ಪಿ ಶಾಂತಕುಮಾರ್
ಕನ್ನಡಪ್ರಭ ವಾರ್ತೆ ಅರಸೀಕೆರೆರಾಜ್ಯದ ಬಹುತೇಕ ಪ್ರದೇಶಗಳಲ್ಲಿ ಮಳೆ ನಿಂತರೆ ಸಾಕು ಎಂದು ದೇವರಿಗೆ ಮೊರೆ ಇಡುತ್ತಿದ್ದರೆ ತಾಲೂಕಿನಲ್ಲಿ ಜೂನ್ ಹಾಗೂ ಜುಲೈ ತಿಂಗಳಲ್ಲಿ ಮಳೆ ಬಾರದೆ ಸಾಲ ಮಾಡಿದ ಬೀಜ ಗೊಬ್ಬರದಿಂದ ಬಿತ್ತನೆ ಮಾಡಿದ್ದ ರೈತರು ಈಗ ಬೆಳೆ ಕಳೆದುಕೊಳ್ಳುವ ಸಂಕಷ್ಟವನ್ನು ಎದುರಿಸುತ್ತಿದ್ದಾರೆ
ಮುಂಗಾರು ಹಂಗಾಮಿನಲ್ಲಿ ಹತ್ತು ಸಾವಿರ ಹೆಕ್ಟೇರ್ ಪ್ರದೇಶದ ಭೂಮಿಯಲ್ಲಿ ಬಿತ್ತನೆ ಮಾಡಲಾಗಿದ್ದ ಅಲಸಂದೆ, ಮುಸುಕಿನ ಜೋಳ ಹಾಗೂ ಉದ್ದು ಜೂನ್ ಹಾಗೂ ಜುಲೈ ತಿಂಗಳಲ್ಲಿ ಮಳೆ ಬಾರದೆ ಸೊರಗಿದ್ದು ಬೀಜ ಕಟ್ಟುವ ಹಂತದಲ್ಲಿ ನಷ್ಟವಾಗುವ ಸಂಭವವಿದೆ ಎಂದು ಅಂದಾಜಿಸಲಾಗುತ್ತಿದೆಬೇಡವೆಂದಾಗ ಬಂದು ಕೆಡಿಸುವ ಮಳೆ ಬೇಕು ಎಂದಾಗ ಬರದೆ ಸತಾಯಿಸುತ್ತಿದೆ ಎಂಬುದು ಇಲ್ಲಿನ ರೈತರಿಗೆ ನೋವಿನ ಸಂಗತಿಯಾಗಿದೆ. ಜನವರಿಯಿಂದ ಜುಲೈ ವರೆಗೆ ವಾಡಿಕೆಯಂತೆ 220 ಮಿ.ಮೀ. ಮಳೆ ಯಾಗಬೇಕಾಗಿತ್ತು. ಈಗ 307 ಮಿ.ಮೀ. ಮೀಟರ್ ಮಳೆಯಾಗಿದ್ದು ಶೇಕಡ 30ರಷ್ಟು ಹೆಚ್ಚಿಗೆ ಮಳೆಯಾಗಿದೆ. ಆದರೆ ಜೂನ್‌ನಲ್ಲಿ 56 ಮಿ.ಮೀ. ಮಳೆ ಬೇಕಾಗಿತ್ತು. ಅದರೆ 22 ಮಿ.ಮೀ. ಮಳೆ ಬಂದಿದೆ. ಶೇ.62ರಷ್ಟು ಕೂರತೆಯಾಗಿದ್ದು ಜುಲೈನಲ್ಲಿ 9 ಮಿ.ಮೀ. ಮಳೆ ಆಗಬೇಕಾಗಿತ್ತು. ಈಗ 6 ಮಿ.ಮೀ. ಮಳೆ ಬಂದಿದ್ದು 3ರಷ್ಟು ಕೂರತೆ ಎದುರಿಸುತ್ತಿದೆ. ಈ ಜುಲೈ ತಿಂಗಳಲ್ಲಿ ಉತ್ತಮ ಮಳೆಯಾಗದಿದ್ದಲ್ಲಿ ಈಗಾಗಲೇ ಕಾಳು ಕಟ್ಟುವ ಹಂತದಲ್ಲಿರುವ ಅಲಸಂದೆ, ಮುದುಕಿನ ಜೋಳ ಹಾಗೂ ಉದ್ದು ಇಳುವರಿ ಕುಂಠಿತವಾಗಿ ಬೆಳೆ ನಷ್ಟವಾಗುವ ಸಂಭವವಿದೆ ಎಂದು ಅಂದಾಜಿಸಲಾಗುತ್ತದೆ.
