ಕೊಡಗಿನಲ್ಲಿ ಮುಂದುವರೆದ ಮಳೆಯಬ್ಬರ : ನದಿ ತಟದಲ್ಲಿ ಪ್ರವಾಹ ಭೀತಿ

KannadaprabhaNewsNetwork |  
Published : May 27, 2025, 12:13 AM ISTUpdated : May 27, 2025, 12:14 AM IST
ಚಿತ್ರ :  26ಎಂಡಿಕೆ3 :  ಮಡಿಕೇರಿಯ ತಾಳತ್ತಮನೆಯಲ್ಲಿ ಮರ ಬಿದ್ದು ಕಾರು, ಸ್ಕೂಟಿಗೆ ಹಾನಿಯಾಗಿರುವುದು. | Kannada Prabha

ಸಾರಾಂಶ

ಜಿಲ್ಲೆಯಾದ್ಯಂತ ಸೋಮವಾರ ಮಧ್ಯಾಹ್ನದ ಬಳಿಕ ಮತ್ತೆ ಭಾರಿ ಮಳೆಯಾಗಿದೆ. ಅಲ್ಲಲ್ಲಿ ಸಣ್ಣ ಪ್ರಮಾಣದ ಹಾನಿಯಾಗಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಜಿಲ್ಲೆಯಾದ್ಯಂತ ಸೋಮವಾರ ಮಧ್ಯಾಹ್ನದ ಬಳಿಕ ಮತ್ತೆ ಭಾರಿ ಮಳೆಯಾಗಿದ್ದು, ಅಲ್ಲಲ್ಲಿ ಸಣ್ಣ ಪ್ರಮಾಣದ ಹಾನಿಯುಂಟಾಗಿದೆ. ಹೆಚ್ಚು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ಇದರಿಂದ ನದಿ ತಟದಲ್ಲಿ ಪ್ರವಾಹ ಉಂಟಾಗುವ ಭೀತಿ ಎದುರಾಗಿದೆ.

ಮಳೆ ಹೆಚ್ಚಾಗಿ ಸುರಿಯುತ್ತಿರುವುದರಿಂದ ಜಿಲ್ಲೆಯ ಹಾರಂಗಿ ಜಲಾಶಯದಲ್ಲಿ ಒಳ ಹರಿವು ಏರಿಕೆಯಾಗಿದೆ. ಎರಡು ದಿನ ಸುರಿದ ಮಳೆಗೆ ಎರಡು ಅಡಿಗಳಷ್ಟು ನೀರು ಏರಿಕೆಯಾಗಿದೆ. ಜಿಲ್ಲೆಯ ಮತ್ತೊಂದು ಜಲಾಶಯ ಚಿಕ್ಲಿಹೊಳೆ ಕೂಡ ಮೈದುಂಬಿ ಹರಿಯುತ್ತಿದೆ.

ಭಾಗಮಂಡಲ ರಸ್ತೆಯಲ್ಲಿ ಮರ ಬಿದ್ದು ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ.

ಮರ ಬಿದ್ದು ಸಂಚಾರಕ್ಕೆ ತೊಂದರೆ:

ಮಡಿಕೇರಿ ಭಾಗಮಂಡಲ ಮಧ್ಯೆ ಚೆಟ್ಟಿಮಾನಿಯಲ್ಲಿ ಬೃಹತ್ ಗಾತ್ರದ ಮರ ಬಿದ್ದು ಸಂಚಾರಕ್ಕೆ ತೊಂದರೆಯಾಯಿತು. ಇದರಿಂದ ರಸ್ತೆಯ ಕಿರಿದಾದ ಜಾಗದಲ್ಲಿ ವಾಹನಗಳು ಸಂಚರಿಸಿತು.

ಮಡಿಕೇರಿ ತಾಲೂಕಿನ ಭಾಗಮಂಡಲದಲ್ಲಿ ಬೆಳಗ್ಗೆಯಿಂದ ಮತ್ತಷ್ಟು ತೀವ್ರಗೊಂಡಿರುವ ಮಳೆ ಬಹುತೇಕ ಭರ್ತಿಯಾಗಿದ್ದು, ತ್ರಿವೇಣಿ ಸಂಗಮ ಸ್ನಾನಘಟ್ಟ ಮುಳುಗಡೆಯಾಗಿದೆ. ಕಾವೇರಿ, ಕನ್ನಿಕೆ, ಸುಜ್ಯೋತಿ ನದಿಗಳು ತುಂಬಿ ಹರಿಯುತ್ತಿದೆ. ತ್ರಿವೇಣಿ ಸಂಗಮದಲ್ಲಿರುವ ಉದ್ಯಾನವನದ ಅರ್ಧಭಾಗ ಜಲಾವೃತಗೊಂಡಿದೆ. ಭಕ್ತರು ಪಿಂಡ ಪ್ರದಾನಕ್ಕೂ ಪರದಾಡುವಂತಾಗಿದೆ.

