ಮಳೆ: ರಿಕ್ಷಾ ಸಮೇತ ಕಾಲುವೆಗೆ ಬಿದ್ದು ಚಾಲಕ ಸಾವು!

KannadaprabhaNewsNetwork |  
Published : May 26, 2024, 01:36 AM IST
ಮಳೆ | Kannada Prabha

ಸಾರಾಂಶ

ಕೊಟ್ಟಾರ ಚೌಕಿ ಸಮೀಪದ ಕೂಳೂರು ಫೆರಿ ರಸ್ತೆ ನಿವಾಸಿ ದೀಪಕ್‌ ಆಚಾರ್ಯ (42) ಮೃತರು. ಇವರು ಬ್ಯಾಪ್ಟಿಸ್ಟ್‌ ಜಾರ್ಜ್‌ ಪಿರೇರಾ ಎಂಬವರ ಮಾಲೀಕತ್ವದ ರಿಕ್ಷಾದಲ್ಲಿ ಚಾಲಕರಾಗಿ ದುಡಿಯುತ್ತಿದ್ದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರು ನಗರದಲ್ಲಿ ಶುಕ್ರವಾರ ರಾತ್ರಿ ಸುರಿದ ಭಾರೀ ಬಿರುಗಾಳಿ ಮಳೆಗೆ ರಿಕ್ಷಾ ಚಾಲಕರೊಬ್ಬರು ರಿಕ್ಷಾ ಸಮೇತ ಮಳೆ ನೀರ ಕಾಲುವೆಗೆ ಬಿದ್ದು ಮೃತಪಟ್ಟಿದ್ದಾರೆ. ನಗರದಲ್ಲಿ ಅವೈಜ್ಞಾನಿಕ ಕಾಮಗಾರಿ ಹಾಗೂ ಸಕಾಲದಲ್ಲಿ ಕಾಲುವೆ ಹೂಳೆತ್ತದೆ ರಸ್ತೆಯಲ್ಲಿ ನೀರು ಹರಿದು ಈ ದುರ್ಘಟನೆ ಸಂಭವಿಸಿದ್ದು, ಪಾಲಿಕೆಯ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

ಕೊಟ್ಟಾರ ಚೌಕಿ ಸಮೀಪದ ಕೂಳೂರು ಫೆರಿ ರಸ್ತೆ ನಿವಾಸಿ ದೀಪಕ್‌ ಆಚಾರ್ಯ (42) ಮೃತರು. ಇವರು ಬ್ಯಾಪ್ಟಿಸ್ಟ್‌ ಜಾರ್ಜ್‌ ಪಿರೇರಾ ಎಂಬವರ ಮಾಲೀಕತ್ವದ ರಿಕ್ಷಾದಲ್ಲಿ ಚಾಲಕರಾಗಿ ದುಡಿಯುತ್ತಿದ್ದರು.

ಶುಕ್ರವಾರ ರಾತ್ರಿ ಸುರಿಯುತ್ತಿದ್ದ ಧಾರಾಕಾರ ಮಳೆಯಲ್ಲಿ ರಿಕ್ಷಾ ಬಾಡಿಗೆ ನಡೆಸುತ್ತಿದ್ದ ಅವರು, ರಾತ್ರಿ ಸುಮಾರು 10 ಗಂಟೆ ವೇಳೆಗೆ ಕೊಟ್ಟಾರ ಚೌಕಿ ಬಳಿ ಯಮುನಾ ಪ್ಯಾರಡೈಸ್‌ ಅಪಾರ್ಟ್‌ಮೆಂಟ್‌ನ ತಿರುವು ರಸ್ತೆಯಲ್ಲಿ ತೆರಳುತ್ತಿದ್ದಾಗ ಆಯ ತಪ್ಪಿ ರಿಕ್ಷಾ ಸಮೇತ ಚರಂಡಿಗೆ ಬಿದ್ದಿದ್ದಾರೆ. ತಕ್ಷಣ ಸ್ಥಳೀಯರು ಹಾಗೂ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಮೃತದೇಹ ಮೇಲೆತ್ತಿದ್ದಾರೆ.

