ಚಾರ್ಮಾಡಿ, ಮುಂಡಾಜೆ ಕಡೆ ಮಳೆ ಬೀಳದಿದ್ದರೂ ಭಾರಿ ಗಾಳಿ ಬೀಸಿತು. ಗಾಳಿಯ ಪರಿಣಾಮ ಚಾರ್ಮಾಡಿ ಹಾಗೂ ಮುಂಡಾಜೆಯಲ್ಲಿ ಒಟ್ಟು 3 ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ.
ಬೆಳ್ತಂಗಡಿ: ಕಳೆದ ಎರಡು ದಿನಗಳಿಂದ ಬೆಳ್ತಂಗಡಿ ತಾಲೂಕಿನೆಲ್ಲೆಡೆ ಮೋಡ ಕವಿದ ವಾತಾವರಣದೊಂದಿಗೆ ಶನಿವಾರ ಮಳೆ ಸುರಿದಿದೆ. ದಿಡುಪೆ, ನಾರಾವಿ ಸಹಿತ ಸಂಸೆ ಗಡಿಭಾಗಗಳಲ್ಲಿ ಉತ್ತಮ ಗಾಳಿ ಮಳೆಯಾಗಿದ್ದು, ಕಾಜೂರು, ಕೊಲ್ಲಿ ಸಹಿತ ನಡ, ಇಂದಬೆಟ್ಟು, ನಾವುರ, ಸುತ್ತಮುತ್ತಲಿನ ಪ್ರದೇಶದಲ್ಲಿ ಮಳೆಯಾಗಿದೆ.
ಬೆಳ್ತಂಗಡಿ, ಮಡಂತ್ಯಾರು ಸಹಿತ ಇತರೆಡೆ ಸಾಧಾರಣ ಮಳೆ ಸುರಿದಿದೆ. ದಿಡುಪೆ ಕೊಲ್ಲಿ ಸಮೀಪ ಉತ್ತಮ ಮಳೆಯಾದ ಪರಿಣಾಮ ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯುವ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಅಡ್ಡಿ ಉಂಟಾಗುವ ಆತಂಕ ಕಂಡುಬಂದಿತ್ತು. ಗಾಳಿ ಮಳೆಯ ಪರಿಣಾಮ ಅವ್ಯವಸ್ಥೆಯಾಗಿತ್ತು. ಗಾಳಿ, ಮಳೆ ಕಡಿಮೆಯಾದ ಬಳಿಕ ಸ್ವಯಂಸೇವಕರ ಸಹಕಾರದಿಂದ ಹಿಂದಿನ ವ್ಯವಸ್ಥೆಗೆ ತರಲಾಯಿತು. ಮುರಿದು ಬಿದ್ದ ವಿದ್ಯುತ್ ಕಂಬಗಳು: ಚಾರ್ಮಾಡಿ, ಮುಂಡಾಜೆ ಕಡೆ ಮಳೆ ಬೀಳದಿದ್ದರೂ ಭಾರಿ ಗಾಳಿ ಬೀಸಿತು. ಗಾಳಿಯ ಪರಿಣಾಮ ಚಾರ್ಮಾಡಿ ಹಾಗೂ ಮುಂಡಾಜೆಯಲ್ಲಿ ಒಟ್ಟು 3 ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಮುಂಡಾಜೆ ಸೀಟು ಸಮೀಪ ಹೆದ್ದಾರಿ ಹಾಗೂ ವಿದ್ಯುತ್ ಲೈನ್ ಮೇಲೆ ಮರಬಿದ್ದು ಕೆಲಕಾಲ ಸಂಚಾರಕ್ಕೆ ಅಡಚಣೆ ಉಂಟಾಯಿತು. ಬೇಸಿಗೆ ಬಿಸಿಗೆ ಡಾಮರು ರಸ್ತೆಗಳು ನಯವಾಗಿದ್ದು, ಮಳೆಯ ಪರಿಣಾಮ ವಾಹನ ಸವಾರರಿಗೆ ಕೊಂಚ ಸಮಸ್ಯೆ ಉಂಟಾಯಿತು.
ಗಡಾಯಿಕಲ್ಲಿನಲ್ಲಿ ಬೆಂಕಿ: ಶನಿವಾರ ಸಂಜೆ 5 ಗಂಟೆ ಸುಮಾರಿಗೆ ಗಡಾಯಿಕಲ್ಲು ದಕ್ಷಿಣ ಭಾಗದಲ್ಲಿ ಬೆಂಕಿ ಆವರಿಸಿರುವುದು ಕಂಡುಬಂದಿತ್ತು. ಸ್ಥಳೀಯರು ವಿಡಿಯೋ ಮಾಡಿ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿರುವ ಅಧಿಕಾರಿಗಳು ಬೆಂಕಿ ನಂದಿಸಲು ಧಾವಿಸಿದ್ದಾರೆ. ಗಡಾಯಿಕಲ್ಲು ಪ್ರವೇಶಕ್ಕೆ ಪ್ರವಾಸಿಗರಿಗೆ ಇಲಾಖೆ ನಿಷೇಧ ಹೇರಿದ್ದರೂ ಬೆಂಕಿ ಯಾವ ಕಾರಣದಿಂದ ಉಂಟಾಗಿದೆ ಎಂದು ತಿಳಿದು ಬಂದಿಲ್ಲ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.