ಭಾಗಮಂಡಲ ತಲಕಾವೇರಿ ಭಾಗದಲ್ಲಿ ಬರೋಬ್ಬರಿ 11 ಇಂಚು ಮಳೆ ಸುರಿದಿದ್ದು ಮಳೆಯಿಂದ ಹೊರಬರಲಾರದೆ ಜನರು ಪರದಾಡುತ್ತಿದ್ದಾರೆ.

ಭಾರಿ ಮಳೆಗೆ ಕುಸಿದ ಹಳೇ ಕಟ್ಟಡ ಕುಸಿದಿರುವ ಘಟನೆ ಮಡಿಕೇರಿ ತಾಲೂಕಿನ ನಾಪೋಕ್ಲುವಿನಲ್ಲಿ ನಡೆದಿದೆ. ನಾಪೋಕ್ಲು ಪಟ್ಟಣದ ಬೇತು ರಸ್ತೆಯಲ್ಲಿರುವ ಕಟ್ಟಡ ಕುಸಿತವಾಗಿದೆ. ಹಂಸ ಎಂಬುವವರಿಗೆ ಸೇರಿದ ಹಳೇ ಕಟ್ಟಡ ಕುಸಿದಿದೆ. ಕಟ್ಟಡದಲ್ಲಿ ಈ ಹಿಂದೆ ಹಲವರು ವಿವಿಧ ವ್ಯಾಪಾರ ಮಾಡುತ್ತಿದ್ದರು. ಕಟ್ಟಡದ ಪುನರ್ ನಿರ್ಮಾಣ ಕಾಮಗಾರಿ ಹಿನ್ನೆಲೆ ಕೆಲವು ತಿಂಗಳುಗಳ ಹಿಂದೆಯಷ್ಟೇ ವ್ಯಾಪಾರಸ್ಥರು ತೆರವುಗೊಳಿಸಲಾಗಿತ್ತು. ಹೀಗಾಗಿ ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ.

ಕಾಂಪೌಂಡ್ ಕುಸಿತ:

ಭಾರಿ ಮಳೆಗೆ ದೇವಾಲಯದ ಕಾಂಪೌಂಡ್ ಕುಸಿತವಾಗಿದೆ.

ಕುಶಾಲನಗರ ತಾಲೂಕಿನ ಮಾದಾಪಟ್ಟಣದ ಕಾಶಿ ವಿಶ್ವನಾಥ ದೇವಾಲಯದ ಕಾಂಪೌಂಡ್ ಕುಸಿದಿದೆ. ಹೊಸದಾಗಿ ನಿರ್ಮಿಸಿದ್ದ ದೇವಾಲಯದ ಕಾಂಪೌಂಡ್

ಸದ್ಯ ಸ್ಥಳದಲ್ಲಿ ಯಾರು ಇರದಿದ್ದ ಹಿನ್ನೆಲೆ ಸ್ಥಳದಲ್ಲಿ ಭಾರಿ ಅನಾಹುತ ತಪ್ಪಿದೆ.

ಮೂರು ದಿನಗಳ ಹಿಂದೆ ಖಾಲಿ ಇದ್ದ ಕಾವೇರಿ ನದಿ ಮೂರೇ ದಿನದ ಮಳೆಗೆ ತುಂಬಿ ಹೋದ ಕಾವೇರಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

ತಲಕಾವೇರಿ ಬ್ರಹ್ಮಗಿರಿ ಬೆಟ್ಟ ಪ್ರದೇಶ ಭಾಗಮಂಡಲ ಸೇರಿದಂತೆ ಹಲವೆಡೆ ಮಳೆಯಾಗುತ್ತಿರುವುದರಿಂದ ಕಾವೇರಿ ಜಲಾನಯನ ಪಟ್ಟಣ, ಗ್ರಾಮಗಳಿಗೆ ಪ್ರವಾಹದ ಪರಿಸ್ಥಿತಿ ಎದುರಾಗಿದೆ.

