ರೈತರ ಮೊರೆ ಕೇಳಿದ ವರುಣ: ನಗರದಾದ್ಯಂತ ಮಳೆ

KannadaprabhaNewsNetwork |  
Published : Jul 06, 2026, 02:15 AM IST
ಮಳೆ | Kannada Prabha

ಸಾರಾಂಶ

ಕಳೆದೆರಡು ದಿನಗಳಿಂದ ನಗರ ಸೇರಿದಂತೆ ಜಿಲ್ಲಾದ್ಯಂತ ಮುಂಗಾರು ಚುರುಕುಗೊಂಡಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಹುಬ್ಬಳ್ಳಿ: ಮುಂಗಾರು ಬಿತ್ತನೆ ನಂತರದಲ್ಲಿ ಮಳೆರಾಯನ ಅವಕೃಪೆಯಿಂದ ನಿರೀಕ್ಷಿತ ಮಟ್ಟದಲ್ಲಿ ಮಳೆ ಸುರಿಯದ ಪರಿಣಾಮ ರೈತಾಪಿ ತೀವ್ರ ಆತಂಕಗೊಂಡು ಮಳೆಗಾಗಿ ಪ್ರಾರ್ಥನೆ, ಪೂಜೆ ಮೊರೆ ಹೋಗಿದ್ದರು. ಇದರ ಬೆನ್ನಲ್ಲೇ ಕಳೆದೆರಡು ದಿನಗಳಿಂದ ನಗರ ಸೇರಿದಂತೆ ಜಿಲ್ಲಾದ್ಯಂತ ಮುಂಗಾರು ಚುರುಕುಗೊಂಡಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಜೂನ್‌ನಲ್ಲಿಯೇ ಮುಂಗಾರು ಮಳೆ ಆರಂಭವಾಗಬೇಕಿತ್ತು. ಆದರೆ, ಹವಾಮಾನ ವೈಪರೀತ್ಯದಿಂದ ಮಳೆಯಾಗದೇ ರೈತರಲ್ಲಿ ಸಂಕಷ್ಟಕ್ಕೆ ಕಾರಣವಾಗಿತ್ತು. ಮೇ ಕೊನೆ ವಾರ ಮತ್ತು ಜೂನ್‌ ಮೊದಲ ವಾರದಲ್ಲಿ ಬಿತ್ತನೆಗೆ ಪೂರಕವಾಗಿ ಮಳೆಯಾದ ಹಿನ್ನೆಲೆಯಲ್ಲಿ ರೈತರು ಅತ್ಯಂತ ಹುರುಪಿನಿಂದ ಬಿತ್ತನೆ ಮಾಡಿದ್ದರು. ಇದಾದ ಬಳಿಕ ಮಳೆ ಸುರಿಯದ ಪರಿಣಾಮ ಬೆಳೆಹಾನಿ ಆಗುವ ಭೀತಿ ಎದುರಿಸುತ್ತಿದ್ದರು. ಇದರಿಂದ ಕಂಗಾಲಾದ ರೈತರು ಮಳೆರಾಯನ ಕೃಪೆಗೆ ಕತ್ತೆ ಮದುವೆ, ಕಪ್ಪೆ ಮದುವೆಯಂತಹ ಸಾಂಪ್ರದಾಯಿಕ ಪೂಜೆಗಳಿಗೆ ಮೊರೆ ಹೋಗಿದ್ದರು. ಇದೀಗ ನಿರೀಕ್ಷೆಯಂತೆ ಮುಂಗಾರು ಮಳೆ ಚುರುಕುಗೊಂಡಿದ್ದು, ರೈತರು ನಿಟ್ಟುಸಿರು ಬಿಡುವಂತಾಗಿದೆ.

ನಗರ ಸೇರಿದಂತೆ ಸುತ್ತಲಿನ ಗ್ರಾಮೀಣ ಪ್ರದೇಶದಲ್ಲಿ ಭಾನುವಾರ ಬೆಳಗ್ಗೆಯಿಂದ ಬಿಟ್ಟುಬಿಡದೇ ಸುರಿದ ಜಿಟಿ-ಜಿಟಿ ಮಳೆಯಿಂದ ರಸ್ತೆಗಳು ಜಲಾವೃತಗೊಂಡು ಜನ-ಜೀವನ ಅಸ್ತವ್ಯಸ್ತಗೊಂಡಿತು. ಮಳೆಯಿಂದಾಗಿ ಮನೆಯಿಂದ ಆಚೆ ಬರಲು ಜನರು ಹಿಂದೇಟು ಹಾಕುವಂತಾಯಿತು. ನಿರಂತರ ಸುರಿದ ಜಿಟಿಜಿಟಿ ಮಳೆಯಿಂದ ಇಲ್ಲಿನ ದೇಸಾಯಿ ಸರ್ಕಲ್‌, ಸಂಗೊಳ್ಳಿ ರಾಯಣ್ಣ ವೃತ್ತ, ಚೆನ್ನಮ್ಮ ವೃತ್ತ, ಹೊಸೂರ ಸರ್ಕಲ್‌ ಸೇರಿದಂತೆ ಬಹುತೇಕ ಒಳ ರಸ್ತೆಗಳು ಜಲಾವೃತಗೊಂಡು ವಾಹನ ಸವಾರರು ಪರದಾಡಿದರು. ನೀರು ನಿಂತ ಹಿನ್ನೆಲೆ ರಸ್ತೆಯ ಮಧ್ಯದಲ್ಲಿರುವ ತಗ್ಗು-ಗುಂಡಿಗಳು ಕಾಣದ ಪರಿಣಾಮದಿಂದ ಬೈಕ್‌ ಸವಾರರು ತೀವ್ರ ತೊಂದರೆ ಅನುಭವಿಸಿದರು. ನಿಧಾನವಾಗಿ ಸಾಗುತ್ತಿದ್ದ ದೃಶ್ಯ ಕಂಡುಬಂದವು.

ದುರ್ಗದಬೈಲ್‌, ಶಾ ಬಜಾರ್‌, ಜನತಾ ಬಜಾರ್‌, ಗಾಂಧಿ ಮಾರ್ಕೆಟ್‌, ಬಟರ್‌ ಮಾರ್ಕೆಟ್‌ ಪ್ರದೇಶದಲ್ಲಿ ಎಂದಿಗಿಂತ ಜನಸಂದಣಿ ಕಡಿಮೆಯಿತ್ತು. ಮಳೆ ಮಧ್ಯೆಯೂ ವ್ಯಾಪಾರಿಗಳು ದೊಡ್ಡ ಕೊಡೆ, ತಾಡಪತ್ರಿ ಹಾಕಿಕೊಂಡು ವ್ಯಾಪಾರ ವಹಿವಾಟು ಮುಂದುವರಿಸಿದ್ದರು. ಆದರೆ, ಗ್ರಾಹಕರ ಸಂಖ್ಯೆ ವಿರಳವಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೊಮ್ಮಾಯಿ ಆರೋಪ ಹಸಿ ಸುಳ್ಳು, ಬಹಿರಂಗ ಕ್ಷಮೆ ಕೇಳಲಿ: ಎಚ್‌.ಕೆ. ಪಾಟೀಲ
ಹೈಟೆಕ್ ಶೌಚಾಲಯ ಅಪೂರ್ಣ