ಸಿ.ಕೆ. ನಾಗರಾಜ
ಉತ್ತಮ ಮಳೆ ಹಾಗೂ ಬೆಳೆಯಾಗಲಿ ಎಂದು ತಮ್ಮೂರಿನ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಸೇರಿದಂತೆ ಭಜನೆ ಸೇರಿದಂತೆ ಅನೇಕ ರೀತಿಯಲ್ಲಿ ನಿತ್ಯವೂ ಪ್ರಾರ್ಥನೆ ಮಾಡಲಾಗುತ್ತಿದೆ. ಜೂನ್ ಮುಗಿದು ಜುಲೈ ತಿಂಗಳು ಆರಂಭವಾಗಿದೆ. ಜೂನ್‌ನಲ್ಲಿ ಹೇಳಿಕೊಳ್ಳುವಂತಹ ಮಳೆಯಾಗಿಲ್ಲ. ಗ್ರಾಮೀಣ ಭಾಗದ ಜನರು ತಮ್ಮ ತಮ್ಮ ನಂಬಿಕಗಳಿಗನುಸಾರ ದೇವಸ್ಥಾನಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸುವುದು. ಕತ್ತೆಗಳಿಗೆ, ಕಪ್ಪೆಗಳಿಗೆ ಮದುವೆ ಮಾಡಿಸುವುದು, ಅಮ್ಮನ ಮಾಡಿ ಕಳುಹಿಸುವುದು, ಭಜನೆ ಮೂಲಕ ಮಳೆರಾಯನಿಗೆ ಪ್ರಾರ್ಥನೆ ಮಾಡುತ್ತಿದ್ದಾರೆ.
ಕಾರಹುಣ್ಣಿಮೆದಿನ ಕರಿ ಹರಿಸುವಾಗ ಮರಿಯಮ್ಮನಹಳ್ಳಿಯ 7ನೇ ವಾರ್ಡಿನ ರೈತ ಬಸವರಾಜ ಎನ್ನುವ ಯುವಕ ತನ್ನ ಎತ್ತುಗಳಿಗೆ ಬಾರೋ ಮಳೆರಾಯ ಎಂದು ಎತ್ತಿಗೆ ಬರೆದು, ಶೃಂಗಾರ ಮಾಡಿ ಕಾರಹುಣ್ಣಿಮೆದಿನ ಓಟಕ್ಕೆ ಬಿಟ್ಟಿದ್ದ. ಅಲ್ಲದೆ, ಎತ್ತು ದೇವಸ್ಥಾನಕ್ಕೆ ಕರೆತಂದು ವಿಶೇಷ ಪೂಜೆ ಸಲ್ಲಿಸಿ ಮಳೆಗಾಗಿ ಪ್ರಾರ್ಥಿಸಿದ್ದ. ಇನ್ನು ಮರಿಯಮ್ಮನಹಳ್ಳಿಯ ಮಾರಿಕಾಂಬ ದೇವಸ್ಥಾನದಲ್ಲಿ ಕಳೆದ 15 ದಿನಗಳಿಂದ ನಿತ್ಯವೂ ರೈತರು ಭಜನೆಯಲ್ಲಿ ತೊಡಗಿಕೊಂಡು ಮಳೆಗಾಗಿ ಪ್ರಾರ್ಥಿಸುತ್ತಿದ್ದಾರೆ.ಆರಂಭದಲ್ಲಿ ಸಕಾಲಕ್ಕೆ ಮುಂಗಾರು ಮಳೆ ಆಗಿರುವುದರಿಂದ ರೈತರು ಸಂತಸ ವ್ಯಕ್ತಪಡಿಸಿ ಕೆಲವರು ಬಿತ್ತನೆ ಕಾರ್ಯಕ್ಕೂ ಮುಂದಾಗಿದ್ದರು. ಸರಿಯಾದ ವೇಳೆಗೆ ಮಳೆ ಸುರಿದು ಈಗಾಗಲೇ ಹಚ್ಚ ಹಸುರಿನಿಂದ ಕಂಗೊಳಿಸಬೇಕಿದ್ದ ಬೆಳೆಗಳು ಮಳೆ ಬಾರದ ಕಾರಣ ಬಿಸಿಲಿನ ಝಳಕ್ಕೆ ಬಾಡಲಾರಂಭಿಸಿವೆ. ನಾನಾ ಬೆಳೆಗಳು ಬಿಸಿಲಿನ ಜಳಕ್ಕೆ ಬಾಡುತ್ತಿವೆ. ಇನ್ನೊಂದು ವಾರದೊಳಗೆ ಮಳೆಯಾಗದಿದ್ದರೆ ಬಿತ್ತಿದ ಬೆಳೆಗಳು ಸಂಪೂರ್ಣವಾಗಿ ಒಣಗುವ ಸಾಧ್ಯತೆ ಇದೆ. ಮಳೆ ಹಾಗೂ ಬೆಳೆ ಇಲ್ಲದೇ ಜಾನುವಾರುಗಳಿಗೂ ಮೇವಿನ ತೀವ್ರ ತೊಂದರೆಯಾಗಿರುವ ಜೊತೆಗೆ ಕೆರೆ ಮತ್ತು ಕುಂಟೆಗಳಲ್ಲಿ ನೀರು ಇಲ್ಲದೇ ಕುಡಿಯುವ ನೀರಿಗೂ ತೊಂದರೆಯಾಗುವ ಲಕ್ಷಣಗಳು ಕಾಣಿಸತೊಡಗಿದೆ.ಬಿಸಿಲಿನ ನಡುವೆಯೂ ಈಗ ಕಳೆದ 2-3 ದಿನಗಳಿಂದ ಅಲ್ಲಲ್ಲಿ ಮೋಡ ಕವಿದ ವಾತಾವರಣ ಮಳೆಯಾಗುವ ನಿರೀಕ್ಷೆ ಮೂಡಿದೆ. ಆದರೆ, ಮೋಡ ಕವಿದರೂ ಮಳೆ ಸುರಿಸುತ್ತಿಲ್ಲ. ಇದು ರೈತರನ್ನು ಚಿಂತೆಗೀಡುಮಾಡಿದೆ.