ಪ್ರಸ್ತುತ ಜಮೀನನ್ನು ಹದ ಮಾಡಿಕೊಂಡಿದ್ದು ಸುಮಾರು 45,000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗುವ ಸಾಧ್ಯತೆ ಇದೆ. ಈಗಾಗಲೇ ಕೃಷಿ ಇಲಾಖೆಯ ಮೂಲಕ 700 ಕ್ವಿಂಟಾಲ್ ಬಿತ್ತನೆ ಬೀಜಗಳನ್ನು ರೈತರಿಗೆ ವಿತರಣೆ ಮಾಡಲಾಗಿದೆ. ಬಿತ್ತನೆ ಬೀಜ ವಿತರಣಾ ಕಾರ್ಯ ರೈತ ಸಂಪರ್ಕ ಕೇಂದ್ರಗಳಲ್ಲಿ ಈಗಲೂ ಸಹ ಪ್ರಗತಿಯಲ್ಲಿದೆ.ಮುಂಗಾರು ಹಂಗಾಮಿನಲ್ಲಿ ಗಂಡಸಿ, ಕಸಬಾ ಹಾಗೂ ಜಾವಗಲ್ ಹೋಬಳಿ ಗಳಲ್ಲಿ 3200 ಹೇಕ್ಟರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಮೆಕ್ಕೆಜೋಳಕ್ಕೆ ಬಿಳಿ ಸುಳಿ ರೋಗವಾದ ಕಂಡು ಬಂದಿರುವುದರಿಂದ ಇಲಾಖೆ ಮೂಲಕ ಗ್ರಾಮ ಮಟ್ಟದಲ್ಲಿ ಮುಸುಕಿನ ಬೆಳೆ ರೋಗದ ಬಗ್ಗೆ ಮಾಹಿತಿ ನೀಡಿ ಅದಕ್ಕೆ ಬೇಕಾದ ಔಷಧಗಳು ಲಭ್ಯವಿದ್ದು ರೈತರು ಅದನ್ನು ಪಡೆದು ಸಿಂಪಡಿಸಬೇಕೆಂದು ಮನವಿ ಮಾಡಿದ್ದಾರೆ.
ಪದೇ ಪದೇ ಮುಸುಕಿನ ಜೋಳವನ್ನು ಬೆಳೆಯುತ್ತಿರುವುದರಿಂದ ಈ ಕಾಯಿಲೆ ಕಾಣಿಸಿಕೊಂಡಿದ್ದು ಅದಕ್ಕಾಗಿ ಪರಿವರ್ತನೆ ಬೇಳೆ ಬೆಳೆಬೇಕೆಂದು ತಿಳುವಳಿಕೆ ನೀಡಲಾಗಿದೆ ಈ ಜುಲೈ ತಿಂಗಳಲ್ಲಿ ಮಳೆಯಾಗದೆ ಬಿತ್ತನೆಗೆ ತಡವಾದರೆ ಅಲ್ಪಾವಧಿ ರಾಗಿ ಬೆಳೆಯಲು ರೈತ ಸಂಪರ್ಕ ಕೇಂದ್ರಗಳಲ್ಲಿ ವಿತರಣೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಇಲಾಖೆ ಸಹಾಯಕ ನಿರ್ದೇಶಕ ಶಿವಕುಮಾರ್ ತಿಳಿಸಿದ್ದಾರೆ.