ಕನ್ನಡಪ್ರಭ ವಾರ್ತೆ ಕಲಬುರಗಿ
ಜಿಲ್ಲೆಯ ಆಳಂದ, ಜೇವರ್ಗಿ ಕ್ಷೇತ್ರದ ಯಡ್ರಾಮಿ ತಾಲೂಕಿನ ಗ್ರಾಮಗಳು ಹಾಗೂ ಹೋಬಳಿಗಳು, ಅಫಜಲ್ಪೂರ ತಾಲೂಕಿನ ಕರಜಗಿ ಸೇರಿದಂತೆ ಹಲವು ಹೋಬಳಿ ಪ್ರದೇಶಗಳು ಸೇರಿದಂತೆ ಜಿಲ್ಲಾದ್ಯಂತ ಭಾರಿ ಮಳೆಯಾಗಿದೆ.
ಆಳಂದ ಪಟ್ಟಣದ ಹೊರವಲಯದಲ್ಲಿ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಹಳ್ಳಗಳು ತುಂಬಿದ ಕಾರಣ ಜಮೀನುಗಳಿಗೆ ನೀರು ನುಗ್ಗಿದೆ.ಬೋಧನ ಗ್ರಾಮದಲ್ಲಿ ಕೆರೆ ಹಳ್ಳಗಳು ತುಂಬಿದ್ದು, ಬೋಧನ- ಕಮಲಾನಗರ ಮಧ್ಯೆ ಇರುವ ಸೇತುವೆ ಮುಳುಗಡೆಯಾಗಿದೆ. ಕಲಬುರಗಿ- ಬಸವಕಲ್ಯಾಣ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಬಂದ್ ಆಗಿದೆ. ಕಳೆದ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ.
ಕಮಲಾಪುರ ತಾಲ್ಲೂಕಿನ ಅಂಬಲಗಾ ಗ್ರಾಮದಲ್ಲಿ ಗಂಡೋರಿ ನಾಲಾ, ಹಳ್ಳದ ನೀರು ಜಮೀನಿನೊಳಗೆ ನುಗ್ಗಿ ಬಿತ್ತನೆ ಮಾಡಿದ ಬೀಜ, ಗೊಬ್ಬರ, ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಗಿದೆ. ಮಳೆಯಿಂದ ಹಾನಿಯಾದ ರೈತರಿಗೆ ಪರಿಹಾರ ನೀಡಬೇಕು ಎಂದು ಕಾಂಗ್ರೆಸ್‍ನ ಕಲ್ಯಾಣ ಕರ್ನಾಟಕ ಕಿಸಾನ್ ಘಟಕದ ಅಧ್ಯಕ್ಷ ಶಿವಪುತ್ರಪ್ಪ ಬಿ.ಮೋಗಪ್ಪಗೋಳ ಒತ್ತಾಯಿಸಿದ್ದಾರೆ.ಜಿಲ್ಲೆಯಲ್ಲಿ ಬುಧವಾರವೂ ಮುಂದುವರೆದ ವರುಣನ ಆರ್ಭಟದಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ತುಂಬಿದ ಕೆರೆ ಹಳ್ಳ ಕೊಳ್ಳಗಳಿಂದಾಗಿ ರೈತರು ಹೊಲಗದ್ದೆಗಳಿಗೂ ಹೋಗದಂತಾಗಿದೆ. ಜಮೀನುಗಳಿಗೆ ನುಗ್ಗಿದ ನೀರಿನಿಂದ ಹೊಲಗಲು ಕೆರೆಯಂತಾಗಿವೆ. ಕೆಲವು ಕಡೆ ಸೇತುವೆ ಮುಳುಗಡೆಯಾಗಿದ್ದು ಜಿಲ್ಲಾದ್ಯಂತ ಗ್ರಾಮೀಣ ಜನಜೀವನ ಅಸ್ತವ್ಯಸ್ತಗೊಂಡಿದೆ.