಳನ್ನು ರೂಪಿಸಲು ಅವಕಾಶ ನೀಡಿದಾಗ ಮಾತ್ರ ಅವರು ಭವಿಷ್ಯದ ಸವಾಲುಗಳನ್ನು ಎದುರಿಸಲು ಸಜ್ಜಾಗುತ್ತಾರೆ ಎಂದರು.
ನಂತರ ಬೇಲೂರು ತಾಲೂಕು ಗಬ್ಬಲಗೋಡು ಸರಕಾರಿ ಫ್ರೌಡಶಾಲೆ ಶಿಕ್ಷಕಿ ಎಂ.ಇ. ಗೀತಾ, ಹಳೇಬಿಡು ಸರಕಾರಿ ಶಾಲೆ ಶಿಕ್ಷಕಿ ಎನ್. ನೇತ್ರಾವತಿ ಉದ್ದೇಶಿಸಿ ಮಾತನಾಡಿ, ಶಿಕ್ಷಕರಿಗೆ ಸಮಯ ಪ್ರಜ್ಞೆ ಎಂಬುದು ಬಹಳ ಮುಖ್ಯ. ಮಕ್ಕಳನ್ನ ಸಮಾಜದಲ್ಲಿ ಉತ್ತಮ ಪ್ರಜೆಯನ್ನಾಗಿ ಮಾಡುವ ಪಾತ್ರದಲ್ಲಿ ಶಿಕ್ಷಕರ ಪಾತ್ರವು ಕೂಡ ಅಡಗಿದೆ ಎಂದರು.ಕಾರ್ಯಕ್ರಮದಲ್ಲಿ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸಿದ ಮತ್ತು ಶಿಕ್ಷಕರಾಗಿ ಕೆಲಸ ಮಾಡಿದವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ಅತಿಥ್ಯವನ್ನು ವಲಯ ಅಧ್ಯಕ್ಷ ಎಚ್. ರಮೇಶ್, ಬಿ.ವಿ. ನಟೇಶ್ ಕುಮಾರ್, ನರಸಿಂಹೇಗೌಡ, ಎಂ.ಬಿ. ಮಂಜುನಾಥ್ ವಹಿಸಿದ್ದರು.
ಈ ವೇಳೆ ಲಯನ್ಸ್ ಕ್ಲಬ್ ಅಧ್ಯಕ್ಷ ವೆಂಕಟೇಶ್ ಜವರಪ್ಪ, ಕಾರ್ಯದರ್ಶಿ ಸಿ.ಬಿ. ನಾಗರಾಜು, ಖಜಾಂಚಿ ಐ.ಜಿ. ರಮೇಶ್, ಮಾಜಿ ಅಧ್ಯಕ್ಷ ಎಚ್. ರಮೇಶ್, ಪ್ರಾಂತೀಯ ಅಧ್ಯಕ್ಷ ಎಚ್.ಕೆ. ನಾಗೇಶ್, ಮಾಜಿ ರಾಜ್ಯಪಾಲ ಬಿ.ವಿ. ಹೆಗ್ಗಡೆ, ಜಿಲ್ಲಾ ಮುಖ್ಯ ಸಂಯೋಜಕ ಎಚ್.ಆರ್. ಚಂದ್ರೇಗೌಡ, ಸೆಕೆಂಡ್ ಸೆಂಚೂರಿ ಅಂಬಾಸಿಡರ್ ಕೆ.ಆರ್. ಮಲ್ಲೇಶ್ ಗೌಡ ಸೇರಿ ಲಿಯೋ ಕ್ಲಬ್ ಅಧ್ಯಕ್ಷ, ಕಾರ್ಯದರ್ಶಿ, ಖಜಾಂಚಿ ಹಾಗೂ ಲಯನ್ಸ್ ಕ್ಲಬ್ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.