ಜನರಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸುವುದರ ಜತೆಗೆ ಅಗತ್ಯ ಆರೋಗ್ಯ ಸೌಲಭ್ಯ ಸರ್ಕಾರ ಒದಗಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕ ಆಸ್ಪತ್ರೆ ಸ್ಥಾಪಿಸಿ, ಅಗತ್ಯ ವೈದ್ಯರು, ಶುಶ್ರೂಷಕರು, ತಪಾಸಣಾ ಉಪಕರಣ ಒದಗಿಸಬೇಕು. ಗುತ್ತಿಗೆ ಆಧಾರದ ಬದಲು ಕಾಯಂ ವೈದ್ಯ ಸಿಬ್ಬಂದಿ ನೇಮಿಸಬೇಕು. ಮಕ್ಕಳು, ಗರ್ಭಿಣಿಯರಿಗೆ ಪೌಷ್ಟಿಕಾಂಶ ದೊರೆಯುವಂತೆ ಸರ್ಕಾರ ನಿಗಾ ವಹಿಸಬೇಕು ಎಂದು ಅವರು ಹೇಳಿದರು.

ಕನ್ನಡಪ್ರಭವಾರ್ತೆ, ಹಾಸನ

ಸ್ವಾತಂತ್ರ್ಯ ದೊರೆತು ಎಂಟು ದಶಕ ಕಳೆದರೂ ಗ್ರಾಮೀಣ ಪ್ರದೇಶಗಳ ಜನರಿಗೆ ಅಗತ್ಯ ಆರೋಗ್ಯ ಸೌಲಭ್ಯ ದೊರೆತಿಲ್ಲ. ಪ್ರತಿ ಗ್ರಾಮಕ್ಕೂ ಆರೋಗ್ಯ ಸೇವೆ ತಲುಪಿಸುವ ನಿಟ್ಟಿನಲ್ಲಿ ಸರ್ಕಾರ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಬಲಪಡಿಸಬೇಕು ಎಂದು ಮೆಡಿಕಲ್ ಸರ್ವಿಸ್ ಸೆಂಟರ್‌ನ ಕರ್ನಾಟಕ ರಾಜ್ಯ ಸಮಿತಿ ಉಪಾಧ್ಯಕ್ಷ ಡಾ. ಗಂಗಾಧರ್ ಆಗ್ರಹಿಸಿದರು.

ಮಹಾನ್ ಸಮಾಜ ಸುಧಾರಕ ಮಹಾತ್ಮ ಜ್ಯೋತಿಪುಲೆ ಅವರ ೨೦೦ನೇ ಜನ್ಮ ದಿನ ಅಂಗವಾಗಿ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ, ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ ಹಾಗೂ ಮೆಡಿಕಲ್ ಸರ್ವಿಸ್ ಸೆಂಟರ್ ನೇತೃತ್ವದಲ್ಲಿ ಹಾಸನ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಸಹಕಾರದೊಂದಿಗೆ ಹಾಸನ ತಾಲೂಕಿನ ಲಿಂಗ್ಲಾಪುರ, ಸಿದ್ದರಹಟ್ಟಿ ಹಾಗೂ ಬಕ್ಕಪ್ಪನಕೊಪ್ಪಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಔಷಧಿ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜನರಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸುವುದರ ಜತೆಗೆ ಅಗತ್ಯ ಆರೋಗ್ಯ ಸೌಲಭ್ಯ ಸರ್ಕಾರ ಒದಗಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕ ಆಸ್ಪತ್ರೆ ಸ್ಥಾಪಿಸಿ, ಅಗತ್ಯ ವೈದ್ಯರು, ಶುಶ್ರೂಷಕರು, ತಪಾಸಣಾ ಉಪಕರಣ ಒದಗಿಸಬೇಕು. ಗುತ್ತಿಗೆ ಆಧಾರದ ಬದಲು ಕಾಯಂ ವೈದ್ಯ ಸಿಬ್ಬಂದಿ ನೇಮಿಸಬೇಕು. ಮಕ್ಕಳು, ಗರ್ಭಿಣಿಯರಿಗೆ ಪೌಷ್ಟಿಕಾಂಶ ದೊರೆಯುವಂತೆ ಸರ್ಕಾರ ನಿಗಾ ವಹಿಸಬೇಕು ಎಂದು ಅವರು ಹೇಳಿದರು.