ಪಾಲಿಕೆ ನಿರ್ಲಕ್ಷ್ಯವೇ ಕಾರಣ:

ಕೊಟ್ಟಾರ ಚೌಕಿ ಪ್ರದೇಶ ಪ್ರತಿ ಮಳೆಗಾಲದಲ್ಲಿ ಕೃತಕ ಪ್ರವಾಹದ ತೀವ್ರ ಸಮಸ್ಯೆ ಎದುರಿಸುತ್ತಿದೆ. ಇದು ಗೊತ್ತಿದ್ದೂ ಮಹಾನಗರ ಪಾಲಿಕೆ ಅಧಿಕಾರಿಗಳು ಈ ಬಾರಿ ಕ್ಲಪ್ತ ಸಮಯಕ್ಕೆ ಇಲ್ಲಿನ ಕಾಲುವೆ, ಚರಂಡಿಗಳ ಹೂಳು ತೆಗೆಯುವಲ್ಲಿ ವಿಫಲರಾಗಿದ್ದಾರೆ. ಪರಿಣಾಮ ಶುಕ್ರವಾರ ಸುರಿದ ಭಾರಿ ಮಳೆಗೆ ಕೊಟ್ಟಾರಚೌಕಿಯ ಮಳೆನೀರ ಕಾಲುವೆ ಉಕ್ಕಿ ರಸ್ತೆಗೆ ನೀರು ಹರಿದಿತ್ತು. ಪ್ರವಾಹ ನೀರಿನಲ್ಲಿ ರಸ್ತೆ, ಚರಂಡಿ ಯಾವುದೆಂದು ಕಾಣದೆ ರಿಕ್ಷಾ ಚಾಲಕ ಕೊಚ್ಚಿಹೋಗಿದ್ದಾರೆ. ಅಲ್ಲದೆ, ಈ ಕಾಲುವೆಗೆ ತಿರುವಿನಲ್ಲಿ ಕೂಡ ಯಾವುದೇ ತಡೆಗೋಡೆ ಕಟ್ಟದೆ ಪಾಲಿಕೆ ನಿರ್ಲಕ್ಷ್ಯ ವಹಿಸಿದ್ದು ಕೂಡ ಸಾವಿಗೆ ಕಾರಣವಾಗಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.ಹೀಗಾಗಿ, ಮಂಗಳೂರು ಮಹಾನಗರ ಪಾಲಿಕೆಯ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಉರ್ವ ಪೊಲೀಸ್ ಠಾಣೆಯಲ್ಲಿ ಸೆ. 304 (ಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಬಿರುಮಳೆಗೆ ಮತ್ತೆ ಮಂಗಳೂರು ತತ್ತರ!

ಶುಕ್ರವಾರ ರಾತ್ರಿ ಸುರಿದ ಭಾರೀ ಮಳೆಗೆ ಮತ್ತೆ ಮಂಗಳೂರು ನಗರ ತತ್ತರಿಸಿದೆ. ಚರಂಡಿಗಳಲ್ಲಿ ಹರಿಯಬೇಕಾದ ಮಳೆ ನೀರು ನಗರದ ಬಹುತೇಕ ರಸ್ತೆಗಳ ಮೇಲೆ ಹರಿದು ವಾಹನ ಸವಾರರ ಧೃತಿಗೆಡಿಸಿತ್ತು. ತಗ್ಗು ಪ್ರದೇಶದ ಅನೇಕ ಮನೆ, ಅಂಗಡಿಗಳ ಒಳಗೆ ನೀರು ನುಗ್ಗಿತ್ತು.

