ಮಳೆಗೆ ಉರುಳಿ ಬಿದ್ದ ಮರಗಳು: ಗುಂಡಿ ಬಿದ್ದ ರಸ್ತೆ

KannadaprabhaNewsNetwork |  
Published : Nov 08, 2023, 01:00 AM IST
ದೊಡ್ಡಬಳ್ಳಾಪುರದಲ್ಲಿ ಉರುಳಿ ಬಿದ್ದಿರುವ ಮರ. | Kannada Prabha

ಸಾರಾಂಶ

ದೊಡ್ಡಬಳ್ಳಾಪುರ: ಕಳೆದ 2 ದಿನಗಳಿಂದ ಸುರಿದ ಭಾರಿ ಮಳೆ ದೊಡ್ಡಬಳ್ಳಾಪುರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಬರದ ನಡುವೆ ಜೀವಸೆಲೆಯ ನಿರೀಕ್ಷೆಯನ್ನು ಹೆಚ್ಚಿಸಿದೆ.

ದೊಡ್ಡಬಳ್ಳಾಪುರ: ಕಳೆದ 2 ದಿನಗಳಿಂದ ಸುರಿದ ಭಾರಿ ಮಳೆ ದೊಡ್ಡಬಳ್ಳಾಪುರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಬರದ ನಡುವೆ ಜೀವಸೆಲೆಯ ನಿರೀಕ್ಷೆಯನ್ನು ಹೆಚ್ಚಿಸಿದೆ.

ಕಳೆದ ಒಂವರೆ ತಿಂಗಳಿನ ನಂತರ ನಗರ ಸೇರಿದಂತೆ ತಾಲೂಕಿನ ವಿವಿಧೆಡೆ ಸಾಧಾರಣ ಮಳೆಯಾಗಿದೆ. ಬಿಸಿಲಿನ ತಾಪದಿಂದ ಬೆಂದಿದ್ದ ಭೂಮಿಗೆ ಮಳೆರಾಯ ತಂಪೆರೆದಿದ್ದು ರೈತಾಪಿ ವರ್ಗದ ಮುಖದಲ್ಲಿ ಮಂದಹಾಸ ಬೀರಿದರೆ, ಮತ್ತೊಂದೆಡೆ ಜಾನುವಾರುಗಳಿಗೆ ಮೇವನ್ನು ಸಂಗ್ರಹಿಸಿಕೊಳ್ಳುವ ಆತಂಕ ಮನೆಮಾಡಿದೆ. ವಿದ್ಯುತ್ ಲೋಡ್‌ ಶೆಡ್ಡಿಂಗ್‌ನಿಂದ ರೈತರು ಎದುರಿಸುತ್ತಿದ್ದ ಸಮಸ್ಯೆಗೆ ಸ್ವಲ್ಪ ಪರಿಹಾರ ಸಿಕ್ಕಂತಾಗಿದೆ.

ಈ ಬಾರಿ ಮುಂಗಾರು ಮಳೆಯು ನಿರೀಕ್ಷಿತ ಮಟ್ಟದಲ್ಲಿ ಬಾರದ ಕಾರಣ ರೈತರು ತಮ್ಮ ಜಮೀನಿನಲ್ಲಿ ಬಿತ್ತಿದ್ದ ಬೆಳೆ ನಿರೀಕ್ಷಿತ ಮಟ್ಟದಲ್ಲಿ ಕೈಸೇರಲಿಲ್ಲ. ಕಳೆದ ಒಂದೂವರೆ ತಿಂಗಳಿನಿಂದಲೂ ಮಳೆಯಾಗದ ಕಾರಣ ರೈತರು ಜಮೀನಿನಲ್ಲಿ ಬೆಳೆದಿದ್ದ ಮುಸುಕಿನ ಜೋಳ, ರಾಗಿ, ನೆಲಗಡಲೆ, ತೊಗರಿ ಸೇರಿದಂತೆ ಇತರ ಬೆಳೆಗಳು ಬಾಡಿ ಹೋಗಿದ್ದು. ಜಾನುವಾರುಗಳ ಮೇವಿಗೂ ಸಂಕಷ್ಟ ಎದುರಾಗಿತ್ತು,