ಕಾವೇರಿ ನದಿ ನೀರು ಹೆಚ್ಚಾದರೆ ಕರಡಿಗೋಡು, ನೆಲ್ಯಹುದಿಕೇರಿ ಕುಶಾಲನಗರ ಸೇರಿ ಹಲವೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗುತ್ತವೆ. ಇನ್ನು ನಾಲ್ಕೈದು ಅಡಿ ನೀರು ಜಾಸ್ತಿಯಾದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಲಿದೆ. ಪೂರ್ವ ಮುಂಗಾರಿಗೆ ಈ ಸ್ಥಿತಿಯಾದರೆ ಮುಂಗಾರಿಗೆ ಕಥೆ ಏನು ಎಂದು ಜಿಲ್ಲೆಯ ಜನರು ಆತಂಕದಲ್ಲಿದ್ದಾರೆ.

ಇದೀಗ ಮಳೆ ಅಬ್ಬರ ಸ್ವಲ್ಪ ಪ್ರಮಾಣದಲ್ಲಿ ತಗ್ಗಿದ್ದು, ಮಳೆ ಮತ್ತೆ ಜಾಸ್ತಿಯಾದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ ಎಂಬಂತಾಗಿದೆ.

ಮರ ಬಿದ್ದು ಕಾರು ಸ್ಕೂಟಿ ಜಖಂ : ಕೊಡಗು ಜಿಲ್ಲೆಯಾದ್ಯಂತ ಭಾರಿ ಗಾಳಿ ಮಳೆಯಾಗುತ್ತಿದ್ದು ಗಾಳಿ ಮಳೆಗೆ ಅವಾಂತರಗಳು ಸೃಷ್ಟಿಯಾಗುತ್ತಲೆ ಇದೆ. ಭಾರಿ ಗಾಳಿ ಮಳೆಗೆ ಮರವೊಂದು ಬಿದ್ದು ಸ್ಕೂಟಿ ಹಾಗೂ ಕಾರು ಜಖಂ ಗೊಂಡಿರುವ ಘಟನೆ ಮಡಿಕೇರಿ ಹೊರವಲಯದ ತಾಳತ್ಮನೆಯ ಬಳಿ ನಡೆದಿದೆ‌. ತಾಳತ್ಮನೆ ನಿವಾಸಿ ಯತೀಶ್ ರೈ ಎಂಬುವರಿಗೆ ಸೇರಿದ ಸ್ಕೂಟಿ ಹಾಗೂ ಕಾರು ಇದಾಗಿದ್ದು ಮರ ಬಿದ್ದ ಪರಿಣಾಮ ಎರಡು ವಾಹನಗಳು ಸಂಪೂರ್ಣವಾಗಿ ಜಖಂ‌ಗೊಂಡಿದೆ.‌

----------------------------------------------ಜಿಲ್ಲಾಧಿಕಾರಿ ಭೇಟಿ : ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಮಳೆ ಹಾನಿ ಪ್ರದೇಶಕ್ಕೆ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅರ್ಜಿ ಗ್ರಾಮದ ಕಲ್ಲುಬಾಣೆ ಯ ಮಜೀದ್ ಅವರ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಹಸೀಲ್ದಾರ್ ಅನಂತ ಶೇಖರ್, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಫಾತಿಮಾ ಮತ್ತು ಪಂಚಾಯಿತಿ ಅಧಿಕಾರಿ ಪ್ರಮೋದ್ , ಕಂದಾಯ ನಿರೀಕ್ಷಕರಾದ ಹರೀಶ್ ಮತ್ತು ಗ್ರಾಮ ಲೆಕ್ಕಿಗರಾದ ಕಸ್ತೂರಿ ಹಾಜರಿದ್ದರು.

ಮಳೆ ವಿವರ: ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 126.79 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 0.05 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 449.84 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 325.40 ಮಿ.ಮೀ ಮಳೆಯಾಗಿತ್ತು. ಮಡಿಕೇರಿ ತಾಲೂಕಿನಲ್ಲಿ 143.30 ಮಿ.ಮೀ, ವಿರಾಜಪೇಟೆ ತಾಲೂಕಿನಲ್ಲಿ 155.30 ಮಿ.ಮೀ. ಮಳೆಯಾಗಿದೆ. ಪೊನ್ನಂಪೇಟೆ ತಾಲೂಕಿನಲ್ಲಿ 120.28 ಮಿ.ಮೀ. ಮಳೆಯಾಗಿದೆ. ಸೋಮವಾರಪೇಟೆ ತಾಲೂಕಿನಲ್ಲಿ 112.65 ಮಿ.ಮೀ ಹಾಗೂ ಕುಶಾಲನಗರ ತಾಲೂಕಿನಲ್ಲಿ 102.40 ಮಿ.ಮೀ. ಮಳೆಯಾಗಿದೆ.