ಇಡೀ ನಗರದ ಒಂದಲ್ಲ ಒಂದು ಕಡೆ ಕಾಂಕ್ರಿಟ್‌ ರಸ್ತೆಗಳನ್ನು ಅಗೆದು ಹಾಕಿರುವುದು, ರಸ್ತೆ ಇಕ್ಕೆಲದ ಚರಂಡಿಗಳ ಹೂಳೆತ್ತದೆ ಇರುವುದು ಮಳೆಗೆ ಅಧ್ವಾನ ಸೃಷ್ಟಿಸಿತ್ತು. ಅರೆಬರೆ ಕಾಮಗಾರಿ ನಡೆಸುತ್ತಿರುವ ಮಹಾನಗರ ಪಾಲಿಕೆಗೆ ಜನತೆ ಹಿಡಿಶಾಪ ಹಾಕುವಂತಾಗಿದೆ.

ಶುಕ್ರವಾರ ರಾತ್ರಿ ಆರಂಭವಾದ ಮಳೆ ಬಿರುಗಾಳಿ, ಗುಡುಗು ಸಿಡಿಲಿನೊಂದಿಗೆ ಧಾರಾಕಾರ ಸುರಿದಿತ್ತು. ಪರಿಣಾಮ ನಗರದ ಕದ್ರಿ, ಕೊಟ್ಟಾರಚೌಕಿ, ಬಿಜೈ ಕಾಪಿಕಾಡ್‌, ಪಂಪ್‌ವೆಲ್‌, ಕುದ್ರೋಳಿ, ಕೂಳೂರು, ಬೆಂದೂರುವೆಲ್‌ ಪ್ರದೇಶಗಳಲ್ಲಿ ರಸ್ತೆ ಮೇಲೆ 2 ಅಡಿಗಳಷ್ಟು ಎತ್ತರಕ್ಕೆ ಕೃತಕ ಪ್ರವಾಹ ಉಂಟಾಗಿತ್ತು. ಕೊಟ್ಟಾರಚೌಕಿ ಹಾಗೂ ಕುದ್ರೋಳಿಯಲ್ಲಿ ರಸ್ತೆ ಮೇಲೆ ನೀರು ಹರಿದು ಹಲವು ಅಂಗಡಿಗಳ ಒಳಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಈ ನಡುವೆ ಕೆಲಕಾಲ ಮಂಗಳೂರು ನಗರ ಕರೆಂಟಿಲ್ಲದೆ ಭಾಗಶಃ ಕತ್ತಲೆಯಲ್ಲಿ ಮುಳುಗಿತ್ತು.

ಇಂದೂ ಮಳೆ ಸೂಚನೆ

ದ.ಕ. ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಧಾರಾಕಾರ ಮಳೆಯಾಗಿದ್ದರೂ ಶನಿವಾರ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಸುರಿದಿಲ್ಲ. ಶನಿವಾರ ಬೆಳಗ್ಗಿನಿಂದ ರಾತ್ರಿವರೆಗೂ ಮೋಡ ಕವಿದ ವಾತಾವರಣ, ಒಂದೆರಡು ಸಲ ಸಣ್ಣ ಮಳೆ ಬಂದಿತ್ತು. ಗ್ರಾಮಾಂತರ ಭಾಗದಲ್ಲಿ ಕೆಲವೆಡೆ ಉತ್ತಮ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾನುವಾರವೂ ಒಂದೆರಡು ಕಡೆ ತುಂತುರು ಮಳೆಯ ಮುನ್ಸೂಚನೆ ಇದೆ. ಬಳಿಕ ಮೇ 30ರತನಕ ಮಳೆಯ ಸಾಧ್ಯತೆ ಕ್ಷೀಣವಾಗಿದೆ.ಶುಕ್ರವಾರ ಬೆಳಗ್ಗಿನಿಂದ ಶನಿವಾರ ಬೆಳಗ್ಗಿನವರೆಗೆ ಮೂಲ್ಕಿ- ಪಣಂಬೂರು ಭಾಗದಲ್ಲಿ ಅತಿ ಹೆಚ್ಚು 192 ಮಿಮೀ ಮಳೆಯಾಗಿದ್ದರೆ, ಮೂಲ್ಕಿ ಕಿಲ್ಪಾಡಿಯಲ್ಲಿ 133.5 ಮಿಮೀ, ಮಂಗಳೂರು ಚೈಳಾಯರು ಪ್ರದೇಶದಲ್ಲಿ 133 ಮಿಮೀ ಮಳೆ ದಾಖಲಾಗಿದೆ. ಜಿಲ್ಲೆಯಲ್ಲಿ ಸರಾಸರಿ 41.5 ಮಿಮೀ ಮಳೆಯಾಗಿದೆ.

