ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜಧಾನಿ ಬೆಂಗಳೂರು ಶುಕ್ರವಾರ ಸಂಜೆ ಧಾರಾಕಾರ ಮಳೆ ಸುರಿದ ಪರಿಣಾಮ ರಸ್ತೆಗಳಲ್ಲಿ ಭಾರೀ ಪ್ರಮಾಣ ನೀರು ನಿಂತು ವಾಹನ ಸಂಚಾರಕ್ಕೆ ಅಡ್ಡಿ ಉಂಟಾಯಿತು.ಶುಕ್ರವಾರ ಬೆಳಗ್ಗೆಯಿಂದ ಸಂಜೆ 4 ಗಂಟೆಯ ವರೆಗೆ ಬಿಸಿಲು ಮತ್ತು ಮೋಡ ಕವಿದ ವಾತಾವರಣ ಇತ್ತು. ಆದರೆ, ಸಂಜೆ 4 ಗಂಟೆಯಿಂದ ನಗರದ ಹೃದಯ ಭಾಗವಾದ ವಿಧಾನಸೌಧ, ಮೆಜೆಸ್ಟಿಕ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಸಣ್ಣ ಪ್ರಮಾಣ ಮಳೆ ಆರಂಭಗೊಂಡಿತ್ತು. ಬಳಿಕ ನಗರದಾದ್ಯಂತ ಮಳೆ ವ್ಯಾಪಿಸಿಕೊಂಡಿತ್ತು. ಸಂಜೆ 7 ಗಂಟೆಯ ಸುಮಾರಿಗೆ ಧಾರಾಕಾರವಾಗಿ ಮಳೆ ಸುರಿಯುವುದಕ್ಕೆ ಆರಂಭಗೊಂಡಿತ್ತು.
ಇದರಿಂದ ರಸ್ತೆಗಳಲ್ಲಿ ಭಾರೀ ಪ್ರಮಾಣ ನೀರು ಹರಿಯುವುದಕ್ಕೆ ಶುರುವಾಯಿತು. ಇದರಿಂದ ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು.ಕೆಲವು ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ಕಚೇರಿ, ವ್ಯಾಪಾರ ವಹಿವಾಟು ಮುಗಿಸಿ ಮನೆ ಹೊರಟವರು ಪರದಾಡಬೇಕಾಯಿತು. ಇನ್ನು ನಗರದ ಫ್ಲೈಓವರ್ ಕೆಳಭಾಗದಲ್ಲಿ ಬೈಕ್ ಸವಾರರು ಮಳೆಯಿಂದ ರಕ್ಷಣೆ ಪಡೆದ ದೃಶ್ಯಗಳು ಸಾಮಾನ್ಯವಾಗಿದ್ದವು.
ನಗರದ ಎಂ.ಜಿ. ರಸ್ತೆ ಸೇರಿದಂತೆ ಮೊದಲಾದ ರಸ್ತೆಗಳಲ್ಲಿ ನೀರು ಹರಿದು ಚರಂಡಿ ಸೇರುವುದಕ್ಕೆ ಅಡ್ಡಿಯಾಗಿದ್ದ ಕಸವನ್ನು ಬಿಬಿಎಂಪಿ ಸಿಬ್ಬಂದಿ ತೆರವುಗೊಳಿಸುವುದರಲ್ಲಿ ನಿರತರಾಗಿದ್ದರು.ಧಾರಾಕಾರ ಮಳೆಯಿಂದ ತಿಲಕ್ ನಗರದ ಮುಖ್ಯ ರಸ್ತೆಯಲ್ಲಿ ಮರದ ಕೊಂಬೆ ಪೊಲೀಸ್ ಕಾರಿನ ಮೇಲೆ ಬಿದ್ದು, ಜಖಂಗೊಂಡಿದೆ. ಇದರಿಂದ ಸ್ವಾಗತ್ ವೃತ್ತದ ಕಡೆಗೆ ವಾಹನ ಸಂಚಾರ ನಿಧಾನಗತಿಯಲ್ಲಿ ಇತ್ತು.
ಸರಾಸರಿ 1.5 ಸೆಂ.ಮೀ. ಮಳೆಶುಕ್ರವಾರ ನಗರದಲ್ಲಿ ಸರಾಸರಿ 1.5 ಸೆಂ.ಮೀ ಮಳೆಯಾದ ವರದಿಯಾಗಿದೆ. ರಾತ್ರಿ 10 ಗಂಟೆಯ ವೇಳೆಗೆ ಕೆಂಗೇರಿಯಲ್ಲಿ ಅತಿ ಹೆಚ್ಚು 4.5 ಸೆ.ಮೀ ಮಳೆಯಾಗಿದೆ. ಎಚ್.ಗೊಲ್ಲಹಳ್ಳಿ 3.6, ದೊರೆಸಾನಿಪಾಳ್ಯ 3.5. ಹೆಮ್ಮಿಗೆಪುರ ಹಾಗೂ ಆರ್.ಆರ್‌ನಗರ ತಲಾ 3.4, ಬಿಳೆಕಹಳ್ಳಿ, ವಿದ್ಯಾಪೀಠದಲ್ಲಿ ತಲಾ 3.3, ನಾಯಂಡನಹಳ್ಳಿ 3.1, ಗೊಟ್ಟಿಗೆರೆ 2.8, ಜ್ಞಾನಭಾರತಿ,ಅರೆಕೆರೆ, ಮಾರುತಿ ಮಂದಿರ ವಾರ್ಡ್ ಹಾಗೂ ಕೋಣನಕುಂಟೆ 2.7, ಅಂಜನಾಪುರ ಹಾಗೂ ನಾಗಪುರ 2.6, ಉತ್ತರಹಳ್ಳಿ 2.5, ಪೀಣ್ಯಾ2.3, ನಂದಿನಿಲೇಔಟ್ 2 ಸೆಂ.ಮೀ ಮಳೆಯಾಗಿದೆ ಎಂದು ಕೆಎಸ್‌ಎನ್‌ಡಿಎಂಸಿ ತಿಳಿಸಿದೆ.
ಶನಿವಾರ ನಗರದಲ್ಲಿ ಮಳೆ ಮುಂದುವರೆಯುವ ಸಾಧ್ಯತೆ ಇದೆ. ಸರಾಸರಿ 2.2 ಸೆಂ.ಮೀ ವರೆಗೆ ಮಳೆಯಾಗಬಹುದು ಎಂದು ಕೆಎಸ್‌ಎನ್‌ಡಿಎಂಸಿ ತಿಳಿಸಿದೆ.