ಆದರೆ ಸೋಮವಾರ ಬಿದ್ದ ಉತ್ತಮ ಮಳೆಯಿಂದಾಗಿ ಜಮೀನಿನಲ್ಲಿನ ತೊಗರಿ, ಅವರೆ, ಅಲಸಂದೆ ಸೇರಿದಂತೆ ಇತರ ಬೆಳೆಗಳಾದರೂ ಕೈ ಸೇರಲಿವೆ ಎಂಬ ಆತ್ಮವಿಶ್ವಾಸ ರೈತರಲ್ಲಿ ಮೂಡಿದೆ. ನಿನ್ನೆ ಸಂಜೆಯಿಂದ ಇಡೀ ರಾತ್ರಿ ಸುರಿದ ಮಳೆಯಿಂದ ಜಲ ಮೂಲಗಳಿಗೆ ನೀರು ಹರಿಯುವ ನಿರೀಕ್ಷೆಯಿದೆ.

ಧರೆಗುರುಳಿದ ಮರಗಳು:

ದೊಡ್ಡಬಳ್ಳಾಪುರ ನಗರದ ಕೈಗಾರಿಕಾ ಪ್ರದೇಶ, ಚಿಕ್ಕಬಳ್ಳಾಪುರ ರಸ್ತೆ ಸೇರಿದಂತೆ ವಿವಿದೆಡೆ ಮರಗಳು ರಸ್ತೆಗೆ ಉರುಳಿ ಬಿದ್ದ ಘಟನೆಗಳು ನಡೆದಿವೆ. ನಿಯಮಿತ ಕಾಲಾವಧಿಯಲ್ಲಿ ಮರಗಳನ್ನು ತೆರವು ಮಾಡಿ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಯಿತು.

ರಸ್ತೆಯಲ್ಲಿ ಗುಂಡಿ: ಪ್ರತಿಭಟನೆ

ಮಳೆಯಿಂದಾಗಿ ನಗರದ ಬಹುತೇಕ ಕಡೆಗಳಲ್ಲಿ ಒಳ ಚರಂಡಿ ತುಂಬಿ ರಸ್ತೆಗಳಲ್ಲಿ ಹರಿದು ಮನೆಗಳಿಗೂ ನೀರು ನುಗ್ಗಿವೆ. ನಗರದ ಡಾ.ಬಿ.ಆರ್. ಅಂಬೇಡ್ಕರ್ ನಡುರಸ್ತೆಯಲ್ಲಿ ಮೂರಡಿ ಆಳದ ಗುಂಡಿ ಬಿದ್ದಿದ್ದು ರಸ್ತೆ ದುರಸ್ತಿ ಮಾಡುವಂತೆ ಕರ್ನಾಟಕ ರಕ್ಷಣಾ ವೇದಿಕೆಯ ಕನ್ನಡಿಗರ ಬಣದ ಚಂದ್ರಶೇಖರ್ ಅವರು ಗುಂಡಿಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. ಇನ್ನೂ ಗ್ರಾಮೀಣ ಭಾಗದ ಅನೇಕ ಕಡೆಗಳಲ್ಲಿ ಚರಂಡಿ ನೀರು ಸರಾಗವಾಗಿ ಹರಿಯದೆ ಮನೆಗಳಿಗೆ ನುಗ್ಗಿ ಹಾನಿಯಾಗಿರುವ ಸಾಕಷ್ಟು ದೂರುಗಳು ಬಂದಿವೆ. 7ಕೆಡಿಬಿಪಿ1- ದೊಡ್ಡಬಳ್ಳಾಪುರದಲ್ಲಿ ಉರುಳಿ ಬಿದ್ದಿರುವ ಮರ.

7ಕೆಡಿಬಿಪಿ2- ರಸ್ತೆ ಮಧ್ಯೆ ಬಿದ್ದಿರುವ ಗುಂಡಿ ಸರಿಪಡಿಸುವಂತೆ ಒತ್ತಾಯಿಸಿ ಪ್ರತಿಭಟನೆ.

7ಕೆಡಿಬಿಪಿ3- ರಸ್ತೆಗೆ ಉರುಳಿ ಬಿದ್ದ ಮರ.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