ಮಳೆ ನೀರು ಹೆದ್ದಾರಿಯಲ್ಲಿ ನಿಂತು ಅವ್ಯವಸ್ಥೆ, ಸಚಿವ ಶಿವಾನಂದ ಪಾಟೀಲ್‌ ಪರಿಶೀಲನೆ

KannadaprabhaNewsNetwork | Published : Aug 1, 2024 12:30 AM

ಸಾರಾಂಶ

ಹಾನಗಲ್ಲ ತಾಲೂಕಿನ ಅಕ್ಕಿಆಲೂರಿನ ಬಸ್ ನಿಲ್ದಾಣದ ಬಳಿ ಶಿರಸಿ-ಮೊಣಕಾಲ್ಮೂರು ರಾಜ್ಯ ಹೆದ್ದಾರಿಯಲ್ಲಿ ಮಳೆ ಸುರಿದಾಗಲೆಲ್ಲ ನೀರು ನಿಂತು ಅವಾಂತರ ಸೃಷ್ಟಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಮತ್ತು ಶಾಸಕ ಶ್ರೀನಿವಾಸ ಮಾನೆ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಹಾನಗಲ್ಲ: ತಾಲೂಕಿನ ಅಕ್ಕಿಆಲೂರಿನ ಬಸ್ ನಿಲ್ದಾಣದ ಬಳಿ ಶಿರಸಿ-ಮೊಣಕಾಲ್ಮೂರು ರಾಜ್ಯ ಹೆದ್ದಾರಿಯಲ್ಲಿ ಮಳೆ ಸುರಿದಾಗಲೆಲ್ಲ ನೀರು ನಿಂತು ಅವಾಂತರ ಸೃಷ್ಟಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಮತ್ತು ಶಾಸಕ ಶ್ರೀನಿವಾಸ ಮಾನೆ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಹೆದ್ದಾರಿ ನಿರ್ಮಾಣ ಮಾಡಿದಾಗಿನಿಂದಲೂ ಈ ಸಮಸ್ಯೆ ಇದೆ. ಮಳೆ ಸುರಿದರೆ ಸಾಕು ಸಂಚಾರಕ್ಕೆ ಅಡೆತಡೆ ಉಂಟಾಗುತ್ತದೆ. ಹೆದ್ದಾರಿ ತುಂಬೆಲ್ಲ ಸಾಕಷ್ಟು ಪ್ರಮಾಣ ನೀರು ನಿಲ್ಲುತ್ತದೆ. ಈ ವರ್ಷವಂತೂ ಸಮಸ್ಯೆ ಹೆಚ್ಚಿದೆ. ನೀರು ಹರಿದು ಹೋಗದಂತೆ ಕಾಲುವೆಗೆ ಕೆಲವರು ತಡೆಗೋಡೆ ನಿರ್ಮಿಸಿದ್ದರಿಂದ ಹೆದ್ದಾರಿಯಲ್ಲಿ ನಿಂತು ಗಂಟೆಗಟ್ಟಲೇ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಹೆದ್ದಾರಿ ಅಕ್ಕಪಕ್ಕದ ವ್ಯಾಪಾರಸ್ಥರೂ ಬಹಳ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸಾರ್ವಜನಿಕರು ಈ ಸಂದರ್ಭದಲ್ಲಿ ಅಳಲು ತೋಡಿಕೊಂಡರು.

ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಪ್ರಭಾರ ಕಾರ್ಯ ನಿರ್ವಾಹಕ ಅಭಿಯಂತರ ಅಮರ್ ಅವರಿಂದ ಅಗತ್ಯ ಮಾಹಿತಿ ಪಡೆದ ಸಚಿವ ಪಾಟೀಲ, ನೀರು ಮುಂದೆ ಸರಾಗವಾಗಿ ಹರಿದು ಏಕೆ ಸಾಗುತ್ತಿಲ್ಲ ಎನ್ನುವ ಕುರಿತು ಪರಿಶೀಲನೆ ನಡೆಸಿ. ವೈಜ್ಞಾನಿಕ ಕಾರಣಗಳಿದ್ದರೆ ಸರಿಪಡಿಸಲು ಕ್ರಮ ಕೈಗೊಳ್ಳಿ. ಪ್ರಯಾಣಿಕರು, ಸುತ್ತಲಿನ ವ್ಯಾಪಾರಸ್ಥರಿಗೆ ತೊಂದರೆ ಉಂಟಾಗದಂತೆ ಸಮಸ್ಯೆ ಬಗೆಹರಿಸಲು ಕಾಳಜಿ ವಹಿಸಿ ಎಂದು ಸೂಚಿಸಿದರು.

ಕಾಲುವೆಗೆ ತಡೆಗೋಡೆ ನಿರ್ಮಿಸಿ ನೀರು ಮುಂದೆ ಹರಿದು ಸಾಗುವಂತೆ ತಡೆದಿದ್ದರೆ, ಕೂಡಲೇ ಅದನ್ನು ತೆರವುಗೊಳಿಸಿ. ಒಟ್ಟಾರೆ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಿ ಎಂದು ತಹಸೀಲ್ದಾರ್ ರೇಣುಕಾ ಎಸ್. ಅವರಿಗೆ ಸೂಚಿಸಿದರು. ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಸೇರಿದಂತೆ ಜಿಲ್ಲೆ ಮತ್ತು ತಾಲೂಕು ಮಟ್ಟದ ಹಲವು ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Share this article