ಒಂದೇ ರಾತ್ರಿ ಉಡುಪಿ ಜಿಲ್ಲೆಯಲ್ಲಿ 69.60 ಮಿ.ಮೀ. ಮಳೆಉಡುಪಿ ಜಿಲ್ಲಾದ್ಯಂತ ಶುಕ್ರವಾರ ರಾತ್ರಿಯಿಡೀ ಭಾರಿ ಸಿಡಿಲು ಮಳೆಯಾಗಿದೆ. ಗಾಳಿಯಿಂದ, ಅನೇಕ ಮನೆಗಳ ಮೇಲೆ ಮರಗಳು ಉರುಳಿ, 25 ಮನೆ, 4 ಜಾನುವಾರು ಕೊಟ್ಟಿಗೆಗಳಿಗೆ ಮತ್ತು ಅಡಕೆ- ಬಾಳೆ ತೋಟಗಳಿಗೆ ಲಕ್ಷಾಂತರ ರು. ಹಾನಿಯಾಗಿದೆ. ಒಂದೇ ರಾತ್ರಿಯಲ್ಲಿ ಜಿಲ್ಲೆಯಲ್ಲಿ 69 ಮಿ.ಮೀ. ಮಳೆಯಾಗಿದೆ.ಸಿಡಿಲು ಬಡಿದು ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಸಾಧು ಮೂಲ್ಯ ಅವರ ಮನೆಗೆ 30 ಸಾವಿರ, ಕಾಪು ತಾಲೂಕಿನ ಕಟ್ಟಿಂಗೇರಿ ಗ್ರಾಮದ ಹರೀಶ್ ಅವರ ಮನೆಗೆ 25 ಸಾವಿರ, ಮಲ್ಲಾರು ಗ್ರಾಮದ ದಿನೇಶ್ ಕೋಟ್ಯಾನ್ ಮನೆಗೆ 40 ಸಾವಿರ, ಶಿರ್ವ ಗ್ರಾಮದ ಲೀಲಾ ಆಚಾರ್ಯ ಮನೆಗೆ 15 ಸಾವಿರ, ಉಡುಪಿ ತಾಲೂಕಿನ ಬಡಗುಬೆಟ್ಟು ಗ್ರಾಮದ ಅಬ್ದುಲ್ ರಹೀಮ್ ಅವರ ಮನೆಗೆ 75 ಸಾವಿರ, ಬೈಂದೂರು ತಾಲೂಕಿನ ಯಳಜಿತ್ ಗ್ರಾಮದ ಜ್ಯೋತಿ ಮರಾಠಿ ಅವರ ಮನೆಗೆ 50 ಸಾವಿರ, ರೇವತಿ ಮಹಾಬಲ ಅವರ ಮನೆಗೆ 1 ಲಕ್ಷ ರು.ಗಳ ನಷ್ಟ ಸಂಭವಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಸಿಲಿನ ಹೊಡೆತಕ್ಕೆ ಸಾವಿರಾರು ಮೀನುಗಳ ಮಾರಣಹೋಮ
ನಿರಾಶ್ರಿತರ ಕಣ್ಣೀರು ಒರೆಸುವ ಕೆಲಸ