ಮಡಿಕೇರಿ ಕಸಬಾ 169, ನಾಪೋಕ್ಲು 162.20, ಸಂಪಾಜೆ 17, ಭಾಗಮಂಡಲ 225, ವಿರಾಜಪೇಟೆ 157.60, ಅಮ್ಮತ್ತಿ 153, ಹುದಿಕೇರಿ 138, ಶ್ರೀಮಂಗಲ 153, ಪೊನ್ನಂಪೇಟೆ 111, ಬಾಳೆಲೆ 79.12, ಸೋಮವಾರಪೇಟೆ 116, ಶನಿವಾರಸಂತೆ 100, ಶಾಂತಳ್ಳಿ 154, ಕೊಡ್ಲಿಪೇಟೆ 80.60, ಕುಶಾಲನಗರ 76.60, ಸುಂಟಿಕೊಪ್ಪ 128.20 ಮಿ.ಮೀ.ಮಳೆಯಾಗಿದೆ.

----------------------------------------

ಹಾರಂಗಿ ಜಲಾಶಯದ ನೀರಿನ ಮಟ್ಟ

ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2834.70 ಅಡಿಗಳು. ಕಳೆದ ವರ್ಷ ಇದೇ ದಿನ 2824.11 ಅಡಿಗಳು. ಹಾರಂಗಿಯಲ್ಲಿ ಬಿದ್ದ ಮಳೆ 63.60 ಮಿ.ಮೀ., ಇಂದಿನ ನೀರಿನ ಒಳಹರಿವು 1693 ಕ್ಯುಸೆಕ್, ಇಂದಿನ ನೀರಿನ ಹೊರ ಹರಿವು ನದಿಗೆ 100 ಕ್ಯುಸೆಕ್. ಕಳೆದ ವರ್ಷ ಇದೇ ದಿನ ನೀರಿನ ಹೊರ ಹರಿವು ನದಿಗೆ 200 ಕ್ಯುಸೆಕ್.

---------------------------------------------ಮಳೆ ಹಾನಿ ಪ್ರದೇಶಕ್ಕೆ ಶಾಸಕ ಮಂತರ್ ಭೇಟಿ

ಕನ್ನಡಪ್ರಭ ವಾರ್ತೆ ಮಡಿಕೇರಿ

ಮಳೆ ಹಾನಿ ಪ್ರದೇಶಕ್ಕೆ ಶಾಸಕ ಡಾ. ಮಂತರ್ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸೋಮವಾರಪೇಟೆಯ ಚೌಡ್ಲು ಗ್ರಾಮ ಪಂಚಾಯಿತಿ ಹಾಗೂ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಳೆಯಿಂದ ವಿದ್ಯುತ್ ಕಂಬ ಹಾನಿಗೀಡಾದ ಪ್ರದೇಶಕ್ಕೆ ಶಾಸಕರಾದ ಡಾ.ಮಂತರ್ ಗೌಡ ಭೇಟಿ ನೀಡಿ ಇಲಾಖೆಯ ಅಧಿಕಾರಿಗಳೊಂದಿಗೆ ಸಮಸ್ಯೆ ಪರಿಹಾರ ಕ್ರಮಕ್ಕೆ ಸೂಚನೆ ನೀಡಿದರು.

ಕುಶಾಲನಗರ ತಾಲೂಕಿನ 7 ನೇ ಹೊಸಕೋಟೆ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಉರುಗುಪ್ಪ 3ನೇ ವಾರ್ಡ್ ನ ಮೊಹಮದ್ ಅವರ ಮನೆಯ ಮೇಲೆ ಮರ ಬಿದ್ದು ಹಾನಿಯಾದ ಸ್ಥಳಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಕುಶಾಲನಗರ ತಹಸೀಲ್ದಾರ್ ಹಾಗೂ ಪಂಚಾಯಿತಿ ಪಿಡಿಒ ಹಾಗೂ ಅರಣ್ಯ ಅಧಿಕಾರಿಗಳು, ಸ್ಥಳೀಯರು ಮುಖಂಡರು ಉಪಸ್ಥಿತರಿದ್ದರು.

ಕುಶಾಲನಗರ ತಾಲೂಕಿನ ವಾಲ್ನೂರು ತ್ಯಾಗತೂರ್ ನ ಅತ್ತಿಮಂಗಲ ಜಂಕ್ಷನ್ ನಲ್ಲಿ ರಸ್ತೆಗೆ ಭಾರಿ ಗಾತ್ರದ ಮರ ಬಿದ್ದು ಹಾನಿಯಾದ ಹಿನ್ನೆಲೆಯಲ್ಲಿ ಶಾಸಕ ಡಾ.ಮಂತರ್ ಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಸ್ಥಳದಲ್ಲಿ ಹಾಜರಿದ್ದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ಸೂಚನೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