ಹಾಸನ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನ ಡಾ. ಅಕ್ಷಯ್ ಕುಮಾರ್ ಮಾತನಾಡಿ, ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಶಿಬಿರದಲ್ಲಿ ಭಾಗವಹಿಸಿರುವುದು ಸಂತಸದ ಸಂಗತಿ. ಮಕ್ಕಳನ್ನು ಅಶುದ್ಧ ನೀರು ಹಾಗೂ ಅನಾರೋಗ್ಯಕರ ತ್ವರಿತ ಆಹಾರದಿಂದ ದೂರವಿಡಬೇಕು. ಯುವಕರು ಮಾದಕವಸ್ತು, ಸಿಗರೇಟ್ ಸೇರಿ ವಿವಿಧ ದುಶ್ಚಟಗಳಿಂದ ದೂರವಿರಬೇಕೆಂದು ಸಲಹೆ ನೀಡಿದರು.

ನೇತ್ರ ಚಿಕಿತ್ಸಾ ತಜ್ಞ ಡಾ. ವಸುಧೇಂದ್ರ ಅವರು ಕಣ್ಣಿನ ಆರೋಗ್ಯ ಹಾಗೂ ನಿಯಮಿತ ತಪಾಸಣೆ ಅಗತ್ಯದ ಕುರಿತು ಮಾಹಿತಿ ನೀಡಿದರು. ಸ್ತ್ರೀರೋಗ ತಜ್ಞೆ ಡಾ. ಯಶ್ವಿತಾ ಅವರು ಮಹಿಳೆಯರು ಹಾಗೂ ಹೆಣ್ಣುಮಕ್ಕಳು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾದ ಅಗತ್ಯ ವಿವರಿಸಿದರು.

ಅಧ್ಯಕ್ಷತೆ ಎ.ಐ.ಡಿ.ಎಸ್.ಓ. ರಾಜ್ಯ ಖಜಾಂಚಿ ಸುಭಾಷ್ ಬೆಟ್ಟದಕೊಪ್ಪ ವಹಿಸಿದ್ದರು. ರಾಜ್ಯ ಖಜಾಂಚಿ ಡಾ. ರಾಜಶೇಖರ್, ರಾಜ್ಯ ಕಾರ್ಯದರ್ಶಿ ಡಾ. ವಸುಧೇಂದ್ರ ಉಪಸ್ಥಿತರಿದ್ದರು. ಹಾಸನ ವೈದ್ಯಕೀಯ ಕಾಲೇಜಿನ ಡಾ. ಪ್ರಜ್ವಲ್, ಡಾ. ಅರಾನ್ ಹಾಗೂ ಡಾ. ಉದಯ್, ನೇತ್ರ ಚಿಕಿತ್ಸಾ ವಿಭಾಗದಿಂದ ಡಾ. ವಿಭಾ, ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದಿಂದ ಡಾ. ಯಶ್ವಿತಾ, ಡಾ. ಶಶಾಂಕ್ ಕೆ. ಹಾಗೂ ಡಾ. ಸಂಜಯ್, ಮಕ್ಕಳ ವಿಭಾಗದಿಂದ ಡಾ. ಪೂಜಾ ಹಾಗೂ ಡಾ. ಪ್ರಿಯಾಲ್ ಶಿಬಿರದಲ್ಲಿ ಭಾಗವಹಿಸಿದ್ದರು. ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ಸದಸ್ಯ ಗಿರೀಶ್, ಅಪ್ಪು, ಶಶಿಕುಮಾರ್, ದೇವರಾಜ್, ಎಐಡಿಎಸ್‌ಓ ಜಿಲ್ಲಾ ಅಧ್ಯಕ್ಷೆ ಚೈತ್ರಾ, ಜಿಲ್ಲಾ ಕಾರ್ಯದರ್ಶಿ ಸುಷ್ಮಾ, ಉಪಾಧ್ಯಕ್ಷ ಅಭಿಷೇಕ್, ಪದಾಧಿಕಾರಿಗಳಾದ ಪುರುಷೋತ್ತಮ್, ಧನು, ಶ್ರೇಷ್ಠ, ಶಿವು, ಪ್ರಾರ್ಥನಾ ಭಾಗವಹಿಸಿದ್ದರು.